
ತುಮಕೂರಿನ ಕಾಂಗ್ರೆಸ್ ನಾಯಕರಲ್ಲಿ ಬಣ ಬಡಿದಾಟ ಬಳಿಕ ಇದೀಗ ತುಮಕೂರು ಬಿಜೆಪಿಯಲ್ಲಿ ಮುಸುಕಿನ ಗುದ್ದಾಟ ಶುರುವಾಗಿದ್ದು, ತುಮಕೂರು ಬಿಜೆಪಿಯಲ್ಲಿ ಈಗ ಭಿನ್ನರಾಗ ಕೇಳಿ ಬರ್ತಿದೆ. ವಿ,ಸೋಮಣ್ಣ ತುಮಕೂರು ಲೋಕಸಭಾ ಚುನಾವಣೆಗೆ ಸ್ಪರ್ಧಿಸಿ, ಗೆದ್ದು ಸಚಿವರಾಗಿ ಆಯ್ಕೆ ಆಗುವವರೆಗೂ ತುಮಕೂರು ಬಿಜೆಪಿಯಲ್ಲಿ ಎಲ್ಲವೂ ಸರಿಯಾಗಿಯೇ ಇತ್ತು. ಆದ್ರೀಗ ಬಿಜೆಪಿ ನಾಯಕರಲ್ಲಿ ಭಿನ್ನಮತ ಶುರುವಾಗಿದೆ, ಜೊತೆಗೆ ಬಿಜೆಪಿ ನಾಯಕರಲ್ಲಿನ ಅಸಮಾಧಾನ ಮೇಲ್ನೋಟಕ್ಕೆ ಸ್ಫೋಟಗೊಂಡಂತೆ ಕಾಣಿಸುತ್ತಿದೆ. ಅದೆಷ್ಟರ ಮಟ್ಟಿಗೆ ಅಂದ್ರೆ ಒಬ್ಬರ ಮುಖವನ್ನು ಮತ್ತೊಬ್ಬರು ನೋಡಿಕೊಳ್ಳೋದಷ್ಟು.. ಇನ್ನು ಈ ಹಿಂದೆಯೂ ತುಮಕೂರು ಬಿಜೆಪಿ ನಾಯಕರಲ್ಲಿ ಭಿನ್ನಮತ ಇತ್ತು. ಆದ್ರೀಗ ನಾಯಕರಲ್ಲಿ ಬಣ ಬಡಿದಾಟ ತಾರಕ್ಕೇರಿದ್ದು, ಇದೀಗ ಬೀದಿಗೆ ಬಂದಂತೆ ಕಾಣಿಸುತ್ತಿದೆ.
ಇನ್ನು ಸೆಫ್ಟೆಂಬರ್ 17ರಂದು ಪ್ರಧಾನಿ ಮೋದಿ ಅವರ ಹುಟ್ಟುಹಬ್ಬವನ್ನು ಎಲ್ಲಾ ಜಿಲ್ಲೆಗಳಲ್ಲೂ ಬಿಜೆಪಿ ನಾಯಕರು ಒಟ್ಟಾಗಿ ಆಚರಿಸಿದ್ರೆ, ತುಮಕೂರಿನಲ್ಲಿ ಮಾತ್ರ ಬಿಜೆಪಿ ನಾಯಕರು ಪ್ರತ್ಯೇಕ ಕಾರ್ಯಕ್ರಮಗಳನ್ನು ಹಮ್ಮಿಕೊಂಡಿದ್ದು, ಈ ಮೂಲಕ ಬಿಜೆಪಿಯಲ್ಲಿನ ಬಣ ಬಡಿದಾಟ ಬೀದಿಗೆ ಬಂದಿದೆ. ಮೋದಿ ಹುಟ್ಟುಹಬ್ಬದಂದು ಬಿಜೆಪಿ ಪಕ್ಷದಿಂದ ನಗರದ ವಿಶ್ವವಿದ್ಯಾಲಯ ಎದುರು ರಕ್ತದಾನ ಶಿಬಿರ ಹಮ್ಮಿಕೊಳ್ಳಲಾಗಿತ್ತು. ಕಾರ್ಯಕ್ರಮಕ್ಕೆ ತುಮಕೂರು ಬಿಜೆಪಿ ನಾಯಕರೆಲ್ಲರೂ ಒಟ್ಟಾಗಿ ಸೇರ್ತಾರೆ ಅನ್ನಲಾಗಿತ್ತು. ಆದ್ರೆ ಆ ಕಾರ್ಯಕ್ರಮದಲ್ಲಿ ಶಾಸಕ ಬಿ,ಸುರೇಶ್ ಗೌಡ, ಜ್ಯೋತಿ ಗಣೇಶ್, ಜಿಲ್ಲಾ ಅಧ್ಯಕ್ಷ ರವಿ ಹೆಬ್ಬಾಕ, ನಗರಾಧ್ಯಕ್ಷ ಧನುಷ್, ಬಿಜೆಪಿ ಯುವ ಮೋರ್ಚಾ ಅಧ್ಯಕ್ಷ ಚೇತನ್, ಸೇರಿ ನೂರಾರು ಕಾರ್ಯಕರ್ತರು ಭಾಗಿಯಾಗಿದ್ರು. ಆದ್ರೆ ಈ ಕಾರ್ಯಕ್ರಮದಲ್ಲಿ ಕೇಂದ್ರ ಸಚಿವ ಸೋಮಣ್ಣ ಭಾಗಿಯಾಗಿದಲೇ ಪ್ರತ್ಯೇಕವಾಗಿ ಕಾರ್ಯಕ್ರಮ ಮಾಡಿದ್ದು, ತುಮಕೂರು ಬಿಜೆಪಿ ವಲಯದಲ್ಲಿ ಎಲ್ಲವೂ ಸರಿಯಿಲ್ಲ ಎಂಬುದು ಮೇಲ್ನೋಟಕ್ಕೆ ಸಾಬೀತಾಗಿತ್ತು.

