BY Vijayendra : ಬಿಜೆಪಿ ನಾಯಕ ವಿಜಯೇಂದ್ರ ಅವರು ಮಂಗಳವಾರ ಎಚ್.ಡಿ. ಕುಮಾರಸ್ವಾಮಿ ಹಾಗೂ ನಿಖಿಲ್ ಕುಮಾರಸ್ವಾಮಿ ಅವರನ್ನು ಭೇಟಿ ಮಾಡಿ ದೀಪಾವಳಿ ಶುಭಾಶಯ ಕೋರಿದರು.

BJP-JDS Coordination Committee: ಹೊಸ ರಾಜಕೀಯ ಚಟುವಟಿಕೆಗಳಿಗೆ ಚಾಲನೆ
ಬೆಂಗಳೂರು: ಬಿಜೆಪಿ ರಾಜ್ಯಾಧ್ಯಕ್ಷ ಹಾಗೂ ಶಾಸಕ ಬಿ.ವೈ. ವಿಜಯೇಂದ್ರ (BY Vijayendra) ಅವರು, ಬಿಜೆಪಿ ಮತ್ತು ಜೆಡಿಎಸ್ ಪಕ್ಷಗಳ ಸಮನ್ವಯ ಸಮಿತಿ (BJP-JDS Coordination Committee) ಶೀಘ್ರದಲ್ಲೇ ರಚನೆಯಾಗಲಿದೆಯೆಂದು ತಿಳಿಸಿದ್ದಾರೆ.
ಗ್ರೇಟರ್ ಬೆಂಗಳೂರು ಚುನಾವಣೆಗಳನ್ನು ಗಮನದಲ್ಲಿಟ್ಟುಕೊಂಡು ಎಚ್.ಡಿ. ಕುಮಾರಸ್ವಾಮಿ (HD Kumaraswamy) ಅವರ ಸಲಹೆಯಂತೆ, ಬೆಂಗಳೂರು ಮಟ್ಟದಲ್ಲಿ ಒಂದು ಸಮಿತಿ ಹಾಗೂ ರಾಜ್ಯ ಮಟ್ಟದಲ್ಲಿ ಮತ್ತೊಂದು ಸಮಿತಿ ರಚಿಸಲು ತೀರ್ಮಾನಿಸಲಾಗಿದೆ ಎಂದು ವಿಜಯೇಂದ್ರ ಹೇಳಿದರು.
ಕುಮಾರಸ್ವಾಮಿ-ವಿಜಯೇಂದ್ರ ಭೇಟಿಯಲ್ಲಿ ಚರ್ಚೆ
ಬಿಜೆಪಿ ನಾಯಕ ವಿಜಯೇಂದ್ರ ಅವರು ಮಂಗಳವಾರ ಎಚ್.ಡಿ. ಕುಮಾರಸ್ವಾಮಿ ಹಾಗೂ ನಿಖಿಲ್ ಕುಮಾರಸ್ವಾಮಿ ಅವರನ್ನು ಭೇಟಿ ಮಾಡಿ ದೀಪಾವಳಿ ಶುಭಾಶಯ ಕೋರಿದರು. ಬಳಿಕ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, “ರಾಜ್ಯದ ರಾಜಕೀಯ ಸ್ಥಿತಿ ಕುರಿತಂತೆ ಸೌಹಾರ್ದಪೂರ್ಣ ಚರ್ಚೆ ನಡೆದಿದೆ. 8 ರಿಂದ 10 ದಿನಗಳೊಳಗೆ ಕುಮಾರಸ್ವಾಮಿ ಅವರು ಹೆಸರುಗಳನ್ನು ಕಳುಹಿಸುವ ನಿರೀಕ್ಷೆಯಿದೆ,” ಎಂದು ತಿಳಿಸಿದರು.
ಇದನ್ನು ಓದಿ : ರಾಜ್ ನಿಡಿಮೋರ್ ಜೊತೆ ನಟಿ ಸಮಂತಾ ದೀಪಾವಳಿ ಆಚರಣೆ
“ಕಾಂಗ್ರೆಸ್ ಆಡಳಿತ ವೈಖರಿ ಹದಗೆಟ್ಟಿದೆ” – ವಿಜಯೇಂದ್ರ ಆರೋಪ
ವಿಜಯೇಂದ್ರ ಅವರು ರಾಜ್ಯದ ಕಾಂಗ್ರೆಸ್ ಸರ್ಕಾರದ ಆಡಳಿತ ವೈಖರಿ ಹದಗೆಟ್ಟಿದೆ ಎಂದು ಟೀಕಿಸಿದರು.
“ಬೆಂಗಳೂರು ಸೇರಿದಂತೆ ರಾಜ್ಯದ ಅಭಿವೃದ್ಧಿ ಕುಂಠಿತವಾಗಿದೆ. ಜನರು ಹಿಡಿಶಾಪ ಹಾಕುತ್ತಿದ್ದಾರೆ. ಬೆಂಗಳೂರು ಮಹಾನಗರದ ಅವ್ಯವಸ್ಥೆ ಎಲ್ಲರಿಗೂ ಗೋಚರವಾಗಿದೆ,” ಎಂದು ಅವರು ಹೇಳಿದರು.
