
TUMAKURU DASARA 2025 : ತುಮಕೂರಿನಲ್ಲಿ ದಸರಾ ಹಬ್ಬದ ಹಿನ್ನೆಲೆ ನಗರದಲ್ಲಿ ವಾಹನ ಸಂಚಾರದ ಮಾರ್ಗಗಳಲ್ಲಿ ತಾತ್ಕಾಲಿಕ ಬದಲಾವಣೆಗಳನ್ನು ಜಾರಿಗೊಳಿಸಲಾಗಿದೆ. ಜಿಲ್ಲಾಡಳಿತದಿಂದ ಬಿಡುಗಡೆ ಯಾದ ಆದೇಶದಂತೆ, ಸೆಪ್ಟೆಂಬರ್ 30, ಅಕ್ಟೋಬರ್ 1 ಮತ್ತು 2ರಂದು ಸಂಜೆ 4ರಿಂದ ರಾತ್ರಿ 11 ಗಂಟೆ ಯವರೆಗೆ ಈ ಮಾರ್ಗ ಬದಲಾವಣೆ ಅನ್ವಯವಾಗಲಿದೆ.
ನಗರಕ್ಕೆ ನೇರ ಪ್ರವೇಶವನ್ನು ತಡೆಯಲಾಗಿದ್ದು, ವಾಹನಗಳು ರಿಂಗ್ ರಸ್ತೆಯ ಮೂಲಕ ಚಲಿಸಬೇಕಾಗುತ್ತದೆ. ಬಸ್ ನಿಲ್ದಾಣಕ್ಕೆ ಹೋಗುವ ವಾಹನಗಳು ಅಂತರಸನಹಳ್ಳಿ ಹಾಗೂ ಶಿರಾಗೇಟ್ ಮೂಲಕ ಪ್ರವೇಶಿಸಲು ಸೂಚನೆ ನೀಡಲಾಗಿದೆ.
ಅದರ ಜೊತೆಗೆ ಸಂಜೆ ಕಾರ್ಯಕ್ರಮಕ್ಕೆ ಬರುವ ಸಾರ್ವಜನಿಕರು ತಮ್ಮ ವಾಹನಗಳನ್ನು ಜೂನಿಯರ್ ಕಾಲೇಜು ಮೈದಾನಕ್ಕೆ ತರದೇ ನಿಗದಿ ಪಡಿಸಿದ ಸ್ಥಳದಲ್ಲೇ ಬಿಟ್ಟು ಬರುವಂತೆ ಸೂಚಿಸಲಾಗಿದೆ. ಇಂದು ರಾತ್ರಿ ಮೋಹಕತಾರೆ ರಮ್ಯಾ ಹಾಗೂ ಕ್ರೇಜಿ ಸ್ಟಾರ್ ರವಿಚಂದ್ರನ್ ಕಾರ್ಯಕ್ರಮ ನೀಡಲಿದ್ದಾರೆ. ನಾಳೆ (ಅ.1) ಸಂಜೆ, ಗಾಯಕಿ ಅನನ್ಯಾ ಭಟ್ ಮತ್ತು ಸಂಗೀತ ನಿರ್ದೇಶಕ ಅರ್ಜುನ್ ಜನ್ಯ ಅವರಿಂದ ‘ಸಂಗೀತ ರಸ ಸಂಜೆ’ ನಡೆಯಲಿದೆ.