ಇತ್ತ ಕೇಂದ್ರ ಸಚಿವ ವಿ. ಸೋಮಣ್ಣ ಬಿಜೆಪಿ ಶಾಸಕರ ಜೊತೆ ಮೋದಿ ಜನ್ಮದಿನವನ್ನ ಆಚರಿಸದೇ ಪ್ರತ್ಯೇಕವಾಗಿ ಕಾರ್ಯಕ್ರಮ ಮಾಡಿದ್ದಾರೆ. ನಗರದ ಕ್ಯಾತ್ಸಂದ್ರದ ಸರ್ಕಾರಿ ಶಾಲೆಯಲ್ಲಿ ಮೋದಿ ಹುಟ್ಟುಹಬ್ಬದ ಅಂಗವಾಗಿ ಶಾಲಾ ಮಕ್ಕಳಿಗೆ ನೋಟ್ ಬುಕ್ ವಿತರಣೆ ಮಾಡಿದ್ದಲ್ಲದೇ, ಸಂಸದರ ಭವನದಲ್ಲಿ ಆರೋಗ್ಯ ಶಿಬಿರ ಏರ್ಪಡಿಸುವ ಮೂಲಕ ಮೋದಿ ಜನ್ಮ ದಿನಾಚರಣೆ ಆಚರಣೆ ಮಾಡಿದ್ರು. ಈ ವೇಳೆ ಸೋಮಣ್ಣಗೆ ಶಾಸಕ M T ಕೃಷ್ಣಪ್ಪ, ಗುಬ್ಬಿ ಬಿಜೆಪಿ ಮುಖಂಡ ದಿಲೀಪ್ ಕುಮಾರ್, ಮಾಜಿ ಸಚಿವ ಬಸವರಾಜು, ಚಿದಾನಂದ್ ಮಾತ್ರ ಸಾಥ್ ನೀಡಿದ್ರೆ, ಉಳಿದ ಜಿಲ್ಲೆಯ ಬಿಜೆಪಿ ನಾಯಕರು ಯಾರು ಭಾಗಿಗದೇ ಇರೋದು ಹಲವು ಅನುಮಾನಗಳಿಗೆ ದಾರಿ ಮಾಡಿಕೊಟ್ಟಿದೆ. ಅಲ್ದೇ ನಾಯಕರ ಬಣ ಬಡಿದಾಟದಿಂದ ಕಾರ್ಯಕರ್ತರಲ್ಲಿ ಗೊಂದಲ ಸೃಷ್ಟಿಯಾಗುತ್ತಿದೆ. ಇದೇ ರೀತಿ ಬೆಳವಣಿಗೆ ಮುಂದುವರೆದ್ರೆ ಮುಂದಿನ ದಿನಗಳಲ್ಲಿ ಬಿಜೆಪಿಯ ಕಾರ್ಯಕರ್ತರು ಹರಿದು ಹಂಚಿ ಹೋಗಲಿದ್ದಾರೆ.
ಇನ್ನು ಮೋದಿ ಹುಟ್ಟುಹಬ್ಬದ ಅಂಗವಾಗಿ ಕಾರ್ಯಕ್ರಮದ ಪ್ರಚಾರದ ಫ್ಕೆಕ್ಸ್ಗಳಲ್ಲಿ ಜಿಲ್ಲಾ ಬಿಜೆಪಿ ಶಾಸಕರು, ಅಧ್ಯಕ್ಷರ ಹೆಸರು, ಭಾವಚಿತ್ರ ಇಲ್ಲದಿರುವುದು ನಿಷ್ಠಾವಂತ ಕಾರ್ಯಕರ್ತರ ಸಿಟ್ಟು ನೆತ್ತಿಗೇರುವಂತೆ ಮಾಡಿತ್ತು. ಈ ಎಲ್ಲಾ ಬೆಳವಣಿಗೆಯನ್ನು ನೋಡಿದ್ರೆ ಬಿಜೆಪಿಯಲ್ಲಿ ಭಿನ್ನರಾಗ ಎದ್ದಿರುವುದು ಕನ್ಫರ್ಮ್ ಎಂಬಂತಾಗಿದೆ. ಮುಂದಿನ ದಿನಗಳಲ್ಲಿ ಬಿಜೆಪಿಯಲ್ಲಿ ಬಣ ಬಡಿದಾಟ ದೊಡ್ಡ ಮಟ್ಟಕ್ಕೆ ತಲುಪುತ್ತೋ ಅಥವಾ ಹೈಕಮಾಂಡ್ ಮಧ್ಯಸ್ಥಿಕೆ ವಹಿಸಿ ಭಿನ್ನಮತವನ್ನು ಶಮನ ಮಾಡುವ ಮೂಲಕ ಬಿಜೆಪಿ ನಾಯಕರಲ್ಲಿ ಒಗ್ಗಟ್ಟು ಉಂಟಾಗುತ್ತಾ ಎಂದು ಕಾದುನೋಡಬೇಕಿದೆ.




