Tumakuru : ಸಿದ್ದಗಂಗಾ ಮಠಕ್ಕೆ ನೀರಿನ ಹಾಹಾಕಾರ ಎದುರಾಗುವ ಆತಂಕ ಶುರುವಾಗಿದೆ.

ತುಮಕೂರಿನ ಸಿದ್ದಗಂಗಾಮಠಕ್ಕೆನೀರಿನ ಹಾಹಾಕಾರ ಎದುರಾಗುವ ಆತಂಕ ಶುರುವಾಗಿದೆ. ಕೆಐಎಡಿಬಿ (KIADB) ಅಧಿಕಾರಿಗಳು ಪಂಪ್ಹೌಸ್ನ ವಿದ್ಯುತ್ ಬಿಲ್ ಪಾವತಿಸದ ಪರಿಣಾಮ ಬೆಸ್ಕಾಂ ವಿದ್ಯುತ್ ಸಂಪರ್ಕ ಕಡಿತಗೊಳಿಸಲಾಗಿದೆ. ಹಾಗಾಗಿ ಹೊನ್ನೆನಹಳ್ಳಿ ಕೆರೆಯಿಂದ ದೇವರಾಯಪಟ್ಟಣ ಕೆರೆಗೆ ನೀರು ಪಂಪ್ ಆಗದೆ, ದೇವರಾಯಪಟ್ಟಣ ಕೆರೆಯ ನೀರು ದಿನೇದಿನೇ ಬರಿದಾಗುತ್ತಿದೆ.
ಸಿದ್ದಗಂಗಾ ಮಠಕ್ಕೆ ನೋಟಿಸ್
ಕಳೆದ ವರ್ಷ ಕೈಗಾರಿಕಾ ಸಚಿವ ಎಂ.ಬಿ.ಪಾಟೀಲ್ Tumakuru ಸಿದ್ದಗಂಗಾ ಮಠ ಕ್ಕೆ ಕೊಟ್ಟ ಮಾತನ್ನು ಉಳಿಸಿಕೊಂಡಿಲ್ಲ. ಅದರ ಪರಿಣಾಮ ಈ ವರ್ಷ ಮಠಕ್ಕೆ ನೀರಿನ ಅಭಾವ ಎದುರಾಗಿದೆ. ಹೊನ್ನೆನಹಳ್ಳಿ ಕೆರೆಯಿಂದ ದೇವರಾಯಪಟ್ಟಣ ಕೆರೆಗೆ ನೀರು ಹರಿಸಿ, ಅಲ್ಲಿಂದ ಸಿದ್ದಗಂಗಾ ಮಠಕ್ಕೆ ನೀರನ್ನು ಪಂಪ್ ಮಾಡಲಾಗುತ್ತದೆ. ಆದರೆ ಕಳೆದ ವರ್ಷ ಹೊನ್ನೆನಹಳ್ಳಿ ಕೆರೆಯಿಂದ ನೀರು ಪಂಪ್ ಮಾಡಿದ ಹಿನ್ನೆಲೆಯಲ್ಲಿ ಸುಮಾರು 70 ಲಕ್ಷ ರೂಪಾಯಿ ವಿದ್ಯುತ್ ಬಿಲ್ ಪಾವತಿಸುವಂತೆ ಕೆಐಎಡಿಬಿ ಅಧಿಕಾರಿಗಳು ಮಠಕ್ಕೆ ನೋಟಿಸ್ ನೀಡಿದ್ದರು. ಅಸಲಿಗೆ ಮಠ ಒಂದು ಹನಿ ನೀರನ್ನೂ ಉಪಯೋಗಿಸಿರಲಿಲ್ಲ.
ವಿದ್ಯುತ್ ಬಿಲ್ ಅನ್ನು ಸರ್ಕಾರವೇ ಭರಿಸುತ್ತದೆ
ಈ ವಿಚಾರವಾಗಿ ಕೈಗಾರಿಕಾ ಸಚಿವ ಎಂ.ಬಿ. ಪಾಟೀಲ್ ಮಧ್ಯಪ್ರವೇಶಿಸಿ, “ಮಠ ಒಂದು ನಯಾಪೈಸೆಯೂ ಪಾವತಿಸಬೇಕಿಲ್ಲ, ಸಂಪೂರ್ಣ ವಿದ್ಯುತ್ ಬಿಲ್ ಅನ್ನು ಸರ್ಕಾರವೇ ಭರಿಸುತ್ತದೆ” ಎಂದು ಭರವಸೆ ನೀಡಿದ್ದರು. ಆದರೆ ಆ ಭರವಸೆ ನೀಡಿದಕ್ಕೆ ಒಂದು ವರ್ಷ ಕಳೆದರೂ ಸಹ ಕೆಐಎಡಿಬಿ ವತಿಯಿಂದ ವಿದ್ಯುತ್ ಬಿಲ್ ಪಾವತಿ ಆಗಿಲ್ಲ.
