ವ್ಯಕ್ತಿಯೋರ್ವನ ಕಾಲಿನ ಮೇಲೆ ಹರಿದ ಬಸ್

ಗುಬ್ಬಿ ಶಾಸಕ ಶ್ರೀನಿವಾಸ್ ಅವ್ರೆ ನೀವು ಒಮ್ಮೆ ಈ ಸುದ್ದಿ ನೋಡಿಬಿಡಿ. ನಿಮ್ಮದೆ ತಾಲೂಕಿನಲ್ಲಿರುವ ಕೆಎಸ್ ಆರ್ ಟಿಸಿ ಬಸ್ ನಿಲ್ದಾಣದಲ್ಲಿ ಡ್ರೈವರ್ಗಳ ವೇಗಕ್ಕೆ ಮಿತಿಯಿಲ್ಲದಂತಾಗಿದೆ. ಹೀಗಾಗಿ ಪ್ರತಿನಿತ್ಯ ಒಂದಿಲ್ಲೊಂದು ರೀತಿಯ ಸಮಸ್ಯೆ ಎದುರಾಗ್ತಾ ಇದೆ. ಧಿಕಾರಿಗಳ ನಿರ್ಲಕ್ಷ್ಯವೋ, ಸಿಬ್ಬಂದಿಯ ಎಡವಟ್ಟೋ ಏನ್ ಕಥೆನೋ ಗೊತ್ತಿಲ್ಲ. ಜನರ ಸಂಚಾರದ ಜೀವನಾಡಿಯಾಗಬೇಕಿದ್ದ ಬಸ್ ಗಳು ಯಮಧೂತರಂತೆ ಕಾಣಿಸ್ತಿವೆ. ಸಾರಿಗೆ ಬಸ್ನಲ್ಲಿ ಸುಮಾರು 50 ಕ್ಕೂ ಹೆಚ್ಚು ಪ್ರಯಾಣಿಕರಿರ್ತಾರೆ. ಈಗ ಶಕ್ತಿ ಯೋಜನೆ ಜಾರಿಯಲ್ಲಿರೋದ್ರಿಂದ ಯಾವಾಗಲೂ KSRTC ಬಸ್ಗಳು ತುಂಬಿ ತುಳುಕುತ್ತಿರುತ್ತೆ. ಇವರೆಲ್ಲರು ಕೂಡ ಚಾಲಕನನ್ನೇ ನಂಬಿರ್ತಾರೆ. ಆದ್ರೆ, ಇಲ್ಲೊಬ್ಬ ಬಸ್ ಚಾಲಕನ ನಿರ್ಲಕ್ಷ್ಯದಿಂದ ಬಸ್ಸಿಗಾಗಿ ಓಡಾಡುತ್ತಿದ್ದ ಪ್ರಯಾಣಿಕರೊಬ್ಬರ ಕಾಲಿನ ಮೇಲೆ ಬಸ್ಸಿನ ಚಕ್ರ ಹರಿದಿರುವ ಘಟನೆ ಬೆಳಕಿಗೆ ಬಂದಿದೆ.
ತುಮಕೂರು ಜಿಲ್ಲೆಯ ಗುಬ್ಬಿಯ ಕೆಎಸ್ ಆರ್ ಟಿಸಿ ಬಸ್ ನಿಲ್ದಾಣದಲ್ಲಿ ಈ ಅವಘಡ ಸಂಭವಿಸಿದೆ. ಗುಬ್ಬಿ ತಾಲೂಕಿನ ಮೆಳೆ ಕಲ್ಲಹಳ್ಳಿ ಗ್ರಾಮದ ಲಕ್ಷ್ಮಯ್ಯ ಎಂಬುವರು ಗಾಯಗೊಂಡಿದ್ದು, ಬೆಂಗಳೂರಿನಿಂದ ಶಿವಮೊಗ್ಗಕ್ಕೆ ತೆರಳುವ ಬಸ್ ವೇಗವಾಗಿ ನಿಲ್ದಾಣ ಪ್ರವೇಶಿಸಿ, ಏಕಾಏಕಿ ಲಕ್ಷ್ಮಯ್ಯ ಅವ್ರ ಕಾಲಿನ ಮೇಲೆ ಹರಿದಿದೆ. ಇನ್ನು ಬಸ್ ಚಕ್ರ ಹರಿದ ಪರಿಣಾಮ ಅವ್ರ ಕಾಲಿನ ಮೂಳೆ ಮುರಿದಿದ್ದು, ಕೂಡಲೇ ಅವರನ್ನ ಗುಬ್ಬಿ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗ್ತಿದೆ.
ಇನ್ನು ಯಾವಾಗಲೂ ನಿಲ್ದಾಣ ಪ್ರವೇಶಿಸುವ ಬಸ್ಗಳು ತಮ್ಮ ವೇಗವನ್ನ ಕಡಿಮೆ ಮಾಡದೇ, ವೇಗದಲ್ಲೇ ಪ್ರವೇಶಿಸ್ತಾ ಇರೋದೆ ಈ ಅವಘಡಕ್ಕೆ ಕಾರಣ. ಇದರಿಂದ ಪ್ರಯಾಣಿಕರಿಗೆ ತೊಂದ್ರೆ ಆಗ್ತಿದೆ, ಕೂಡಲೇ ಕೆಎಸ್ ಆರ್ಟಿಸಿ ಅಧಿಕಾರಿಗಳು ಕ್ರಮಕೈಗೊಳ್ಳಬೇಕು ಅಂತ ಸಾರ್ವಜನಿಕರು ಆಗ್ರಹಿಸಿದ್ದಾರೆ.




