Tumakuru| SSLC ಪೂರ್ವ ಪರೀಕ್ಷೆ; ಶೇ.30 ಫಲಿತಾಂಶ ಪಡೆದ ಶಾಲಾ ಮುಖ್ಯಸ್ಥರಿಗೆ ನೋಟಿಸ್ : DC.

SSLC ಎರಡನೇ ಪೂರ್ವ ಸಿದ್ಧತಾ ಪರೀಕ್ಷೆಯಲ್ಲಿ ಶೇ.30ಕ್ಕಿಂತ ಕಡಿಮೆ ಫಲಿತಾಂಶ ಪಡೆದ ಎಲ್ಲಾ ಶಾಲೆಗಳ ಮುಖ್ಯಶಿಕ್ಷಕರಿಗೆ ನೋಟಿಸ್ ಜಾರಿ ಮಾಡುವಂತೆ ಶಾಲಾ ಶಿಕ್ಷಣ ಇಲಾಖೆಯ ಎರಡೂ ಶೈಕ್ಷಣಿಕ ಜಿಲ್ಲೆಗಳ ಉಪ ನಿರ್ದೇಶಕರಿಗೆ ಜಿಲ್ಲಾಧಿಕಾರಿ ಶುಭ ಕಲ್ಯಾಣ್ ಸೂಚನೆ ನೀಡಿದ್ದಾರೆ.
ಕಾರ್ಯವೈಖರಿಯ ಬಗ್ಗೆ ತೀವ್ರ ಅಸಮಾಧಾನ
ಮಾರ್ಚ್ 18ರಿಂದ ಎಸ್ಎಸ್ಎಲ್ ಸಿ ಪರೀಕ್ಷಾ ಸಿದ್ಧತೆ ಬಗ್ಗೆ ಜಿಲ್ಲಾ ಪಂಚಾಯತ್ ಸಭಾಂಗಣದಲ್ಲಿ ಮಂಗಳವಾರ ಸಭೆ ನಡೆಸಿ ಮಾತನಾಡಿದ ಅವರು, ಪೂರ್ವ ಸಿದ್ಧತಾ ಪರೀಕ್ಷೆಯಲ್ಲಿ ಕನಿಷ್ಠ ಫಲಿತಾಂಶ ನೀಡದ ಶಾಲಾ ಮುಖ್ಯ ಶಿಕ್ಷಕರು ಹಾಗೂ ಸಂಬಂಧಿಸಿದ ಕ್ಷೇತ್ರ ಶಿಕ್ಷಣಾಧಿಕಾರಿಗಳನ್ನು ತರಾಟೆಗೆ ತೆಗೆದುಕೊಂಡರು.
ಪ್ರಸಕ್ತ ಸಾಲಿನ ಎಸ್.ಎಸ್.ಎಲ್.ಸಿ ಫಲಿತಾಂಶ ಕುಸಿದರೆ ಡಿಡಿಪಿಐ ಹಾಗೂ BEOಗಳೆ ಹೊಣೆಯಾಗಿರುವುದಾಗಿ ಪ್ರಗತಿ ಪರಿಶೀಲನಾ ಸಮಿತಿ ಸಭೆಯಲ್ಲಿ ಜಿಲ್ಲಾ ಉಸ್ತುವಾರಿ ಸಚಿವರು ಸೂಚಿಸಿದಾಗ್ಯೂ ಫಲಿತಾಂಶದ ಬಗ್ಗೆ ತಲೆಕೆಡಿಸಿಕೊಳ್ಳದ ಅಧಿಕಾರಿಗಳ ಬಗ್ಗೆ ತೀವ್ರ ಅಸಮಾಧಾನ ವ್ಯಕ್ತಪಡಿಸಿದರು.
ಇದನ್ನು ಓದಿ : ಲವ್ ಜಿಹಾದ್ ಆರೋಪ – ಯುವತಿಗೆ ಹೆಣ್ಣುಮಗು ಕೊಟ್ಟು ಆರೋಪಿ ಪರಾರಿ

