Toxic ಸಿನಿಮಾದ ಟೀಸರ್ನಲ್ಲಿ ಬೋಲ್ಡ್ ದೃಶ್ಯಗಳ ಬಗ್ಗೆ ಟೀಕೆ ವ್ಯಕ್ತವಾದ ಹಿನ್ನೆಲೆಯಲ್ಲಿ ನಟ ಯಶ್ ಪ್ರತಿಕ್ರಿಯೆ ನೀಡಿದ್ದಾರೆ…!!

ರಾಕಿಂಗ್ ಸ್ಟಾರ್ ಯಶ್ ಅಭಿನಯದ ಬಹುನಿರೀಕ್ಷಿತ ‘ Toxic : ಎ ಫೇರಿ ಟೇಲ್ ಫಾರ್ ಗ್ರೋನ್-ಅಪ್ಸ್’ ಸಿನಿಮಾದ ಟೀಸರ್ ಬಿಡುಗಡೆಯಾದ ಬಳಿಕ ಕೆಲವು ದೃಶ್ಯಗಳ ಬಗ್ಗೆ ಟೀಕೆಗಳು ವ್ಯಕ್ತವಾಗಿದ್ದವು.
ವಿಶೇಷವಾಗಿ ಬೋಲ್ಡ್ ದೃಶ್ಯಗಳ ಕಾರಣದಿಂದ ಸಾಮಾಜಿಕ ಜಾಲತಾಣಗಳಲ್ಲಿ ಚರ್ಚೆ ಜೋರಾಗಿತ್ತು. ಇದೀಗ ಈ ವಿವಾದಕ್ಕೆ ನಟ ಯಶ್ ಸ್ಪಷ್ಟನೆ ನೀಡಿದ್ದಾರೆ.

ಅಮೆರಿಕದಲ್ಲಿ ನಡೆದ CinemaCon ಕಾರ್ಯಕ್ರಮದಲ್ಲಿ ಭಾಗವಹಿಸಿದ್ದ ಯಶ್, ‘ಟಾಕ್ಸಿಕ್’ ಸಿನಿಮಾದ ಕುರಿತು ಮಾತನಾಡಿದರು. ಈ ವೇಳೆ ಚಿತ್ರದ ನಿರ್ದೇಶಕಿ ಗೀತು ಮೋಹನ್ದಾಸ್ ಬಗ್ಗೆ ಅವರು ಪ್ರಶಂಸೆ ವ್ಯಕ್ತಪಡಿಸಿದರು.
ಭಾರತದಲ್ಲಿ ಆ್ಯಕ್ಷನ್ ಸಿನಿಮಾಗಳನ್ನು ಸಾಮಾನ್ಯವಾಗಿ ಪುರುಷ ನಿರ್ದೇಶಕರೇ ನಿರ್ದೇಶಿಸುತ್ತಾರೆ. ಆದರೆ ಒಬ್ಬ ಮಹಿಳಾ ನಿರ್ದೇಶಕಿ ಗ್ಯಾಂಗ್ಸ್ಟರ್ ಕಥೆಯನ್ನು ತನ್ನದೇ ದೃಷ್ಟಿಕೋನದಿಂದ ತೋರಿಸುತ್ತಿರುವುದು ಹೊಸತನದಿಂದ ಕೂಡಿದೆ ಎಂದು ಯಶ್ ಅಭಿಪ್ರಾಯಪಟ್ಟಿದ್ದಾರೆ.

ಚಿತ್ರದಲ್ಲಿನ ಕೆಲವು ಬೋಲ್ಡ್ ದೃಶ್ಯಗಳ ಕುರಿತು ಮಾತನಾಡಿದ ಯಶ್, ನಿರ್ದೇಶಕಿ ಕಥೆಯನ್ನು ಹೇಳುವ ರೀತಿಯೇ ವಿಭಿನ್ನವಾಗಿದೆ ಎಂದು ಹೇಳಿದ್ದಾರೆ.
ಒಬ್ಬ ಮಹಿಳೆ ತನ್ನ ಭಾವನೆಗಳು ಮತ್ತು ಬಯಕೆಗಳನ್ನು ಎಷ್ಟು ಆಳವಾಗಿ ತೋರಿಸಬಲ್ಲರು ಎಂಬುದನ್ನು ಈ ಚಿತ್ರದ ಮೂಲಕ ಅರಿತುಕೊಂಡಿದ್ದೇನೆ.
ಈ ಸಿನಿಮಾ ಹಿಂದಿನ ಆ್ಯಕ್ಷನ್ ಸಿನಿಮಾಗಳಿಗಿಂತ ಭಿನ್ನವಾಗಿರಲಿದೆ ಎಂದು ಅವರು ಹೇಳಿದ್ದಾರೆ.

2025ರ ಜನವರಿಯಲ್ಲಿ ಬಿಡುಗಡೆಯಾದ ಬರ್ತ್ಡೇ ಟೀಸರ್ನಲ್ಲಿ ಯಶ್ ಕ್ಯಾಸಿನೋವೊಂದಕ್ಕೆ ಎಂಟ್ರಿ ಕೊಡುವ ದೃಶ್ಯವಿತ್ತು.
ಇತ್ತೀಚೆಗೆ ಬಿಡುಗಡೆಯಾದ ‘Introducing Roya’ ವಿಡಿಯೋದಲ್ಲಿನ ಕೆಲವು ದೃಶ್ಯಗಳು ಸಾಮಾಜಿಕ ಜಾಲತಾಣಗಳಲ್ಲಿ ಪರ-ವಿರೋಧ ಚರ್ಚೆಗೆ ಕಾರಣವಾಗಿವೆ.
ವಿಶೇಷವಾಗಿ ಸ್ಮಶಾನ, ಕಾರ್ ಮತ್ತು ಬಾಂಬ್ ಒಳಗೊಂಡ ದೃಶ್ಯವು ಧಾರ್ಮಿಕ ಭಾವನೆಗಳಿಗೆ ಧಕ್ಕೆ ತಂದಿದೆ ಎಂದು ರಾಷ್ಟ್ರೀಯ ಕ್ರಿಶ್ಚಿಯನ್ ಫೆಡರೇಷನ್ ದೂರು ದಾಖಲಿಸಿತ್ತು.

ಮಿಶ್ರ ಪ್ರತಿಕ್ರಿಯೆ ಮತ್ತು ಸಣ್ಣಪುಟ್ಟ ವಿರೋಧಗಳ ನಡುವೆಯೂ, ‘ಟಾಕ್ಸಿಕ್’ ಸಿನಿಮಾ ತನ್ನ ವಿಭಿನ್ನ ಮೇಕಿಂಗ್ ಮತ್ತು ಯಶ್ ಅವರ ಸ್ಟೈಲಿಶ್ ಲುಕ್ನಿಂದ ಜಾಗತಿಕ ಮಟ್ಟದಲ್ಲಿ ಕುತೂಹಲ ಮೂಡಿಸಿದೆ.
ಮೊದಲಿಗೆ ಮಾರ್ಚ್ 19ರಂದು ಬಿಡುಗಡೆ ಆಗಬೇಕಿದ್ದ ಈ ಸಿನಿಮಾ ಕಾರಣಾಂತರಗಳಿಂದ ಮುಂದೂಡಿಕೆ ಆಗಿದ್ದು, ಇದೀಗ ಜೂನ್ 4ರಂದು ವಿಶ್ವಾದ್ಯಂತ ಬಿಡುಗಡೆಯಾಗಲಿದೆ.