ವಿದ್ಯುತ್ ಸಂಪರ್ಕ ಕಡಿತ
ಇನ್ನು ಬಿಲ್ ಪಾವತಿಯಾಗದ ಹಿನ್ನೆಲೆ ಬೆಸ್ಕಾಂ ಅಧಿಕಾರಿಗಳು ಹೊನ್ನೆನಹಳ್ಳಿಯ ಪಂಪ್ ಘಟಕದ ವಿದ್ಯುತ್ ಸಂಪರ್ಕವನ್ನು ಕಡಿತಗೊಳಿಸಿದ್ದಾರೆ. ಇದರ ಪರಿಣಾಮವಾಗಿ ಕಳೆದ 6 ರಿಂದ 8 ತಿಂಗಳಿನಿಂದ ಹೊನ್ನೆನಹಳ್ಳಿ ಕೆರೆಯಿಂದ ದೇವರಾಯಪಟ್ಟಣ ಕೆರೆಗೆ ನೀರು ಹರಿಯುತ್ತಿಲ್ಲ. ಇದರಿಂದ ದೇವರಾಯಪಟ್ಟಣ ಕೆರೆಯ ನೀರಿನ ಬರಿದಾಗುತ್ತಿದೆ.

ಇದನ್ನು ಓದಿ : Hassan|ಒಂದೇ ಮಹಿಳೆಯ ಜತೆಗೆ ಇಬ್ಬರ ಅನೈತಿಕ ಸಂಬಂಧ – ವ್ಯಕ್ತಿ ಬಲಿ..!!
ಅಧಿಕಾರಿಗಳಿಂದ ಅಸಡ್ಡೆಯ ಉತ್ತರ
ಈ ಕುರಿತು ಪ್ರಶ್ನೆಗಳಿಗೆ ಉತ್ತರಿಸಬೇಕಾದ ಕೆಐಎಡಿಬಿ ಅಧಿಕಾರಿಗಳು ಸ್ಪಷ್ಟ ಪ್ರತಿಕ್ರಿಯೆ ನೀಡದೆ ನುಣುಚಿಕೊಳ್ಳುತ್ತಿದ್ದಾರೆ. ಕೆಐಎಡಿಬಿ ಮುಖ್ಯ ಎಂಜಿನಿಯರ್ ಅನಿಲ್ಕುಮಾರ್ ರಾಥೋಡ್ ಅವರು ಮಾಹಿತಿ ಕೇಳಿದರೆ “ಮೂರ್ನಾಲ್ಕು ದಿನ ಬಿಟ್ಟು ಬನ್ನಿ” ಎಂದು ಅಸಡ್ಡೆಯ ಉತ್ತರ ನೀಡಿದ್ದಾರೆ.
