Hassan Suicide : ಪತಿ ಹಾಗೂ ಅತ್ತೆಯಿಂದ ಕಿರುಕುಳಕ್ಕೆ ಮನನೊಂದು ಗೃಹಿಣಿಯೊಬ್ಬರು ಮಗುವಿನೊಂದಿಗೆ ನದಿಗೆ ಹಾರಿ ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಹಾಸನದಲ್ಲಿ ನಡೆದಿದೆ.

ಪತಿ ಮತ್ತು ಅತ್ತೆಯಿಂದ ಕಿರುಕುಳಕ್ಕೆ (Harassement)ಮನನೊಂದು ಮಹಿಳೆಯೊಬ್ಬರು ತಮ್ಮ ಒಂದೂವರೆ ವರ್ಷದ ಮಗುವಿನೊಂದಿಗೆ ನದಿಗೆ ಹಾರಿ ಆತ್ಮಹತ್ಯೆ ಮಾಡಿಕೊಂಡಿರುವ ಹೃದಯವಿದ್ರಾವಕ ಘಟನೆ ಹಾಸನ (Hassan) ಜಿಲ್ಲೆ ಅರಕಲಗೂಡು (Arakalgud) ತಾಲೂಕಿನ ರಾಮನಾಥಪುರ ಬಳಿ ನಡೆದಿದೆ. ಆತ್ಮಹತ್ಯೆ ಮಾಡಿಕೊಂಡ ಮಹಿಳೆಯನ್ನು ಮಹಾದೇವಿ (29) ಎಂದು ಗುರುತಿಸಲಾಗಿದೆ.
ಎರಡನೇ ಮದುವೆಯಾಗಿದ್ದ ಮಹಾದೇವಿ
ಸಾಲಿಗ್ರಾಮ ತಾಲೂಕಿನ ಕರ್ಪೂರವಳ್ಳಿ ಮೂಲದ ಮಹಾದೇವಿ, ಮೂರು ವರ್ಷಗಳ ಹಿಂದೆ ಸೀಬಿಹಳ್ಳಿ ಗ್ರಾಮದ ಕುಮಾರ್ ಎಂಬುವವರ ಜೊತೆ ಎರಡನೇ ಮದುವೆಯಾಗಿದ್ದರು. ಮದುವೆಯ ಸಮಯದಲ್ಲಿ ಕುಟುಂಬಸ್ಥರು 100 ಗ್ರಾಂ ಚಿನ್ನವನ್ನು ವರದಕ್ಷಿಣೆ ರೂಪದಲ್ಲಿ ನೀಡಿದ್ದರು.
ಕಿರುಕುಳ ತಾಳಲಾರದೆ ತವರಿಗೆ ಸೇರಿದ್ದ ಮಹಾದೇವಿ
ಆದರೆ ಕಳೆದ ಕೆಲ ತಿಂಗಳುಗಳಿಂದ ಪತಿ ಕುಮಾರ್ ಪತ್ನಿಯ ಮೇಲೆ ಅನುಮಾನ ವ್ಯಕ್ತಪಡಿಸಿ ಅವಾಚ್ಯ ಶಬ್ದಗಳಿಂದ ನಿಂದನೆ, ಅಶ್ಲೀಲ ಸಂದೇಶಗಳು ಸೇರಿದಂತೆ ಮಾನಸಿಕ ಕಿರುಕುಳ ನೀಡುತ್ತಿದ್ದಂತೆ ತಿಳಿದುಬಂದಿದೆ.
ಕಿರುಕುಳ ತಾಳಲಾರದೆ ಸುಮಾರು ಹದಿನೈದು ದಿನಗಳ ಹಿಂದೆ ಮಹಾದೇವಿ ತವರು ಮನೆ ಸೇರಿದ್ದರು. ಆದರೂ ಕುಮಾರ್ ಕಿರುಕುಳ ನಿಲ್ಲಿಸದೇ ತವರುವರಿಗೂ ಜೀವ ಬೆದರಿಕೆ ಹಾಕುತ್ತಿದ್ದಾನೆಂದು ಆರೋಪಿಸಲಾಗಿದೆ.
