Belagavi : ಹಳ್ಳಿ ಸಮಸ್ಯೆ ಹೇಳಿದ್ದಕ್ಕೆ ಯುವಕನ ಬೆನ್ನು ಕಚ್ಚಿದ ಪಂಚಾಯತ್ ಅಧ್ಯಕ್ಷ.. ತಾಯಿಯ ತಾಳಿ ಸರವನ್ನೂ ಕಿತ್ತ ಆರೋಪ !

ಗ್ರಾಮದ ಸಮಸ್ಯೆಗಳನ್ನ ಅಧಿಕಾರಿಗಳ ಹಾಗೂ ಸ್ಥಳೀಯ ಶಾಸಕ ಗಮನಕ್ಕೆ ತಂದು ಸರಿಪಡಿಸುವ ಕೆಲಸ ಗ್ರಾಮ ಪಂಚಾಯತ್ ಅಧ್ಯಕ್ಷರದ್ದಾಗಿರುತ್ತೆ. ಆದ್ರೆ ಇಲ್ಲೊಬ್ಬ ಅಧ್ಯಕ್ಷ ಸಮಸ್ಯೆ ಹೇಳಲು ಬಂದ ಗ್ರಾಮಸ್ಥನನ್ನೇ ಕಚ್ಚಿ ಗಾಯಗೊಳಿಸಿ ವಿಕೃತಿ ಮೆರೆದಿದ್ದಾನೆ ಎನ್ನುವ ಆರೋಪ ಕೇಳಿ ಬಂದಿದೆ.
ಹಳ್ಳಿ ಸಮಸ್ಯೆ ಹೇಳಿದ್ದಕ್ಕೆ ಯುವಕನ ಬೆನ್ನು ಕಚ್ಚಿದ ಪಂಚಾಯತ್ ಅಧ್ಯಕ್ಷ
ಹೌದು Belagavi ಜಿಲ್ಲೆಯ ಸವದತ್ತಿ ತಾಲೂಕಿನ ಶಿಂಧೋಗಿ ಗ್ರಾಮದಲ್ಲಿ ಅಮಾನವೀಯ ಘಟನೆ ಬೆಳಕಿಗೆ ಬಂದಿದೆ. ಗ್ರಾಮದ ಮೂಲಭೂತ ಸಮಸ್ಯೆ ಬಗ್ಗೆ ಅಧಿಕಾರಿಗಳಿಗೆ ದೂರು ನೀಡಲು ಹೋದ ಯುವಕನ ಮೇಲೆ ಗ್ರಾಮ ಪಂಚಾಯತ್ ಅಧ್ಯಕ್ಷರು ತಮ್ಮ ಸಂಬಂಧಿಕರೊಂದಿಗೆ ಸೇರಿ ಮನಬಂದಂತೆ ಹಲ್ಲೆ ನಡೆಸಿದ್ದಾರೆ. ಅಲ್ಲದೇ ಯುವಕನ ಬೆನ್ನು ಕಚ್ಚಿ ವಿಕೃತಿ ಮೆರೆದಿದ್ದಾರೆ ಎಂಬ ಗಂಭೀರ ಆರೋಪ ಕೇಳಿಬಂದಿದೆ.
ಘಟನೆ ಹಿನ್ನಲೆ
ಹಲ್ಲೆಗೊಳಗಾದ ಯುವಕನನ್ನು ಶಿಂಧೋಗಿ ಗ್ರಾಮದ ಹನುಮಂತ ಕರಿಕಟ್ಟಿ (30) ಎಂದು ಗುರುತಿಸಲಾಗಿದೆ. ಗ್ರಾಮದ ಶಾಲೆಯ ಸಮೀಪ ರಸ್ತೆಯ ಮೇಲೆ ಚರಂಡಿ ನೀರು ನಿಂತು ಸಾರ್ವಜನಿಕರಿಗೆ, ಶಾಲಾ ಮಕ್ಕಳು ಹಾಗೂ ಅಂಗನವಾಡಿ ಮಕ್ಕಳಿಗೆ ತೀವ್ರ ತೊಂದರೆ ಉಂಟಾಗುತ್ತಿತ್ತು. ಈ ಸಮಸ್ಯೆ ಕುರಿತು ಹನುಮಂತ ಗ್ರಾಮ ಪಂಚಾಯತ್ ಅಭಿವೃದ್ಧಿ ಅಧಿಕಾರಿ (PDO)ಗೆ ದೂರು ನೀಡಲು ತೆರಳಿದ್ದರು.

