Metro ಪ್ರಯಾಣಿಕರಿಗೆ ಗುಡ್ನ್ಯೂಸ್ – ನಮ್ಮ ಮೆಟ್ರೋ ದರ ಏರಿಕೆಗೆ ತಾತ್ಕಾಲಿಕ ತಡೆ..!

ಬೆಂಗಳೂರು Metro ಪ್ರಯಾಣಿಕರಿಗೆ ಮಹತ್ವದ ರಿಲೀಫ್ ಸಿಕ್ಕಿದೆ. ಸೋಮವಾರದಿಂದ ಜಾರಿಯಾಗಬೇಕಿದ್ದ ಬೆಂಗಳೂರು ಮೆಟ್ರೋ ಟಿಕೆಟ್ ದರ ಏರಿಕೆಯನ್ನು ತಾತ್ಕಾಲಿಕವಾಗಿ ಸ್ಥಗಿತಗೊಳಿಸಲಾಗಿದೆ. ಕೇಂದ್ರ ಸಚಿವರ ಸೂಚನೆಯ ಮೇರೆಗೆ ಈ ನಿರ್ಧಾರ ಕೈಗೊಳ್ಳಲಾಗಿದೆ ಎಂದು ಬೆಂಗಳೂರು ದಕ್ಷಿಣ ಸಂಸದ ತೇಜಸ್ವಿ ಸೂರ್ಯ ಮಾಹಿತಿ ನೀಡಿದ್ದಾರೆ.
ದರ ಏರಿಕೆಗೆ ತಾತ್ಕಾಲಿಕ ತಡೆ..!
ನಮ್ಮ ಮೆಟ್ರೋ (BMRCL) ಸಂಸ್ಥೆ ಟಿಕೆಟ್ ದರವನ್ನು ಶೇ.5ರಷ್ಟು ಹೆಚ್ಚಳ ಮಾಡಿ ಆದೇಶ ಹೊರಡಿಸಿದ್ದು, ಪರಿಷ್ಕೃತ ದರ ಪಟ್ಟಿ ಸೋಮವಾರದಿಂದ ಜಾರಿಗೆ ಬರಬೇಕಿತ್ತು. ಆದರೆ ಈ ಆದೇಶಕ್ಕೆ ಇದೀಗ ತಡೆ ಬಿದ್ದಿರುವುದರಿಂದ, ಪ್ರಯಾಣಿಕರು ನಿಟ್ಟುಸಿರು ಬಿಡುವಂತಾಗಿದೆ.

ಕೇಂದ್ರ ಸಚಿವರ ಮಧ್ಯಪ್ರವೇಶ
ಈ ವಿಷಯವಾಗಿ ಬೆಂಗಳೂರು ದಕ್ಷಿಣ ಸಂಸದ ತೇಜಸ್ವಿ ಸೂರ್ಯ ಹಾಗೂ ಬೆಂಗಳೂರು ಸೆಂಟ್ರಲ್ ಸಂಸದ ಪಿ.ಸಿ. ಮೋಹನ್ ಅವರು ಕೇಂದ್ರ ವಸತಿ ಮತ್ತು ನಗರ ವ್ಯವಹಾರಗಳ ಸಚಿವ ಮನೋಹರ್ ಲಾಲ್ ಕಟ್ಟರ್ ಅವರನ್ನು ಭೇಟಿ ಮಾಡಿ ಚರ್ಚೆ ನಡೆಸಿದ್ದರು. ಮೆಟ್ರೋ ದರ ಏರಿಕೆಯನ್ನು ಮರುಪರಿಶೀಲಿಸುವಂತೆ ಸಂಸದರು ಮನವಿ ಮಾಡಿದ್ದರು.
ಸಂಸದರ ಮನವಿಗೆ ಸ್ಪಂದಿಸಿರುವ ಕೇಂದ್ರ ಸಚಿವ ಕಟ್ಟರ್ ಅವರು, ದರ ಏರಿಕೆ ಆದೇಶವನ್ನು ಸದ್ಯಕ್ಕೆ ಸ್ಥಗಿತಗೊಳಿಸುವಂತೆ ಸೂಚನೆ ನೀಡಿದ್ದಾರೆ. ಹೀಗಾಗಿ ಸೋಮವಾರದಿಂದ ಯಾವುದೇ ಮೆಟ್ರೋ ದರ ಏರಿಕೆ ಜಾರಿಗೆ ಬರೋದಿಲ್ಲ ಎಂದು ತೇಜಸ್ವಿ ಸೂರ್ಯ ಸ್ಪಷ್ಟಪಡಿಸಿದ್ದಾರೆ.
ಇದನ್ನು ಓದಿ : ಬೆಂಗಳೂರು Airport ನಲ್ಲಿ ಕೋಟಿ ಕೋಟಿ ಮೌಲ್ಯದ ಗಾಂಜಾ ವಶ

ಸಮಿತಿ ಬದಲಾವಣೆಗೂ ಸಮ್ಮತಿ?
ಮೆಟ್ರೋ ದರ ನಿಗದಿ ಸಮಿತಿಯ (Fare Fixation Committee) ಬದಲಾವಣೆ ಕುರಿತೂ ಮಹತ್ವದ ಚರ್ಚೆ ನಡೆದಿದೆ. ಒಂದು ವೇಳೆ ರಾಜ್ಯಸರ್ಕಾರವು ಸಮಿತಿ ಬದಲಾವಣೆಗೆ ಕೋರಿ ಮನವಿ ಸಲ್ಲಿಸಿದರೆ, ಈ ಕುರಿತು ತೀರ್ಮಾನ ಕೈಗೊಳ್ಳುವ ಭರವಸೆಯನ್ನು ಕೇಂದ್ರ ಸಚಿವರು ನೀಡಿದ್ದಾರೆ ಎನ್ನಲಾಗಿದೆ.
ಒಟ್ಟಿನಲ್ಲಿ ಆರ್ಥಿಕ ಹೊರೆಯ ಭಯದಲ್ಲಿದ್ದ ಮೆಟ್ರೋ ಪ್ರಯಾಣಿಕರಿಗೆ ಸಂಸದರ ಮಧ್ಯಪ್ರವೇಶದಿಂದ ಸದ್ಯಕ್ಕೆ ರಿಲೀಫ್ ಸಿಕ್ಕಂತಾಗಿದೆ.

ಇದನ್ನು ನೋಡಿ : ಈ ಸುದ್ದಿ ನೋಡಿದ್ರೆ ನೀವು ಕಣ್ಣೀರಾಕ್ತೀರ – ಹೆತ್ತ ತಾಯಿಯ ಕರುಳು ಹಿಂಡುವ ಕಥೆ




