
TUMAKURU : ತುಮಕೂರಿನ ರಿಂಗ್ ರಸ್ತೆಯಲ್ಲಿರುವ ಮೆಟ್ರಿಕ್ ನಂತರದ ಬಿಸಿಎಂ ಬಾಲಕಿಯರ ವಸತಿ ನಿಲಯದಲ್ಲಿ 12 ವಿದ್ಯಾರ್ಥಿನಿಯರು ದಿಢೀರ್ ಅಸ್ವಸ್ಥರಾಗಿದ್ದಾರೆ. ನಿನ್ನೆ ರಾತ್ರಿ ಊಟ ಸೇವನೆಯ ನಂತರ ಈ ಘಟನೆಯು ಸಂಭವಿಸಿದ್ದು, ವಿದ್ಯಾರ್ಥಿನಿಯರಿಗೆ ವಾಂತಿ ಮತ್ತು ತೀವ್ರ ಸುಸ್ತು ಕಾಣಿಸಿಕೊಂಡಿದೆ. ಅಸ್ವಸ್ಥರಾದ ವಿದ್ಯಾರ್ಥಿನಿಯರನ್ನು ತಕ್ಷಣವೇ ತುಮಕೂರು ಜಿಲ್ಲಾಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗಿದ್ದು, ಯಾವುದೇ ಪ್ರಾಣಾಪಾಯವಿಲ್ಲ ಎಂದು ವೈದ್ಯಾಧಿಕಾರಿಗಳು ತಿಳಿಸಿದ್ದಾರೆ.
ಇನ್ನು ಮಾಹಿತಿ ತಿಳಿಯುತ್ತಿದ್ದಂತೆ ಜಿಲ್ಲಾಧಿಕಾರಿ ಶುಭಕಲ್ಯಾಣ್ ತಕ್ಷಣ ಆಸ್ಪತ್ರೆಗೆ ಭೇಟಿ ನೀಡಿ ವಿದ್ಯಾರ್ಥಿನಿಯರ ಆರೋಗ್ಯ ವಿಚಾರಿಸಿದರು. ಅಲ್ಲದೆ, ಹಾಸ್ಟೆಲ್ ಗೆ ಭೇಟಿ ನೀಡಿ ಸ್ಥಳವನ್ನು ಪರಿಶೀಲಿಸಿದರು. ಇನ್ನು ಈ ಘಟನೆಗೆ ಕುಡಿಯುವ ನೀರು ಕಾರಣ ಎಂಬ ಶಂಕೆ ವ್ಯಕ್ತವಾಗಿದೆ. ಈಗಾಗಲೇ ನೀರಿನ ಮಾದರಿಯನ್ನು ಲ್ಯಾಬ್ಗೆ ಕಳುಹಿಸಲು ಡಿಸಿ ಸೂಚನೆ ನೀಡಿದ್ದಾರೆ. ಮುಂದಿನ ಮೂರು ದಿನಗಳವರೆಗೆ ಹಾಸ್ಟೆಲ್ನಲ್ಲಿ ಕ್ಯಾನ್ ನೀರನ್ನೇ ಬಳಕೆ ಮಾಡಬೇಕು ಎಂಬ ಸೂಚನೆ ನೀಡಿದ್ದಾರೆ. ಇನ್ನು ಈ ಘಟನೆಯಿಂದ ವಿದ್ಯಾರ್ಥಿನಿಯರ ಪೋಷಕರಲ್ಲಿ ಆತಂಕ ಮನೆ ಮಾಡಿದ್ದು, ಮಕ್ಕಳು ಸುರಕ್ಷಿತವಾಗಿರುವ ಕುರಿತು ಅಧಿಕಾರಿಗಳು ಭರವಸೆ ನೀಡಿದ್ದಾರೆ.




