Actor Harish Rai : ಉಡುಪಿಯ ಅಂಬಲಪಾಡಿಯಲ್ಲಿ ನಟ ಹರೀಶ್ ರಾಯ್ ಅವರ ಅಂತ್ಯಸಂಸ್ಕಾರ ನೆರವೇರಿತು.

Actor Harish Rai : KGF ಚಾಚಾ ಖ್ಯಾತಿಯ ನಟ ಹರೀಶ್ ರಾಯ್ (Harish Rai) ಅವರ ಅಂತ್ಯಕ್ರಿಯೆ ಇಂದು ಉಡುಪಿಯ ಅಂಬಲಪಾಡಿಯಲ್ಲಿ ನೆರವೇರಿತು. ಕನ್ನಡ ಚಿತ್ರರಂಗದಲ್ಲಿ ಪ್ರೀತಿಸಲ್ಪಟ್ಟ ಕಲಾವಿದರ ಅಗಲಿಕೆಯಿಂದ ಅಭಿಮಾನಿಗಳು ದುಃಖಿತರಾಗಿದ್ದಾರೆ.
ಕಿಡ್ವಾಯಿ ಆಸ್ಪತ್ರೆಯಲ್ಲಿ ನಿಧನ
2022ರಲ್ಲಿ ಹರೀಶ್ ರಾಯ್ ಅವರಿಗೆ ಕ್ಯಾನ್ಸರ್ ತಗುಲಿತ್ತು. ಕಳೆದ ಕೆಲ ತಿಂಗಳುಗಳಲ್ಲಿ ರೋಗ ಉಲ್ಬಣಗೊಂಡು ಅವರು ಬೆಂಗಳೂರು ಕಿಡ್ವಾಯಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದರು. ಆದರೆ, ಗುರುವಾರ ಬೆಳಗ್ಗೆ 11 ಗಂಟೆ ಸುಮಾರಿಗೆ ಅವರು ಕೊನೆಯುಸಿರೆಳೆದರು.
ಹುಟ್ಟೂರಲ್ಲಿ ಅಂತ್ಯ ಸಂಸ್ಕಾರ
ಥೈರಾಯ್ಡ್ ಕ್ಯಾನ್ಸರ್ನಿಂದ ಅಕಾಲಿಕವಾಗಿ ಪ್ರಾಣ ಕಳೆದುಕೊಂಡ ಹರೀಶ್ ರಾಯ್ ಅವರ ಅಂತ್ಯ ಸಂಸ್ಕಾರವು ಹುಟ್ಟೂರಾದ ಉಡುಪಿಯ ಅಂಬಲಪಾಡಿಯಲ್ಲಿ ನೆರವೇರಿತು. ತುಳು ಶಿವಳ್ಳಿ ಮಾಧ್ವ ಬ್ರಾಹ್ಮಣ ಸಂಪ್ರದಾಯದಂತೆ ವಿಧಿ-ವಿಧಾನಗಳು ಜರುಗಿದವು.
ಇದನ್ನು ಓದಿ : Health Tips : ಪ್ರತಿದಿನ ಒಂದು ಕಪ್ ಕಾಫಿ ಕುಡಿದರೆ ಈ ಸಮಸ್ಯೆ ಎಂದಿಗೂ ಬರುವುದಿಲ್ಲ!
ಕುಟುಂಬಸ್ಥರು ಮತ್ತು ಅಭಿಮಾನಿಗಳ ಕಣ್ಣೀರು
ಗುರುವಾರ ರಾತ್ರಿ ಬೆಂಗಳೂರಿನಿಂದ ಪಾರ್ಥಿವ ಶರೀರವನ್ನು ಹುಟ್ಟೂರಿಗೆ ತರಲಾಯಿತು. ಅಂಬಲಪಾಡಿಯ ಮೂಲ ಮನೆಯಲ್ಲಿ ಅಂತಿಮ ವಿಧಿ ವಿಧಾನಗಳು ನೆರವೇರಿದವು. ಆಪ್ತರು, ಕುಟುಂಬ ಸದಸ್ಯರು ಹಾಗೂ ಅಭಿಮಾನಿಗಳು ಭಾಗಿಯಾಗಿ ಅಂತಿಮ ದರ್ಶನ ಪಡೆದರು.
ರುದ್ರಭೂಮಿಯಲ್ಲಿ ಅಂತಿಮ ವಿಧಿ
ಅಂತಿಮ ದರ್ಶನ ಮತ್ತು ವಿಧಿ-ವಿಧಾನಗಳ ಬಳಿಕ ಪಾರ್ಥಿವ ಶರೀರವನ್ನು ಉಡುಪಿಯ ಬೀಡಿನಗುಡ್ಡೆ ಹಿಂದೂ ರುದ್ರಭೂಮಿಗೆ ಕೊಂಡೊಯ್ಯಲಾಯಿತು. ಅಲ್ಲಿ ನಟನ ಸಹೋದರ ಸತೀಶ್, ಪುತ್ರರು ರೋನಿತ್ ರಾಯ್ ಮತ್ತು ರೋಷನ್ ರಾಯ್ ಅಗ್ನಿಸ್ಪರ್ಶ ಮಾಡಿದರು. ಅಲ್ಲಿ ನೆರೆದಿದ್ದವರು ಕಣ್ಣೀರಾದರು.
ಚಿತ್ರರಂಗದ ಸಂತಾಪ
ಇನ್ನು ಹರೀಶ್ ರಾಯ್ ಅವರ ಅಗಲಿಕೆಯಿಂದ ಕನ್ನಡ ಚಿತ್ರರಂಗದಲ್ಲಿ ಶೋಕದ ವಾತಾವರಣ ನಿರ್ಮಾಣವಾಗಿದೆ. ‘ಕೆಜಿಎಫ್’ ಚಿತ್ರದಲ್ಲಿನ ಚಾಚಾ ಪಾತ್ರ ಅವರಿಗೊಂದು ವಿಶಿಷ್ಟ ಗುರುತನ್ನು ನೀಡಿತ್ತು.
ಇದನ್ನು ನೋಡಿ : ಹತ್ತರಗಿ ಟೋಲ್ ಗೇಟ್ ಬಳಿ ಕಲ್ಲು ತೂರಾಟ: ಪರಿಸ್ಥಿತಿ ಉದ್ವಿಗ್ನ




