
ರಾಜಧಾನಿ ಬೆಂಗಳೂರಿಗೆ ಹತ್ತಿರ ಇರುವ ನಗರ ಅಂದ್ರೆ ಅದು ತುಮಕೂರು.. ಬೆಂಗಳೂರಿನಲ್ಲಿ ಅಂತೃಾಷ್ಟ್ರೀಯ ಕಂಪನಿಗಳು ಬೆಳೆದು ನಿಂತಿವೆ. ಹೀಗಾಗಿ ಬೆಂಗಳೂರಿನಲ್ಲಿ ದಿನದಿಂದ ದಿನಕ್ಕೆ ಜನಸಂಖ್ಯೆ ಹೆಚ್ಚಾಗ್ತಾ ಇದ್ದು, ಟ್ರಾಫಿಕ್ ಜಾಮ್ ದೊಡ್ಡ ತಲೆನೋವನ್ನು ತಂದಿದೆ. ಬೆಂಗಳೂರಿನಲ್ಲಿನ ಒತ್ತಡವನ್ನು ಕಡಿಮೆ ಮಾಡುವ ನಿಟ್ಟಿನಲ್ಲಿ ತುಮಕೂರು ಪರ್ಯಾಯ ಸಿಟಿಯಾಗಿ ಬೆಳೆಯುತ್ತಿದೆ. ಅಲ್ದೇ ನಿತ್ಯ ಬೆಂಗಳೂರಿನಿಂದ ತುಮಕೂರಿಗೆ ಸಾವಿರಾರು ಮಂದಿ ಐಟಿ- ಬಿಟಿ ಉದ್ಯೋಗಿಗಳು ಪ್ರಯಾಣ ಮಾಡ್ತಾ ಇದ್ದು, ಸಾವಿರಾರು ಮಂದಿ ಪ್ರಯಾಣಿಕರ ಅನುಕೂಲಕ್ಕೆ ತುಮಕೂರಿಗೂ ಮೆಟ್ರೋ ವಿಸ್ತರಣೆ ಮಾಡಲು ಸರ್ಕಾರ ಮಟ್ಟದಲ್ಲಿ ಚಿಂತನೆ ನಡೆದಿತ್ತು.
ಬೆಂಗಳೂರಿನ ಮಾದವಾರದಿಂದ ತುಮಕೂರಿಗೆ ಮೆಟ್ರೋ ವಿಸ್ತರಣೆಗೆ ಕಳೆದ ಬಜೆಟ್ನಲ್ಲಿ ಅನುದಾನವನ್ನು ಕೂಡ ನೀಡಲಾಗಿತ್ತು. ಈ ಬೆನ್ನಲ್ಲೇ ನಮ್ಮ ಮೆಟ್ರೋ ತುಮಕೂರಿಗೆ ವಿಸ್ತರಣೆ ಮಾಡುವ ವಿಚಾರವಾಗಿ ಗೃಹ ಸಚಿವ ಪರಮೇಶ್ವರ್ ಬಿಗ್ ಅಪ್ಡೇಟ್ ನೀಡಿದ್ದು, ಶೀಘ್ರವೇ ತುಮಕೂರಿಗೆ ಮೆಟ್ರೋ ವಿಸ್ತರಣೆ ಬಗ್ಗೆ ತಿಳಿಸಿದ್ದಾರೆ. ತುಮಕೂರಿನಲ್ಲಿ ಸುದ್ದಿಗೋಷ್ಠಿ ನಡೆಸಿದ ಜಿಲ್ಲಾ ಉಸ್ತುವಾರಿ ಸಚಿವ ಪರಮೇಶ್ವರ್, ತುಮಕೂರಿಗೆ ಮೆಟ್ರೋ ಸಂಚಾರಕ್ಕೆ ಹೊಸ ಕಾನೂನು ನಿಯಮಗಳು ಬೇಕಿದೆ. ಅಲ್ದೇ ನಮ್ಮ ಮೆಟ್ರೋ ಸಂಚಾರಕ್ಕೆ ಸರ್ಕಾರ ಕೂಡ ಸಾಥ್ ನೀಡಿದೆ. ಬಿಎಂಆರ್ಸಿಎಲ್ ನಿಂದ 3 ಕೋಟಿ ರೂಪಾಯಿ ಅಂದಾಜಿನಲ್ಲಿ ಟೆಂಡರ್ನನ್ನು ಹೈದ್ರಾಬಾದ್ ಕಂಪನಿಗೆ ನೀಡಲಾಗಿದೆ. ಹೈದ್ರಾಬಾದ್ ಕಂಪನಿಯು ವರದಿ ಸಲ್ಲಿಕೆ ಮಾಡಿದೆ. ಈ ವರದಿ ಯೋಜನೆಯ ತಾಂತ್ರಿಕ, ಆರ್ಥಿಕ ಅಂಶಗಳನ್ನು ತಿಳಿಸುತ್ತದೆ ಎಂದ್ರು.

ಇನ್ನು ಕಳೆದ ಬಜೆಟ್ನಲ್ಲಿ ಸಿಎಂ ಸಿದ್ದರಾಮಯ್ಯ ಅವರೇ ಮೆಟ್ರೋಗೆ ವಿಸ್ತರಣೆ ಬಗ್ಗೆ ಘೋಷಣೆ ಮಾಡಿದ್ರು. ಸರ್ಕಾರವು ಬಿಎಂಆರ್ಸಿಎಲ್ಗೆ ಪಬ್ಲಿಕ್-ಪ್ರೈವೇಟ್ ಪಾಲುದಾರಿಕೆ ಮಾದರಿಯಲ್ಲಿ DPR ತಯಾರಿಸಲು ಸೂಚಿಸಿದೆ. ಅಲ್ದೇ ಮೆಟ್ರೋ ಮೊದಲ ಹಂತದ ವಿಸ್ತರಣೆಯು ಅಂದಾಜು 20,649 ಕೋಟಿ ವೆಚ್ಚದಲ್ಲಿ ಕಾಮಗಾರಿ ನೆರವೇರಲಿದ್ದು, ಹಲವಾರು ಖಾಸಗಿ ಕಂಪನಿಗಳು ಯೋಜನೆಯಲ್ಲಿ ಪಾಲ್ಗೊಳ್ಳಲು ಆಸಕ್ತಿ ತೋರಿಸುತ್ತಿದ್ದಾರೆ ಎಂದ್ರು.
ಒಟ್ನಲ್ಲಿ ತುಮಕೂರಿಗರ ಬಹುನೀರೀಕ್ಷಿತ ನಮ್ಮ ಮೆಟ್ರೋ ಇನ್ನೇನು ಕೆಲ ವರ್ಷಗಳಲ್ಲಿ ತುಮಕೂರಿಗೆ ಬರುವ ಎಲ್ಲಾ ಲಕ್ಷಣಗಳು ಕಾಣುತ್ತಿದ್ದು, ಬೆಂಗಳೂರು- ತುಮಕೂರು ಪ್ರಯಾಣ ಮತ್ತಷ್ಟು ಸುಲಭವಾಗಲಿದ್ದು, ನಿತ್ಯ ಸಂಚಾರ ಮಾಡುವವರಿಗಂಥೂ ಸಾಕಷ್ಟು ಅನುಕೂಲ ಆಗಲಿದೆ. ಜೊತೆಗೆ ಬೆಂಗಳೂರಿಗೆ ಇರುವ ಒತ್ತಡ ಕಡಿಮೆ ಆಗಲಿದೆ.