ನೋಟಿಸ್ ಜಾರಿ ಮಾಡುವಂತೆ ಸೂಚನೆ
ಇತ್ತೀಚೆಗೆ ನಡೆದ ಎರಡನೇ ಪೂರ್ವ ಸಿದ್ಧತಾ ಪರೀಕ್ಷೆಯಲ್ಲಿ ಕಳಪೆ ಫಲಿತಾಂಶ ನೀಡಿದ ಶಾಲಾ ಮುಖ್ಯಶಿಕ್ಷಕರಿಗೆ ತಕ್ಷಣವೇ ನೋಟಿಸ್ ಜಾರಿ ಮಾಡುವಂತೆ ಸೂಚಿಸಿದರು. ಇದೇ 23ರಿಂದ ಮೂರನೇ ಪೂರ್ವ ಸಿದ್ಧತಾ ಪರೀಕ್ಷೆ ನಡೆಯಲಿರುವ ಹಿನ್ನೆಲೆಯಲ್ಲಿ, ಮುಖ್ಯ ಪರೀಕ್ಷೆಯವರೆಗೆ ಪ್ರತಿದಿನ ಬೆಳಿಗ್ಗೆ 6 ಗಂಟೆಯಿಂದ ವಿಶೇಷ ತರಗತಿಗಳನ್ನು ನಡೆಸಬೇಕು ಎಂದು ಆದೇಶಿಸಿದರು.
ಸರಿಯಾಗಿ ಕರ್ತವ್ಯ ನಿರ್ವಹಿಸುತ್ತಿಲ್ಲ
ಜಿಲ್ಲೆಯಲ್ಲಿ ಕಳೆದ ವರ್ಷದ ಫಲಿತಾಂಶಕ್ಕಿಂತ ಉತ್ತಮ ಸಾಧನೆ ಮಾಡುವ ನಿರೀಕ್ಷೆ ಇದ್ದು, ಶೇ.100 ಫಲಿತಾಂಶ ಸಾಧಿಸುವ ಗುರಿಯೊಂದಿಗೆ ಮಕ್ಕಳಿಗೆ ಸೂಕ್ತ ತಯಾರಿ ನೀಡಬೇಕು ಎಂದು ತಿಳಿಸಿದರು. ಪ್ರಸ್ತುತ ಪರೀಕ್ಷಾ ಪದ್ಧತಿ ಅತ್ಯಂತ ಸುಲಭವಾಗಿದ್ದು, ಈಗಲೂ ಮಕ್ಕಳನ್ನು ಪಾಸ್ ಮಾಡಿಸಲು ಆಗಲಿಲ್ಲ ಎಂದರೆ ತಾವು ಸರಿಯಾಗಿ ಕರ್ತವ್ಯ ನಿರ್ವಹಿಸುತ್ತಿಲ್ಲ ಎಂಬುದು ಸ್ಪಷ್ಟವಾಗುತ್ತಿದೆ ಎಂದು ಅಸಮಾಧಾನ ವ್ಯಕ್ತಪಡಿಸಿದರು.
ಶಾಲೆಗಳ ಕಾರ್ಯಚಟುವಟಿಕೆ ಪರಿಶೀಲನೆ
ತುಮಕೂರು ನಗರ ಸೇರಿದಂತೆ ನಗರ ಮತ್ತು ಪಟ್ಟಣ ಪ್ರದೇಶಗಳಲ್ಲಿ ಶೂನ್ಯ ಫಲಿತಾಂಶ ಪಡೆದ ಶಾಲೆಗಳ ಮುಖ್ಯಶಿಕ್ಷಕರ ಬಗ್ಗೆ ಅಸಮಾಧಾನ ವ್ಯಕ್ತಪಡಿಸಿದ DC, ಇಂದಿನಿಂದಲೇ ಗುಣಮಟ್ಟದ ಫಲಿತಾಂಶಕ್ಕೆ ಅಗತ್ಯ ಚಟುವಟಿಕೆಗಳು ಆರಂಭವಾಗಬೇಕು ಎಂದರು. ಸ್ವತಃ ಅಚ್ಚರಿ ಭೇಟಿ ನೀಡಿ ಶಾಲೆಗಳ ಕಾರ್ಯಚಟುವಟಿಕೆ ಪರಿಶೀಲನೆ ನಡೆಸುವುದಾಗಿ ತಿಳಿಸಿದರು.

ಇನ್ನು ಈ ಸಭೆಯಲ್ಲಿ ಶೇ.50ಕ್ಕಿಂತ ಕಡಿಮೆ ಫಲಿತಾಂಶ ಪಡೆದ ಶಾಲೆಗಳ ಮುಖ್ಯಶಿಕ್ಷಕರು, ಕ್ಷೇತ್ರ ಶಿಕ್ಷಣಾಧಿಕಾರಿಗಳು ಹಾಗೂ ಎರಡೂ ಶೈಕ್ಷಣಿಕ ಜಿಲ್ಲೆಗಳ ಶಾಲಾ ಶಿಕ್ಷಣ ಇಲಾಖೆ ಉಪ ನಿರ್ದೇಶಕರು ಉಪಸ್ಥಿತರಿದ್ದರು.
ಇದನ್ನು ನೋಡಿ : SC ,ST ವೋಟು ಮಾತ್ರ ಬೇಕು ಆದ್ರೆ ಯಾರು ಬಾಯಿ ಬಿಡಲ್ಲ – ಉಗ್ರಪ್ಪ




