Weather Report : ಕರ್ನಾಟಕಕ್ಕೆ ಇನ್ನೂ 5 ದಿನ ಮಳೆಯ ಮುನ್ಸೂಚನೆ – ಬಿಸಿಲಿಗೆ ಮಳೆಯ ತಂಪೆರೆದ ಮಳೆರಾಯ

ತೀವ್ರ ಬೇಸಿಗೆ ಬಿಸಿಲಿನಿಂದ ಕಂಗಾಲಾಗಿದ್ದ ಕರ್ನಾಟಕದ ಜನರಿಗೆ ಭಾರತ ಹವಾಮಾನ ಇಲಾಖೆ ತಂಪೆರೆಯ ಸುದ್ದಿ ನೀಡಿದೆ. IMD ರಾಜ್ಯದ ಹಲವು ಜಿಲ್ಲೆಗಳಲ್ಲಿ ಮಾರ್ಚ್ 21ರವರೆಗೆ ಗುಡುಗು-ಮಿಂಚು ಸಹಿತ ಮಳೆಯ ಸಾಧ್ಯತೆ ಇದೆ ಎಂದು ಮುನ್ಸೂಚನೆ ನೀಡಿದೆ. ಈ ಮಳೆಯು ಪೂರ್ವ ಮುಂಗಾರು (ಪ್ರಿ-ಮಾನ್ಸೂನ್) ಚಟುವಟಿಕೆಯ ಭಾಗವಾಗಿದ್ದು, ಉರಿಯುವ ಬಿಸಿಲಿನ ನಡುವೆ ಜನರಿಗೆ ಸ್ವಲ್ಪ ತಂಪಿನ ಅನುಭವ ನೀಡಲಿದೆ.
ಕರಾವಳಿ ಜಿಲ್ಲೆಗಳಲ್ಲಿ ಮಳೆಯ ಸಾಧ್ಯತೆ
ದಕ್ಷಿಣ ಕನ್ನಡ, ಉಡುಪಿ ಹಾಗೂ ಉತ್ತರ ಕನ್ನಡ ಜಿಲ್ಲೆಗಳಲ್ಲಿ ಸಂಜೆ ಮತ್ತು ರಾತ್ರಿ ವೇಳೆ ಅಲ್ಲಲ್ಲಿ ಗುಡುಗು-ಮಿಂಚು ಸಹಿತ ಮಳೆಯಾಗುವ ಸಾಧ್ಯತೆ ಇದೆ. ಕೆಲವು ಪ್ರದೇಶಗಳಲ್ಲಿ ಸಾಮಾನ್ಯ ಮಳೆಯೂ ಆಗಬಹುದು ಎಂದು ಹವಾಮಾನ ಇಲಾಖೆ ತಿಳಿಸಿದೆ.
ಮಲೆನಾಡು ಭಾಗದಲ್ಲೂ ಮಳೆ
ಕೊಡಗು, ಚಿಕ್ಕಮಗಳೂರು, ಶಿವಮೊಗ್ಗ ಹಾಗೂ ಹಾಸನ ಜಿಲ್ಲೆಗಳಲ್ಲಿ ಸಂಜೆ ಮತ್ತು ರಾತ್ರಿ ವೇಳೆ ಗುಡುಗು-ಮಿಂಚು ಸಹಿತ ಮಳೆಯಾಗುವ ಸಾಧ್ಯತೆ ಹೆಚ್ಚಿದೆ.
ವಿಶೇಷವಾಗಿ ಸಕಲೇಶಪುರ ಸುತ್ತಮುತ್ತ ಮಳೆಯ ಪ್ರಮಾಣ ಹೆಚ್ಚು ಇರಬಹುದು ಎಂದು ಅಂದಾಜಿಸಲಾಗಿದೆ.
READ THIS : RCB ಅಭಿಮಾನಿಗಳಿಗೆ ಭರ್ಜರಿ ಗುಡ್ ನ್ಯೂಸ್ – ಓದಲೇಬೇಕಾದ ಸ್ಟೋರಿ..!

