
TUMAKURU : ತುಮಕೂರು ದಸರಾ ಮಹೋತ್ಸವದಲ್ಲಿ ಹೆಲಿ ಟೂರ್ ಸೇವೆಯನ್ನು ಕಲ್ಪಿಸಿಕೊಟ್ಟಿದೆ. ಇದು ಬಡ ಮತ್ತು ಮಧ್ಯಮ ವರ್ಗದವರ ವಿಮಾನ ಪ್ರಯಾಣದ ಕನಸು ನನಸಾಗಿಸುವ ಪ್ರಯತ್ನ ಎನ್ನಲಾಗಿತ್ತು. ಆದರೆ, 9 ನಿಮಿಷದ ಹೆಲಿಕಾಪ್ಟರ್ ಪ್ರವಾಸಕ್ಕೆ 3,900 ರೂ.ಗಳ ಟಿಕೆಟ್ ದರ ನಿಗದಿಯಾಗಿದ್ದು, ಇದು ಜನಸಾಮಾನ್ಯರ ಕನಸಿಗೆ ದುಬಾರಿ ಹೊರೆಯಾಗಿದೆ ಎಂದು ಸಾರ್ವಜನಿಕ ವಲಯದಲ್ಲಿ ಚರ್ಚೆಯಾಗುತ್ತಿದೆ.
ವಿಮಾನ, ಹೆಲಿಕಾಪ್ಟರ್ನಲ್ಲಿ ಒಮ್ಮೆಯಾದರೂ ಪ್ರಯಾಣಿಸಬೇಕೆಂಬುದು ಬಡ, ಮಧ್ಯಮ ವರ್ಗದ ಜನರ ಮಹಾ ಕನಸು. ಆ ಕನಸನ್ನು ಸಾಕಾರಗೊಳಿಸಲು ತುಮಕೂರು ಜಿಲ್ಲಾಡಳಿತ ಮುಂದಾಗಿದೆ. ದಸರಾ ಸಂಭ್ರಮದಲ್ಲಿ ಹೆಲಿ ಟೂರ್ಗೂ ಅವಕಾಶ ಕಲ್ಪಿಸಿದೆ. ಆದರೆ ಆ ಕನಸಿಗೆ ಟಿಕೆಟ್ ದರ ಬರೆ ಎಳೆದಿದೆ.
ಹತ್ತಾರು ವಿಶೇಷತೆಗಳನ್ನು ಒಳಗೊಂಡಿರುವ ತುಮಕೂರು ದಸರಾದ ಪ್ರಮುಖ ಆಕರ್ಷಣೆ ಹೆಲಿಟೂರು. ರೈತರು, ಬಡ, ಮಧ್ಯಮ ವರ್ಗದ ಜನ ತುಮಕೂರಲ್ಲೊಂದು ಹೆಲಿಕಾಪ್ಟರ್ ಪ್ರಯಾಣ ಮಾಡುವ ಉತ್ಸಾಹ, ಹುರುಪಿನಲ್ಲಿದ್ದಾರೆ. ಜಿಲ್ಲಾ ಉಸ್ತುವಾರಿ ಸಚಿವ ಡಾ.ಜಿ.ಪರಮೇಶ್ವರ್ ಮತ್ತು ಜಿಲ್ಲಾಡಳಿತ ಕಲ್ಪಿಸುತ್ತಿರುವ ಅವಕಾಶವನ್ನು ಸ್ವಾಗತಿಸುತ್ತಿದ್ದಾರೆ. ಜತೆ ಜತೆಗೆ ಟಿಕೆಟ್ ದರ ಕಡಿಮೆ ಮಾಡಿಸಬೇಕೆಂದು ಪ್ರಜಾ ಶಕ್ತಿ ಟಿವಿ ಕ್ಯಾಮೆರಾ ಮುಂದೆ ಆಗ್ರಹಿಸುತ್ತಿದ್ದಾರೆ
