
KANTARA 1 MOVIE SONG RELEASE: ‘ಕಾಂತಾರ ಅಧ್ಯಾಯ 1′ (Kantara Chapter 1) ಸಿನಿಮಾ ಬಿಡುಗಡೆಗೆ ಕೌಂಟ್ಡೌನ್ ಆರಂಭವಾದ ಬೆನ್ನಲ್ಲೇ, ಚಿತ್ರತಂಡ ಭಕ್ತಿಭಾವನೆಯ ಹೊಸದೊಂದು ಆಯಾಮ ನೀಡುವ ‘ಬ್ರಹ್ಮಕಲಶ’ ಎಂಬ ಪ್ರಥಮ ಹಾಡನ್ನು ರಿಲೀಸ್ ಮಾಡಿದೆ. ಇದೊಂದು ಕೇವಲ ಆಡಿಯೋ ರೂಪದಲ್ಲಿರುವ ಹಾಡಾಗಿದ್ದು, ಚಿತ್ರದ ಯಾವುದೇ ಸುಳಿವನ್ನೂ ಬಿಟ್ಟುಕೊಡದೆ ಚಿತ್ರತಂಡ ಅದರ ರಹಸ್ಯತೆಯನ್ನು ಉಳಿಸಿಕೊಂಡಿದೆ.
“ಗೊತ್ತಿಲ್ಲ ಶಿವನೇ” ಎಂಬ ಪದಗಳಿಂದ ಆರಂಭವಾಗುವ ಈ ಹಾಡು, ಸಾಮಾಜಿಕ ಜಾಲತಾಣಗಳಲ್ಲಿ ಭಾರೀ ಮೆಚ್ಚುಗೆಗೆ ಪಾತ್ರವಾಗಿದೆ. ಕನ್ನಡದ ಶಬ್ದಕವಿ ಶಶಿರಾಜ್ ಕಾವೂರ್ ಈ ಭಕ್ತಿಗೀತೆಯ ಸಾಹಿತ್ಯ ರಚನೆ ಮಾಡಿದ್ದು, ಹಿಂದಿನ ಭಾಗದ ‘ವರಾಹ ರೂಪಂ‘ ಗೆ ಹುಟ್ಟುಹಾಕಿದ ಕವಿಯೇ ಈ ಬಾರಿ ಹೊಸ ಶಬ್ದ ರೂಪದಲ್ಲಿ ಶ್ರದ್ಧೆಯನ್ನು ಮೆರೆದಿದ್ದಾರೆ.
ಈ ಭಜನೆ ಶೈಲಿಯ ಹಾಡಿಗೆ ಸಂಗೀತ ದಿಗ್ಗಜ ಅಜನೀಶ್ ಲೋಕನಾಥ್ ಸಂಗೀತ ನೀಡಿದ್ದು, ಹಿನ್ನೆಲೆ ಗಾಯನದಲ್ಲಿ ಅಬ್ಬಿ ವಿ ತಮ್ಮ ಕಂಠಸಿರಿಯಲ್ಲಿ ಈ ಹಾಡು ಮೂಡಿ ಬಂದಿದೆ. ಇನ್ನು ಹಿಂದಿನ ಭಾಗದ ‘ವರಾಹ ರೂಪಂ’ ಹಾಡು ಚಿತ್ರ ಬಿಡುಗಡೆಯಾದ ನಂತರವೇ ಅನಾವರಣಗೊಂಡಿದ್ದರೆ, ಈ ಬಾರಿ ಚಿತ್ರ ಬಿಡುಗಡೆಗೂ ಮುನ್ನವೇ ಪ್ರಮುಖ ಹಾಡು ಬಿಡುಗಡೆ ಮಾಡಿರುವುದು ಚಿತ್ರತಂಡದ ವಿಶೇಷ.