ಉತ್ತರ ಕರ್ನಾಟಕದಲ್ಲೂ ಮಳೆಯ ಚಟುವಟಿಕೆ
ಧಾರವಾಡ, ಬೆಳಗಾವಿ, ಹಾವೇರಿ, ಗದಗ, ಬಾಗಲಕೋಟೆ, ದಾವಣಗೆರೆ ಹಾಗೂ ವಿಜಯನಗರ ಜಿಲ್ಲೆಗಳಲ್ಲಿ ಸಂಜೆ ವೇಳೆ ಗುಡುಗು ಸಹಿತ ಮಳೆಯಾಗುವ ಸಾಧ್ಯತೆ ಇದೆ. ಇತ್ತೀಚೆಗೆ ಧಾರವಾಡದಲ್ಲಿ ಅನಿರೀಕ್ಷಿತ ಮಳೆಯಾಗಿರುವುದೂ ಗಮನಾರ್ಹವಾಗಿದೆ.
ಉತ್ತರ ಒಳನಾಡಿನಲ್ಲಿ ಮೋಡದ ವಾತಾವರಣ
ಬಳ್ಳಾರಿ, ಕೊಪ್ಪಳ, ರಾಯಚೂರು, ವಿಜಯಪುರ, ಕಲಬುರಗಿ, ಬೀದರ್ ಹಾಗೂ ಯಾದಗಿರಿ ಜಿಲ್ಲೆಗಳಲ್ಲಿ ಮೋಡ ಕವಿದ ವಾತಾವರಣ ಮುಂದುವರಿಯಲಿದ್ದು, ಗಾಳಿ ಒತ್ತಡ ಹೆಚ್ಚಾದರೆ ತುಂತುರು ಮಳೆಯಾಗುವ ಸಾಧ್ಯತೆ ಇದೆ.
ಬೆಂಗಳೂರು ಸೇರಿದಂತೆ ದಕ್ಷಿಣ ಒಳನಾಡಿಗೂ ಮಳೆ ಸೂಚನೆ
ಮೈಸೂರು, ಮಂಡ್ಯ, ಚಾಮರಾಜನಗರ, ರಾಮನಗರ, ಬೆಂಗಳೂರು ನಗರ ಮತ್ತು ಗ್ರಾಮಾಂತರ, ಕೋಲಾರ, ಚಿಕ್ಕಬಳ್ಳಾಪುರ, ತುಮಕೂರು ಹಾಗೂ ಚಿತ್ರದುರ್ಗ ಜಿಲ್ಲೆಗಳಲ್ಲಿ ಅಲ್ಲಲ್ಲಿ ಮೋಡ ಕವಿದ ವಾತಾವರಣ ಕಂಡುಬರುವುದರ ಜೊತೆಗೆ ಸಂಜೆ-ರಾತ್ರಿ ವೇಳೆ ಮಳೆಯಾಗುವ ಸಾಧ್ಯತೆ ಇದೆ. ಬೆಂಗಳೂರಿನಲ್ಲಿ ಮಾರ್ಚ್ 16ರ ನಂತರ ಮಳೆಯ ಸೂಚನೆ ನೀಡಲಾಗಿದೆ.

ಇನ್ನು ಮಳೆಯು ರಾಜ್ಯದ ಹಲವು ಭಾಗಗಳಲ್ಲಿ ಮುಂದುವರಿಯುವ ಸಾಧ್ಯತೆ ಇರುವುದರಿಂದ ಕೃಷಿ ಚಟುವಟಿಕೆಗಳಿಗೆ ಸಹಾಯಕವಾಗಲಿದೆ ಎಂದು ನಿರೀಕ್ಷಿಸಲಾಗಿದೆ.
MUST WATCH : ಧರ್ಮಸ್ಥಳ ಗ್ರಾಮೀಣಾಭಿವೃದ್ದಿ ಯೋಜನೆಯಡಿ ಶಿರಾದಲ್ಲಿ ಕೆರೆಯ ಹೂಳೆತ್ತುವ ಕಾರ್ಯ