BY Vijayendra: ಯಡಿಯೂರಪ್ಪ ಅವರ ಮಾದರಿ ಉಲ್ಲೇಖ
ವಿಜಯೇಂದ್ರ ಅವರು ಹಿರಿಯ ಉದ್ಯಮಿಗಳು ಮೋಹನ್ದಾಸ್ ಪೈ ಹಾಗೂ ಕಿರಣ್ ಮಜುಂದಾರ್ ಶಾ ಅವರ ಸಲಹೆಗಳನ್ನು ಸರ್ಕಾರ ಕಿವಿಗೆ ಹಾಕಿಕೊಳ್ಳುತ್ತಿಲ್ಲ ಎಂದು ಆಕ್ಷೇಪಿಸಿದರು.
“ಯಡಿಯೂರಪ್ಪ ಅವರು ಮುಖ್ಯಮಂತ್ರಿಯಾಗಿದ್ದಾಗ ಟೀಕೆಗಳನ್ನು ಸಕಾರಾತ್ಮಕವಾಗಿ ತೆಗೆದುಕೊಂಡಿದ್ದರು. ಅವರು ಟೀ ಕುಡಿಸುತ್ತಾ ಸಲಹೆಗಳನ್ನು ಸ್ವೀಕರಿಸುತ್ತಿದ್ದರು,” ಎಂದು ಹೇಳಿದರು.
ವಾಲ್ಮೀಕಿ ಅಭಿವೃದ್ಧಿ ನಿಗಮದ ಹಗರಣ ಮತ್ತೆ ಚರ್ಚೆಗೆ
ಬಿ.ವೈ. ವಿಜಯೇಂದ್ರ ಅವರು ವಾಲ್ಮೀಕಿ ಅಭಿವೃದ್ಧಿ ನಿಗಮದ ಹಗರಣ ಕುರಿತು ತೀವ್ರ ಟೀಕೆ ಮಾಡಿದರು.
“ಹಣವನ್ನು ತೆಲಂಗಾಣಕ್ಕೆ ಕರೆದೊಯ್ದು ಬೇನಾಮಿ ಖಾತೆ ತೆರೆದು ಚಿನ್ನ ಖರೀದಿಸಲಾಗಿತ್ತು. ಲೋಕಸಭಾ ಚುನಾವಣೆಯಲ್ಲೂ ಈ ಹಣ ಬಳಸಲಾಗಿದೆ. ಇದನ್ನು ಜಾರಿ ನಿರ್ದೇಶನಾಲಯ (ED) ದೃಢಪಡಿಸಿದೆ,” ಎಂದು ಅವರು ಆರೋಪಿಸಿದರು.
ಗುತ್ತಿಗೆದಾರರ ಪತ್ರ ಮತ್ತು ಕಮಿಷನ್ ವಿವಾದ
ನೀರಾವರಿ ಇಲಾಖೆಯಲ್ಲಿ 60-70% ಕಮಿಷನ್ ಕೇಳಲಾಗುತ್ತಿದೆ ಎಂದು ಗುತ್ತಿಗೆದಾರರ ಸಂಘವು ಪತ್ರ ಬರೆದಿದೆ.
“ಅಧಿಕೃತ ಪತ್ರ ಬರೆದಿದ್ದಾರೆ. ಈಗ ಇನ್ನೇನು ದೂರು ಬೇಕು?” ಎಂದು ವಿಜಯೇಂದ್ರ ಪ್ರಶ್ನಿಸಿದರು.
ಮರಳು ಮಾಫಿಯಾ ಕುರಿತು ಆರ್ಥಿಕ ಸಲಹೆಗಾರರ ಪತ್ರ
ಮುಖ್ಯಮಂತ್ರಿಗಳ ಆರ್ಥಿಕ ಸಲಹೆಗಾರ ಬಸವರಾಜ ರಾಯರೆಡ್ಡಿ ಅವರು ರಾಜ್ಯ ಸರ್ಕಾರಕ್ಕೆ ಮರಳು ಮಾಫಿಯಾದಿಂದ 400-500 ಕೋಟಿ ನಷ್ಟವಾಗಿದೆ ಎಂದು ಪತ್ರ ಬರೆದಿದ್ದಾರೆ.
“ಇದು ಭ್ರಷ್ಟಾಚಾರದ ನೇರ ಸಾಕ್ಷಿಯೇ,” ಎಂದು ವಿಜಯೇಂದ್ರ ಆರೋಪಿಸಿದರು.
ಚಿತ್ತಾಪುರ ವಿವಾದದ ಕುರಿತು ಸ್ಪಷ್ಟನೆ
ಚಿತ್ತಾಪುರ ಪಥಸಂಚಲನ ಕುರಿತು ಅವರು, “ಪ್ರಿಯಾಂಕ್ ಖರ್ಗೆ ಅವರು ಅನಾವಶ್ಯಕವಾಗಿ ಆರೆಸ್ಸೆಸ್ ಕುರಿತು ಟೀಕೆ ಮಾಡುತ್ತಿದ್ದಾರೆ. ಇದು ಪ್ರಚಾರ ಗಿಟ್ಟಿಸಿಕೊಳ್ಳುವ ತಂತ್ರ. ನವೆಂಬರ್ 2ರಂದು ಚಿತ್ತಾಪುರದಲ್ಲಿ ಯಶಸ್ವಿ ಪಥಸಂಚಲನ ನಡೆಯಲಿದೆ,” ಎಂದು ಹೇಳಿದರು.
ಇದನ್ನು ನೋಡಿ : STUDENTಗೆ ಹಿಗ್ಗಾಮುಗ್ಗ ಥಳಿಸಿದ ರೌಡಿ TEACHER- ಇವನು ಶಿಕ್ಷಕನೋ..? ರಾಕ್ಷಸನೋ..?