ಇದನ್ನು ಓದಿ : Dina Bhavishya : ದಿನ ಭವಿಷ್ಯ 18 ನವೆಂಬರ್ 2025
ಡೆಟ್ನೋಟ್ ಬರೆದಿಟ್ಟು ಆತ್ಮಹತ್ಯೆ
ಮೂಲಗಳ ಪ್ರಕಾರ, ಕಳೆದ ಗುರುವಾರ ಹಾಸನ ಬಸ್ ನಿಲ್ದಾಣದಲ್ಲೇ ಕುಮಾರ್ ಮಾಡಿದ ನಿಂದನೆಗೆ ಬೇಸತ್ತ ಮಹಾದೇವಿ ತಕ್ಷಣವೇ ಹಾಸನ ಮಹಿಳಾ ಪೊಲೀಸ್ ಠಾಣೆಗೆ ತೆರಳಿ ದೂರು ನೀಡಿದ್ದರು.
ಈ ಬಳಿಕ ಆತ್ಮಹತ್ಯೆಗೆ ಮುನ್ನ ಡೆತ್ ನೋಟ್ ಬರೆದು, ತಮ್ಮ ಸ್ಥಿತಿಯನ್ನು ವಿವರಿಸುವ ವೀಡಿಯೋ ಒಂದನ್ನೂ ದಾಖಲಿಸಿದ್ದರು.
ನನ್ನ ಸಾವಿಗೆ ಗಂಡ ಮತ್ತು ಅತ್ತೆಯೇ ಕಾರಣ
ವೀಡಿಯೋದಲ್ಲಿ ಅವರು, “ಪತಿಯ ನಿಂದನೆ ಸಹಿಸಲು ಆಗುತ್ತಿಲ್ಲ… ಮೂರು ವರ್ಷಗಳಿಂದ ನರಕ ಕೊಟ್ಟಿದ್ದಾನೆ… ನನ್ನ ಸಾವಿಗೆ ಗಂಡ ಮತ್ತು ಅತ್ತೆಯೇ ಕಾರಣ… ನನ್ನಿಂದ ತಮ್ಮ-ಅಪ್ಪ-ಅಮ್ಮರಿಗೆ ತೊಂದರೆ ಆಗಬಾರದೆಂದು ಈ ತೀರ್ಮಾನ…”ಎಂದು ಅಳುತ್ತಾ ಹೇಳಿದ್ದಾರೆಂದು ಕುಟುಂಬಸ್ಥರು ತಿಳಿಸಿದ್ದಾರೆ.
ಸೋಮವಾರ ಶವ ಪತ್ತೆ
ಶುಕ್ರವಾರ ರಾಮನಾಥಪುರದ ಬಳಿ ಕಾವೇರಿ ನದಿಗೆ ಮಗುವಿನೊಂದಿಗೆ ಜಿಗಿದಿದ್ದ ಮಹಾದೇವಿ ಅವರ ಶವ ಸೋಮವಾರ ಬೆಟ್ಟಸೋಗೆ ಬಳಿಯಲ್ಲಿ ಪತ್ತೆಯಾಗಿದೆ.
ಆದರೆ ಮಗುವಿನ ಮೃತದೇಹ ಇನ್ನೂ ಪತ್ತೆಯಾಗಿಲ್ಲ. ಹುಡುಕಾಟ ಕಾರ್ಯ ಮುಂದುವರೆದಿದೆ.
ತನಿಖೆ ಮುಂದುವರಿಕೆ
ಇನ್ನು ಘಟನಾ ಸ್ಥಳಕ್ಕೆ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದು, ಮಹಾದೇವಿಯ ಆತ್ಮಹತ್ಯೆಗೆ ಕಾರಣರಾದವರ ವಿರುದ್ಧ ಕಾನೂನು ಕ್ರಮ ಕೈಗೊಳ್ಳಲು ತನಿಖೆ ಮುಂದುವರಿಸಿದೆ.
ಇದನ್ನು ನೋಡಿ : AMANI KERE PARK ಎದುರು ಗುಂಡಿ ಕಾಟ – ನಿತ್ಯ ಜೀವಭಯದಲ್ಲಿ ಸವಾರರ ಸಂಚಾರ




