
BENGALURU : ಅಪ್ರಾಪ್ತೆಯೋರ್ವಳಿಗೆ ಯೋಗ ಪಾಠ ನೀಡುವುದರ ಹೆಸರಿನಲ್ಲಿ ಆಮಿಷವೊಡ್ಡಿ ಲೈಂಗಿಕ ದೌರ್ಜನ್ಯವೆಸಗಿದ ಆರೋಪದಡಿ ಆರೋಪಿ ಯೋಗಗುರುವೊಬ್ಬನನ್ನು ಬೆಂಗಳೂರು ನಗರದ ಆರ್.ಆರ್.ನಗರ ಪೊಲೀಸರು ಬಂಧಿಸಿದ್ದಾರೆ. ನಿರಂಜನಾಮೂರ್ತಿ ಎಂಬ ಆರೋಪಿಯನ್ನು ಬಂಧಿಸಲಾಗಿದೆ.
2019ರಿಂದ ಸನ್ ಶೈನ್ ಇನ್ಸ್ಟಿಟ್ಯೂಟ್ ಹೆಸರಿನಲ್ಲಿ ಯೋಗ ತರಗತಿಗಳನ್ನು ನಡೆಸುತ್ತಿದ್ದ ಆರೋಪಿ, 2021ರಲ್ಲಿ ತರಗತಿಗೆ ಸೇರಿದ್ದ ಅಪ್ರಾಪ್ತೆಗೆ ಅಂತಾರಾಷ್ಟ್ರೀಯ ಮಟ್ಟದ ಯೋಗ ಸ್ಪರ್ಧೆಯಲ್ಲಿ ಭಾಗವಹಿಸಲು ಪ್ರೋತ್ಸಾಹಿಸಿದ್ದರು. ಈ ವೇಳೆ ಹಾಗೂ 2024ರ ಯೋಗ ಸ್ಪರ್ಧೆಯ ಸಮಯದಲ್ಲೂ ಆಕೆಯ ಮೇಲೆ ದೌರ್ಜನ್ಯ ಎಸಗಲಾಗಿದೆ ಎಂಬ ಆಧಾರದ ಮೇಲೆ, ಬಾಲಕಿಯ ಕುಟುಂಬಸ್ಥರು ನೀಡಿದ ದೂರಿನಂತೆ ಪೊಕ್ಸೋ ಕಾಯ್ದೆ ಅಡಿಯಲ್ಲಿ ಪ್ರಕರಣ ದಾಖಲಾಗಿದೆ.
ಆಗಸ್ಟ್ 2024ರಲ್ಲಿ ಬಾಲಕಿ ಮತ್ತೊಮ್ಮೆ ತರಗತಿಗೆ ಹಾಜರಾಗಿದ್ದಾಗ, ಮೆಡಲ್ ಗೆಲ್ಲಿಸಿ ಉದ್ಯೋಗ ಕೊಡಿಸುವುದಾಗಿ ಹೇಳಿ ಆಕೆಯೊಂದಿಗೆ ದೈಹಿಕ ಸಂಪರ್ಕ ಬೆಳೆಸಿದ್ದಾನೆ ಎನ್ನಲಾಗಿದೆ. ಸದ್ಯ ಪ್ರಕರಣ ದಾಖಲಿಸಿಕೊಂಡ ಪೊಲೀಸರು ಆರೋಪಿಯನ್ನು ಬಂಧಿಸಿ ತನಿಖೆ ಮುಂದುವರಿಸಿದ್ದಾರೆ.