ಮಠಕ್ಕೆ ತೀವ್ರ ನೀರಿನ ಅಭಾವ
ಇನ್ನು ಫೆಬ್ರುವರಿ 6ರಿಂದ 20ರವರೆಗೆ 15 ದಿನಗಳ ಕಾಲ ಸಿದ್ದಗಂಗಾ ಮಠದಲ್ಲಿ ವಾರ್ಷಿಕ ಜಾತ್ರೆ ನಡೆಯಲಿದ್ದು, ಪ್ರತಿದಿನ ಲಕ್ಷಾಂತರ ಭಕ್ತಾಧಿಗಳಿಗೆ ಊಟ, ಸ್ನಾನ ಸೇರಿದಂತೆ ಅಗತ್ಯ ಕಾರ್ಯಗಳಿಗೆ ನೀರು ಬೇಕಾಗುತ್ತದೆ. ಜೊತೆಗೆ ಮಠದಲ್ಲಿ ವ್ಯಾಸಂಗ ಮಾಡುತ್ತಿರುವ ಸುಮಾರು 10 ಸಾವಿರ ವಿದ್ಯಾರ್ಥಿಗಳ ದಿನನಿತ್ಯದ ಬಳಕೆಗೆ ಅಪಾರ ಪ್ರಮಾಣದ ನೀರು ಅವಶ್ಯಕವಾಗಿದೆ. ಮಾರ್ಚ್ ಮಧ್ಯ ಭಾಗಕ್ಕೆ ದೇವರಾಯಪಟ್ಟಣ ಕೆರೆಯ ನೀರು ಸಂಪೂರ್ಣ ಖಾಲಿಯಾಗುವ ಸಾಧ್ಯತೆ ಇದ್ದು, ಅಕ್ಷರಶಃ ಮಠಕ್ಕೆ ತೀವ್ರ ನೀರಿನ ಅಭಾವ ಎದುರಾಗುವ ಆತಂಕ ಕಾಡುತ್ತಿದೆ.
ಕೇವಲ ಮಾತಿಗಷ್ಟೇ ಸೀಮಿತವಾಗಿದೆ
ಕೆಐಎಡಿಬಿ ಅಧಿಕಾರಿಗಳು ತಕ್ಷಣವೇ ಬಾಕಿ ವಿದ್ಯುತ್ ಬಿಲ್ ಪಾವತಿಸಿ, ಪಂಪ್ಹೌಸ್ಗೆ ವಿದ್ಯುತ್ ಸಂಪರ್ಕ ಪುನರ್ಸ್ಥಾಪಿಸಿದರೆ ಮಾತ್ರ ಹೊನ್ನೆನಹಳ್ಳಿ ಕೆರೆಯಿಂದ ದೇವರಾಯಪಟ್ಟಣ ಕೆರೆಗೆ ನೀರು ಹರಿಯಲಿದೆ. ಸರ್ಕಾರದ ಆರ್ಥಿಕ ಸ್ಥಿತಿ ಸರಿ ಇಲ್ಲವೆಂದು ಮಠವೇ ಬಿಲ್ ಭರಿಸಬೇಕು ಎಂದು ಕಳೆದ ವರ್ಷ ಅಧಿಕಾರಿಗಳು ಪತ್ರ ಬರೆದಿದ್ದು ಸರ್ಕಾರಕ್ಕೆ ಮುಜುಗರ ತಂದಿತ್ತು. ಅದರಿಂದ ತಪ್ಪಿಸಿಕೊಳ್ಳಲು ಸಚಿವ ಎಂ.ಬಿ. ಪಾಟೀಲ್ ಸರ್ಕಾರವೇ ಸಂಪೂರ್ಣ ವೆಚ್ಚ ಭರಿಸಲಿದೆ ಎಂದು ಹೇಳಿದ್ದರೂ, ಆ ಘೋಷಣೆ ಕೇವಲ ಮಾತಿಗಷ್ಟೇ ಸೀಮಿತವಾಗಿದೆ ಎಂಬ ಟೀಕೆಗಳು ಕೇಳಿಬರುತ್ತಿವೆ.
ನೀರಿನ ಸಮಸ್ಯೆಗೆ ಶಾಶ್ವತ ಪರಿಹಾರ ಒದಗಿಸ್ತಾರಾ..?
ಈಗಾದರೂ ಸರ್ಕಾರ ಮತ್ತು ಕೆಐಎಡಿಬಿ ಅಧಿಕಾರಿಗಳು ತುರ್ತು ಕ್ರಮ ಕೈಗೊಂಡು ಸಿದ್ದಗಂಗಾ ಮಠದ ನೀರಿನ ಸಮಸ್ಯೆಗೆ ಶಾಶ್ವತ ಪರಿಹಾರ ಒದಗಿಸಬೇಕೆಂಬುದು ಸಾರ್ವಜನಿಕರ ಒತ್ತಾಯವಾಗಿದೆ.

ಇದನ್ನು ನೋಡಿ : ಶಿರಾದಲ್ಲಿ LADY DOCTOR ಲಂಚಾವತಾರ ಆಡಳಿತಾಧಿಕಾರಿ ಏನಂದ್ರು ನೀವೆ ನೋಡಿ




