
CHIKKANAYAKANAHALLI : ಅದ್ಯಾಕೋ ಅಧಿಕಾರಿಗಳಿಗೆ ಗ್ರಾಮಾಂತರ ಭಾಗಗಳು ಅಂದರೆ ನಿರ್ಲಕ್ಷ್ಯ. ಮೂಲಭೂತ ಸೌಕರ್ಯ ಒದಗಿಸುವಲ್ಲಿ ಅಧಿಕಾರಿಗಳು ಆಸಕ್ತಿಯನ್ನು ತೋರಿಸುತ್ತಿಲ್ಲ. ಇದೇ ಕಾರಣಕ್ಕೆ ಇಂದಿಗೂ ಜಿಲ್ಲೆಯ ಹಲವು ಗ್ರಾಮಗಳಲ್ಲಿ ಕುಡಿಯುವ ನೀರು, ರಸ್ತೆ, ಸಾರಿಗೆ ವ್ಯವಸ್ಥೆ, ಇಲ್ಲದೆ ಜನರು ಪರದಾಡುವಂತಾಗಿದೆ. ಇತ್ತ ಚಿಕ್ಕನಾಯಕನಹಳ್ಳಿ ತಾಲೂಕಿನಲ್ಲಿನ ಹಲವು ಗ್ರಾಮಗಳಲ್ಲಿ ಇಂದಿಗೂ ಸಹ ಸಮಸ್ಯೆಗಳು ಇದ್ದು, ಸಮಸ್ಯೆ ಬಗೆಹರಿಸುವಲ್ಲಿ ಅಧಿಕಾರಿಗಳು ಬೇಜವಾಬ್ದಾರಿ ತೋರುತ್ತಿದ್ದಾರೆ. ಇತ್ತ ದೊಡ್ಡಬಿದರೆಯ ಹೊಸ ಲಂಬಾಣಿ ತಾಂಡ್ಯಾದಲ್ಲಿ ಕಾಂಕ್ರೀಟ್ ರಸ್ತೆ ಮಾಡಲು ರಸ್ತೆ ಅಗೆದಿದ್ದು, ಎರಡು ತಿಂಗಳು ಕಳೆದರು ಕೂಡ ಇಂದಿಗೂ ರಸ್ತೆ ಕಾಮಗಾರಿ ಆಗಿಲ್ಲ. ಇದೇ ಕಾರಣಕ್ಕೆ ಗ್ರಾಮಸ್ಥರು ಅಧಿಕಾರಿಗಳ ವಿರುದ್ಧ ಆಕ್ರೋಶ ಹೊರ ಹಾಕುತ್ತಿದ್ದಾರೆ.
ಹುಳಿಯಾರು ಹೋಬಳಿ ದೊಡ್ಡಬಿದರೆ ಪಂಚಾಯತಿ ವ್ಯಾಪ್ತಿಯ ಹೊಸ ಲಂಬಾಣಿ ತಾಂಡ್ಯಾದಲ್ಲಿ ರಸ್ತೆ ಸಂಕಷ್ಟ ಎದುರಾಗಿದೆ. ಕಾಂಕ್ರೀಟ್ ರಸ್ತೆ ಮಾಡಲಾಗುತ್ತದೆ ಎಂದು ಎರಡು ತಿಂಗಳ ಹಿಂದೆ ರಸ್ತೆ ಅಗೆದಿದ್ದರೂ, ನಂತರದಿಂದ ಯಾವುದೇ ಕಾಮಗಾರಿ ನಡೆಯದೆ ರಸ್ತೆಯನ್ನು ಹಾಗೇಯೇ ಬಿಡಲಾಗಿದೆ. ಇತ್ತ ಮಳೆ ಬಂದರೆ ರಸ್ತೆಗಳೆಲ್ಲ ಕೆಸರುಗದ್ದೆಯಾಗಿ ಗ್ರಾಮಸ್ಥರು ಓಡಾಡಲು ಪರದಾಡುವಂತಾಗಿದೆ. ಶಾಸಕ ಸುರೇಶ್ ಬಾಬು ಅವರು ಗುದ್ದಲಿ ಪೂಜೆ ಮಾಡಿ ಕಾಮಗಾರಿಗೆ ಚಾಲನೆ ನೀಡಿದ್ದರೂ, ಅದರ ನಂತರ ಅಧಿಕಾರಿಗಳು ಹಾಗೂ ಗುತ್ತಿಗೆದಾರರಿಂದ ಗಮನಹರಿಸಲಿಲ್ಲ ಎಂದು ಜನರು ಆಕ್ರೋಶ ಹೊರ ಹಾಕುತ್ತಿದ್ದಾರೆ.
ಇನ್ನು ಈ ಗ್ರಾಮದಲ್ಲಿ ಹಿರಿಯರು, ಮಕ್ಕಳು, ಶಾಲಾ-ಕಾಲೇಜಿಗೆ ಹೋಗುವ ವಿದ್ಯಾರ್ಥಿಗಳು ಪರದಾಡುತ್ತಿದ್ದಾರೆ. ಒಂದೇ ಒಂದು ಮಳೆಗೆ ಹಿಡಿ ಗ್ರಾಮವೇ ಕೆಸರುಮಯವಾಗುತ್ತದೆ. ಕೊಚ್ಚೆಯಂತಿರುವ ರಸ್ತೆಯಲ್ಲಿಯೇ ಪ್ರತಿನಿತ್ಯ ಓಡಾಡಬೇಕಾದ ಪರಿಸ್ಥಿತಿ ಎದುರಾಗಿದೆ. ಈ ಸಮಸ್ಯೆಯ ಕುರಿತಾಗಿ ಗ್ರಾಮ ಪಂಚಾಯಿತಿ ಅಧಿಕಾರಿಗಳಿಗೆ ತಿಳಿಸಿದರೆ ಕ್ಯಾರೇ ಎನ್ನುತ್ತಿಲ್ಲವಂತೆ. ಕೂಡಲೇ ಸಂಬಂಧಪಟ್ಟ ಅಧಿಕಾರಿಗಳು ಹೊಸ ಲಂಬಾಣಿ ತಾಂಡ್ಯಾದ ಜನರ ಸಮಸ್ಯೆಯನ್ನು ಆಲಿಸಬೇಕಾಗಿದೆ.




