SHIVAMOGGA ACCIDENT : ಸಾಗರದಿಂದ ಸಿಗಂದೂರಿಗೆ ತೆರಳುತ್ತಿದ್ದ ಭಕ್ತರಿದ್ದ ಟಿಟಿ ವಾಹನವು ನಿಯಂತ್ರಣ ತಪ್ಪಿ ಪಲ್ಟಿಯಾಗಿರುವ ಘಟನೆ ಇಂದು ಬೆಳಿಗ್ಗೆ ಸಾಗರ ತಾಲೂಕಿನ ಕೂರನಕೊಪ್ಪ ಗ್ರಾಮದ ಬಳಿ ನಡೆದಿದೆ. ಈ ಅಪಘಾತದಲ್ಲಿ ಚಾಲಕ ಸೇರಿದಂತೆ 13 ಮಂದಿ ಗಾಯಗೊಂಡಿದ್ದಾರೆ, ಅವರಲ್ಲಿ ಮೂವರು ಮಹಿಳೆಯರಿಗೆ ಗಂಭೀರ ಗಾಯವಾಗಿದೆ.
ಬೆಂಗಳೂರು ಮೂಲದ 12 ಮಹಿಳಾ ಭಕ್ತರ ತಂಡವು ರೈಲಿನ ಮೂಲಕ ಸಾಗರಕ್ಕೆ ಆಗಮಿಸಿ, ಅಲ್ಲಿ ಟಿಟಿ ವಾಹನವನ್ನು ಬಾಡಿಗೆಗೆ ತೆಗೆದುಕೊಂಡು ಸಿಗಂದೂರು ಚೌಡೇಶ್ವರಿ ದೇವಿಯ ದರ್ಶನಕ್ಕಾಗಿ ತೆರಳುತ್ತಿದ್ದರು. ಕೂರನಕೊಪ್ಪ ಗ್ರಾಮದ ಸಮೀಪ ರಸ್ತೆಯಲ್ಲಿ ವಾಹನದ ಚಾಲಕನ ನಿಯಂತ್ರಣ ತಪ್ಪಿ ವಾಹನ ಪಲ್ಟಿಯಾಗಿದೆ.
ಇನ್ನು ಸ್ಥಳೀಯರು ತಕ್ಷಣ 108 ಆಂಬುಲೆನ್ಸ್ಗೆ ಕರೆಮಾಡಿ ಗಾಯಾಳುಗಳಿಗೆ ಸಹಾಯ ಮಾಡಿದ್ದಾರೆ. ಪ್ರಾಥಮಿಕ ಚಿಕಿತ್ಸೆಗಾಗಿ ಅವರನ್ನು ಸಾಗರದ ಉಪವಿಭಾಗೀಯ ಆಸ್ಪತ್ರೆಗೆ ದಾಖಲಿಸಲಾಗಿದ್ದು, ಗಂಭೀರ ಗಾಯಗೊಂಡ ಮೂವರನ್ನು ಹೆಚ್ಚಿನ ಚಿಕಿತ್ಸೆಗಾಗಿ ಶಿವಮೊಗ್ಗದ ಮ್ಯಾಕ್ಸ್ ಆಸ್ಪತ್ರೆಗೆ ರವಾನಿಸಲಾಗಿದೆ.
ಇನ್ನು ಘಟನಾ ಸ್ಥಳಕ್ಕೆ ಪೊಲೀಸರು ಭೇಟಿ ನೀಡಿ ತನಿಖೆ ನಡೆಸುತ್ತಿದ್ದಾರೆ. ಈ ಅಪಘಾತಕ್ಕೆ ಚಾಲಕನ ಅಜಾಗರೂಕತೆ ಕಾರಣವಾಗಿರಬಹುದೆಂದು ಶಂಕಿಸಲಾಗಿದೆ.