
ಕೊರಟಗೆರೆ ಪಟ್ಟಣದಲ್ಲೂ ದಸರಾ ಸಂಭ್ರಮ ಸಡಗರ ಜೋರಾಗಿದ್ದು, ಪೂರ್ವಿಕರ ಆಳ್ವಿಕೆಯಂತೆ ವಿಜಯದಶಮಿ ಹಬ್ಬವನ್ನು ಆಚರಣೆ ಮಾಡಲಾಯ್ತು. ಕೊರಟಗೆರೆ ಪಟ್ಟಣದ ತಹಶೀಲ್ದಾರ್ ಕಚೇರಿಯಲ್ಲಿ ಪೂರ್ವಿಕರ ಆಳ್ವಿಕೆಯಂತೆ ಇಂದಿನ ಸಾಲಿನ ಭೂ ಕಂದಾಯ ಜಮಾ ಬಂದಿಯನ್ನು ಮುಕ್ತಾಯಗೊಳಿಸಿ. ಮುಂದಿನ ಸಾಲಿನ ಭೂ ಕಂದಾಯಕ್ಕೆ ಅನುಮತಿಯನ್ನ ನೀಡುವ ಮುಖೇನಾ ಜಮಾ ಬಂದಿಗೆ ಸಹಿಯನ್ನ ಹಾಕಿ, ಊರಿನ ಗೌಡರು ಕಚೇರಿಗೆ ಆಗಮಿಸಿ ದಂಡಾಧಿಕಾರಿಗಳಿಗೆ ಮೈಸೂರು ಪೇಟ ಹಾಗೂ ಹೂಮಾಲೆಯನ್ನು ಹಾಕಿ, ರಾಜರ ಕತ್ತಿಯನ್ನು ನೀಡಿ ದೇವಸ್ಥಾನದವರೆಗೆ ಕರೆದುಕೊಂಡು ಹೋಗಿ ಶಮಿ ಪೂಜೆ ನೆರವೇರಿಸಿಲಾಯ್ತು. ವಿಜಯದಶಮಿ ಅಂಗವಾಗಿ ತಹಶೀಲ್ದಾರ್ ಮಂಜುನಾಥ್, ಬಿಳಿ ಪಂಜೆ, ಶರ್ಟ್, ಮೈಸೂರು ಪೇಟ ತೊಟ್ಟಿ ಮಿರಿ ಮಿರಿ ಮಿಂಚುತ್ತಿದ್ರು.
ಕೊರಟಗೆರೆ ಪಟ್ಟಣದ ಇತಿಹಾಸ ಪ್ರಸಿದ್ಧ ಗೋಕುಲ ಆಂಜನೇಯ ಸ್ವಾಮಿಯ ಸನ್ನಿಧಾನದಲ್ಲಿ ವಿಜಯದಶಮಿ ಹಬ್ಬವನ್ನು ಆಚರಣೆ ಮಾಡಲಾಗಿದ್ದು, ದೇವರಿಗೆ ವಿಶೇಷ ಪೂಜೆ ಸಲ್ಲಿಸಲಾಗಿದ್ದು, ಬಳಿಕ ದೇವಸ್ಥಾನದ ಹೊರಗೆ ಕುಳಿತು ಹಿರಿಯರ ಸಂಪ್ರದಾಯದಂತೆ ಊರಿನ ಗೌಡರು, ಪಾಣೆಗಾರು, ತೋಟಿಯರು,ಅರ್ಚಕರು, ವಾದ್ಯದವರಿಗೆ ವಿಳೆದೆಲೆ ಅಡಿಕೆ ತಾಂಬೂಲವನ್ನ ನೀಡಿ ಶ್ರಮಿ ಪೂಜೆ ಮುಕ್ತಾಯಗೊಳಿಸಲಾಯ್ತು.

ಇನ್ನು ಈ ವೇಳೆ ಮಾತನಾಡಿದ ತಹಶೀಲ್ದಾರ್ ಮಂಜುನಾಥ್, ಇತಿಹಾಸ ಪ್ರಸಿದ್ಧ ಗೋಕುಲ್ ಆಂಜನೇಯ ಸ್ವಾಮಿಯ ಸನ್ನಿಧಾನದಲ್ಲಿ ಪ್ರತಿ ವರ್ಷದಂತೆ ಈ ವರ್ಷವೂ ಕೂಡ ವಿಜಯದಶಮಿ ಹಾಗೂ ಆಯುಧ ಪೂಜೆಯ ಅಂಗವಾಗಿ ರಾಜರ ಆಳ್ವಿಕೆಯಿಂದ ನಡೆಸಿಕೊಂಡು ಬಂದಿರುವ ಶಮಿ ಮಂಟಪದ ಪೂಜೆಯ ಕಾರ್ಯಕ್ರಮವನ್ನು ನೆರವೇರಿಸಿದ್ದೇವೆ. ಗ್ರಾಮದ ಶ್ರೀ ಆಂಜನೇಯ ಸ್ವಾಮಿಯು ಹಾಗೂ ನಾಡ ದೇವತೆ ಶ್ರೀ ಚಾಮುಂಡೇಶ್ವರಿ ತಾಯಿಯು ಎಲ್ಲರಿಗೂ ಆಯಸ್ಸು ಆರೋಗ್ಯವನ್ನು ಕೊಟ್ಟು ಕಾಪಾಡಲಿ ಎಂದು ಹರಸಿದ್ರು.
ಗ್ರಾಮದ ಮುಖಂಡ ದಾಡಿ ವೆಂಕಟೇಶ್ ಮಾತನಾಡಿ, ರಣಭೈರೇಗೌಡ ಎನ್ನುವ ರಾಜ ಕೊರಟಗೆರೆ ಕೋಟೆಯನ್ನ ಅಳುತ್ತಿದ್ದ. ಅವರ ಆಳ್ವಿಕೆಯಲ್ಲಿ ಊರನ್ನ ಕಾಯುವ ದೊರೆ ಎಂದು ಶ್ರೀ ಆಂಜನೇಯ ಸ್ವಾಮಿಯ ದೇವಸ್ಥಾನವನ್ನು ನಿರ್ಮಾಣ ಮಾಡಿದ್ರು. ರಾಜರ ಆಳ್ವಿಕೆಯ ನಂತರ ತಾಲೂಕು ಆಡಳಿತದ ವತಿಯಿಂದ ದಂಡಾಧಿಕಾರಿಗಳು ಈ ಶಮಿ ಪೂಜೆಯನ್ನು ಆಚರಿಸುತ್ತಾ ಬಂದಿದ್ದಾರೆ ಎಂದು ತಿಳಿಸಿದರು..
ಇನ್ನು ಇದೇ ವೇಳೆ ಕಾರ್ಯಕ್ರಮದಲ್ಲಿ ತಾಲೂಕು ಕಚೇರಿಯ ಅಧಿಕಾರಿಗಳು, ಪಟ್ಟಣ ಪಂಚಾಯಿತಿಯ ಮುಖ್ಯ ಅಧಿಕಾರಿ ಉಮೇಶ್ ಸೇರಿದಂತೆ ಊರಿನ ಗೌಡರು, ಅರ್ಚಕರು, ವಲಗದವರು, ಗೋಕುಲ ಆಂಜನೇಯ ಸ್ವಾಮಿಯ ಎಲ್ಲ ಮುಖಂಡರು ಹಾಗೂ ಭಕ್ತಾದಿಗಳು ಉಪಸ್ಥಿತರಿದ್ದರು.