ಇದನ್ನು ಓದಿ : ವಿರಾಟ್ ಕೊಹ್ಲಿ ಇನ್ಸ್ಟಾಗ್ರಾಮ್ Account ಇದ್ದಕ್ಕಿದ್ದಂತೆ ಮಾಯ.!
ಬೆನ್ನು ಕಚ್ಚಿ ವಿಕೃತಿ
ಹನುಮಂತ ಪಿಡಿಓ ಅವರಿಗೆ ಚರಂಡಿ ಸಮಸ್ಯೆಯ ಬಗ್ಗೆ ವಿವರಿಸುತ್ತಿದ್ದ ವೇಳೆ ಏಕಾಏಕಿ ಅಲ್ಲಿಗೆ ಬಂದ ಶಿಂಧೋಗಿ ಗ್ರಾಮ ಪಂಚಾಯತ್ ಅಧ್ಯಕ್ಷ ದುರ್ಗಪ್ಪ ಟೋಪೋಜಿ ಹಾಗೂ ಆತನ ಸಂಬಂಧಿಕರು ಗಲಾಟೆ ಆರಂಭಿಸಿದ್ದಾರೆ. ಮಾತಿಗೆ ಮಾತು ಬೆಳೆದು, ಅಧ್ಯಕ್ಷ ದುರ್ಗಪ್ಪ ಹನುಮಂತನ ಮೇಲೆ ಚಪ್ಪಲಿಯಿಂದ ಹಲ್ಲೆ ಮಾಡಿದ್ದಲ್ಲದೆ, ಆತನ ಬೆನ್ನಿಗೆ ಬಲವಾಗಿ ಕಚ್ಚಿದ್ದಾರೆ ಎನ್ನಲಾಗಿದೆ. ಪಿಡಿಓ ಕಣ್ಣೆದುರೇ ಈ ಘಟನೆ ನಡೆದಿದೆ ಎಂದು ಸಂತ್ರಸ್ತ ಆರೋಪಿಸಿದ್ದಾರೆ.
ತಾಯಿಯ ತಾಳಿ ಸರವನ್ನೂ ಕಿತ್ತ ಆರೋಪ !
ಇಷ್ಟಕ್ಕೇ ಸುಮ್ಮನಾಗದ ಆರೋಪಿಗಳು ಹನುಮಂತನ ಮನೆಗೆ ನುಗ್ಗಿ ದಾಂಧಲೆ ನಡೆಸಿದ್ದು, ಮನೆಯಲ್ಲಿದ್ದ ಹನುಮಂತನ ತಾಯಿ ಹಾಗೂ ಅಜ್ಜಿಯ ಮೇಲೆ ಬಡಿಗೆ ಮತ್ತು ಸಲಕೆಯಿಂದ ಹಲ್ಲೆ ಮಾಡಿದ್ದಾರೆ ಎನ್ನಲಾಗಿದೆ. ಹಲ್ಲೆ ವೇಳೆ ಹನುಮಂತನ ತಾಯಿಯ ಕೊರಳಲ್ಲಿದ್ದ ತಾಳಿಯನ್ನು ಕಿತ್ತುಕೊಂಡ ಆರೋಪವೂ ಕೇಳಿಬಂದಿದೆ.
ಹಳೆಯ ದ್ವೇಷದ ಹಿನ್ನೆಲೆ?
ಈ ಹಿಂದೆ ಗ್ರಾಮ ಪಂಚಾಯತ್ನಲ್ಲಿ ನಡೆದಿದ್ದ ಕೆಲವು ಅಕ್ರಮಗಳ ಬಗ್ಗೆ ಹನುಮಂತ ಪ್ರಶ್ನೆ ಮಾಡಿದ್ದರು ಎನ್ನಲಾಗಿದೆ. ಅದೇ ಹಳೆಯ ದ್ವೇಷವನ್ನು ಮನಸ್ಸಿನಲ್ಲಿಟ್ಟುಕೊಂಡು, ಈಗ ಸಮಸ್ಯೆ ಹೇಳಲು ಹೋದಾಗ ಈ ರೀತಿ ಹಲ್ಲೆ ನಡೆಸಲಾಗಿದೆ ಎಂಬುದು ಹನುಮಂತನ ಆರೋಪ. ಗಾಯಗೊಂಡ ಹನುಮಂತ ಹಾಗೂ ವೃದ್ಧ ಮಹಿಳೆಯನ್ನು ಸವದತ್ತಿ ಸರ್ಕಾರಿ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ.

ತೀವ್ರ ಆಕ್ರೋಶಕ್ಕೆ ಕಾರಣ
ಈ ಘಟನೆ ಸವದತ್ತಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದ್ದು, ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ಆರಂಭಿಸಿದ್ದಾರೆ. ಗ್ರಾಮದ ಅಭಿವೃದ್ಧಿ ಕುರಿತು ಧ್ವನಿ ಎತ್ತಿದ ವ್ಯಕ್ತಿಯ ಮೇಲೆಯೇ ಈ ರೀತಿ ಹಲ್ಲೆ ನಡೆಸಿರುವುದು ಸಾರ್ವಜನಿಕ ವಲಯದಲ್ಲಿ ತೀವ್ರ ಆಕ್ರೋಶಕ್ಕೆ ಕಾರಣವಾಗಿದೆ.
ಇದನ್ನು ನೋಡಿ : ಸೊರಲಮಾವು ಗ್ರಾಮದಲ್ಲಿ ಆಕಸ್ಮಿಕ ಬೆಂಕಿ – ಬೆಳೆ ಕಳೆದುಕೊಂಡು ರೈತ ಕಂಗಾಲು