09 ನಿಮಿಷದ ಹೆಲಿಕಾಪ್ಟರ್ ಸಣ್ಣ ಪ್ರವಾಸಕ್ಕೆ 3,900 ರೂ. ನಿಗದಿಪಡಿಸಲಾಗಿದೆ. ಕುಟುಂಬದಲ್ಲಿ ಕನಿಷ್ಠ 4 ಜನ ಒಂದು ಸುತ್ತು ಹೋಗಿ ಬರಬೇಕೆಂದರೆ 15,600 ರೂ. ಬೇಕಾಗುತ್ತದೆ. ಇದು ಬಡ ಮತ್ತು ಮಧ್ಯಮ ವರ್ಗಕ್ಕೆ ದೊಡ್ಡಮೊತ್ತವೇ. ತಿಂಗಳ ಕುಟುಂಬ ನಿರ್ವಹಣೆಯ ಖರ್ಚನ್ನೇ ಮೀರುವ ಮೊತ್ತ. ಶ್ರೀಮಂತರು ಹಾಗೂ ಉನ್ನತ ಉದ್ಯೋಗದಲ್ಲಿರುವವರಿಗೆ ಹೆಲಿಕಾಪ್ಟರ್ ಪ್ರಯಾಣ ಹೊಸದಲ್ಲ. ತುಮಕೂರಿನ ಜನಸಾಮಾನ್ಯರು ಕೆಎಸ್ ಆರ್ ಟಿಸಿ ಬಸ್ನಲ್ಲಿ ಓಡಾಡುವಂತೆ ಅವರು ವಿಮಾನದಲ್ಲಿ ಓಡಾಡುತ್ತಿರುತ್ತಾರೆ. ಗ್ರಾಮೀಣ ಭಾಗದ ಬಡ ರೈತರು, ಮಧ್ಯಮವರ್ಗದವರಿಗೆ ಇದೊಂದು ಕನಸು. ಆದ್ದರಿಂದ ಅವರನ್ನು ಗಮನದಲ್ಲಿಟ್ಟುಕೊಂಡು ಟಿಕೆಟ್ ದರ ಪರಿಷ್ಕರಿಸಬೇಕು. ಆಗ ನೋಂದಣಿಯೂ ಹೆಚ್ಚಾಗುತ್ತದೆ, ಆಕಾಶದಲ್ಲಿ ಹಾರುವ ಬಡವರ ಕನಸೂ ನನಸಾಗುತ್ತದೆ.
ದೂರದೂರಿಗೆ ವಿಮಾನದಲ್ಲೇ ಹೋಗಬಹುದು ಹೆಲಿಟೂರ್ಗೆ ನಿಗದಿಪಡಿಸಿರುವ 3,900 ರೂ.ನಲ್ಲಿ ದೂರದೂರಿಗೆ ವಿಮಾನದಲ್ಲೇ ಹೋಗಬಹುದು. ಉದಾಹರಣೆ ಹೇಳುವುದಾದರೆ ಬೆಂಗಳೂರು -ಮುಂಬೈ 3,500-4,500 ರೂ, ಬೆಂಗಳೂರು- ದೆಹಲಿ 4000-5,500 ರೂ, ಬೆಂಗಳೂರು-ಚೆನ್ನೈ 1,500-2,500 ರೂ, ಬೆಂಗಳೂರು -ಗೋವಾ 2,000-3,000 ರೂ ಆಗಿದೆ.
ಇನ್ನು ಹೆಲಿಕಾಪ್ಟರ್ ಟೂರ್ ವ್ಯವಸ್ಥೆ ದಸರಾ ವಿಶೇಷ ಇದು ಒಂದೊಳ್ಳೆ ಪ್ರಯತ್ನ. ರೈತರಿಗೆ, ಬಡ, ಮಧ್ಯಮ ವರ್ಗದವರಿಗೆ ಅನುಕೂಲವಾಗುವಂತೆ ಟಿಕೆಟ್ ದರ ನಿಗದಿಪಡಿಸಿದರೆ ನೋಂದಣಿಯೂ ಹೆಚ್ಚುತ್ತದೆ. ಆಕಾಶದಲ್ಲಿರುವ ಜಿಲ್ಲೆಯ ಜನರ ಕನಸು ಸಾಕಾರಗೊಳ್ಳುತ್ತದೆ ಎಂಬುದು ಪ್ರಜಾಶಕ್ತಿ ಟಿವಿಯ ಕಳಕಳಿಯಾಗಿದೆ.




