
SIRA : ಶಿರಾ ತಾಲ್ಲೂಕಿನ ಬುಕ್ಕಾಪಟ್ಟಣ ಚಿಂಕಾರ ವನ್ಯಜೀವಿಧಾಮದ ಅರಣ್ಯ ಪ್ರದೇಶದಲ್ಲಿ ವಿದ್ಯುತ್ ತಂತಿ ಸಹಾಯದಿಂದ ವಿದ್ಯುತ್ ಪ್ರಸರಿಸಿ ಎರಡು ಕಾಡುಹಂದಿಯನ್ನು ಭೇಟೆಯಾಡಿರುವ ಖಚಿತ ಮಾಹಿತಿ ಮೇರೆಗೆ, ಕಾಡು ಹಂದಿ ಬೇಟೆಗಾರರನ್ನು ಪೊಲೀಸರು ಬಂಧಿಸಿದ್ದಾರೆ.
ಬಂಧಿತರನ್ನು ಶಿರಾ ತಾಲೂಕಿನ ಜಾನ್ಕಲ್ ಗ್ರಾಮದ ತಿಮ್ಮ ಅಲಿಯಾಸ್ ಸೋಮಶೇಖರ್,ಭೂತರಾಜು, ಶ್ರೀನಿವಾಸ್, ಶ್ರೀನಿವಾಸಪ್ಪ ಹಾಗೂ ಕುಮಾರ್ ಎಂದು ಗುರುತಿಸಲಾಗಿದ್ದು, ಕಾಡು ಹಂದಿ ಹಿಡಿಯಲು ಬಳಿಸಿದ 5 ಬೈಕ್ಗಳು, ವಿದ್ಯುತ್ ತಂತಿಗಳು, ಚಾಕು-ಚೂರಿ, ಮೊಬೈಲ್ ಹಾಗೂ ಮರದ ತುಂಡನ್ನು ವಶಪಡಿಸಿಕೊಳ್ಳಲಾಗಿದೆ. ಬಂಧಿತ 5 ಜನ ಆರೋಪಿಗಳನ್ನು ನ್ಯಾಯಾಧೀಶರ ಮುಂದೆ ಹಾಜರುಪಡಿಸಲಾಗಿದೆ.
ತಿಪಟೂರು ಉಪವಿಭಾಗದ ಸಹಾಯಕ ಅರಣ್ಯ ಸಂರಕ್ಷಣಾಧಿಕಾರಿಗಳಾದ ಭರತ್ ತಳವಾರ್ ಮಾರ್ಗದರ್ಶನದಲ್ಲಿ ಬುಕ್ಕಾಪಟ್ಟಣ ವಲಯದ ವಲಯ ಅರಣ್ಯಾಧಿಕಾರಿಗಳಾದ ಚಂದನ್ .ಆರ್ ನೇತೃತ್ವದಲ್ಲಿ ಉಪವಲಯ ಅರಣ್ಯಾಧಿಕಾರಿ ಕಿರಣ್. ಟಿ., ಗಸ್ತು ಅರಣ್ಯ ಪಾಲಕರಾದ ರೇವಣಸಿದ್ದಪ್ಪ ಎಸ್ ಕಾಳಗಿ ಮತ್ತು ಸುರೇಶ್.ಎ.ಆರ್, ಇಲಾಖಾ ವಾಹನ ಚಾಲಕ ಹರೀಶ್ ಹಾಗೂ ಪ್ರಭಾಕರ್, ನಾಗರಾಜು ಮತ್ತು ರಾಮಣ್ಣ ಕಾರ್ಯನಿರ್ವಹಿಸಿದ್ದರು. ಈ ಸಂಬಂಧ ವನ್ಯಜೀವಿ ಅರಣ್ಯ ಪ್ರಕರಣದಡಿ ಹೆಚ್ಚಿನ ತನಿಖೆ ಮುಂದುವರಿದಿದೆ.




