ಕನ್ನಡ ಜ್ಞಾನ ದಾಸೋಹಿ ಎಂದೇ ಪ್ರಸಿದ್ಧರಾಗಿರುವ ಮಂಡ್ಯ ಜಿಲ್ಲೆಯ ಅಂಕೇಗೌಡರಿಗೆ ಸಾಹಿತ್ಯ ಮತ್ತು ಶಿಕ್ಷಣ ಕ್ಷೇತ್ರದಲ್ಲಿ 2026ನೇ ಸಾಲಿನ Padma Shri ಪ್ರಶಸ್ತಿ ಲಭಿಸಿದೆ.

ಕನ್ನಡ ಜ್ಞಾನ ದಾಸೋಹಿಯೆಂದೇ ಖ್ಯಾತರಾಗಿರುವ ಮಂಡ್ಯ ಜಿಲ್ಲೆಯ ಅಂಕೇಗೌಡರಿಗೆ 2026ನೇ ಸಾಲಿನ Padma Shri ಪ್ರಶಸ್ತಿ ಲಭಿಸಿದೆ.
ಸಾಹಿತ್ಯ ಮತ್ತು ಶಿಕ್ಷಣ ಕ್ಷೇತ್ರದಲ್ಲಿ ಅವರ ಅನನ್ಯ ಸೇವೆಯನ್ನು ಗುರುತಿಸಿ ಕೇಂದ್ರ ಸರ್ಕಾರ ಈ ಗೌರವ ಘೋಷಣೆ ಮಾಡಿದೆ.
ಗ್ರಾಮೀಣ ಪ್ರದೇಶದಲ್ಲಿ ಹುಟ್ಟಿದ ಅಪರೂಪದ ಜ್ಞಾನ ಭಂಡಾರ
ಮಂಡ್ಯ ಜಿಲ್ಲೆಯ ಪಾಂಡವಪುರ ತಾಲೂಕಿನ ಚಿನಕುರಳಿ ಗ್ರಾಮದ ಅಂಕೇಗೌಡರು, ಗ್ರಾಮೀಣ ಪ್ರದೇಶದಲ್ಲೇ ಅಪಾರ ಜ್ಞಾನ ಭಂಡಾರವನ್ನು ನಿರ್ಮಿಸಿದ್ದಾರೆ.
ಪಾಂಡವಪುರದಿಂದ ಕೇವಲ ಒಂದು ಕಿಲೋಮೀಟರ್ ದೂರದ ಹರಳಹಳ್ಳಿಯಲ್ಲಿ ಅವರು ನಿರ್ಮಿಸಿರುವ ‘ಪುಸ್ತಕ ಮನೆ’ ಲಕ್ಷಾಂತರ ಪುಸ್ತಕಗಳ ಸಂಗ್ರಹವನ್ನು ಹೊಂದಿದೆ.
ಒಂದೇ ಸೂರಿನಡಿ ವಿಶ್ವದ ಪ್ರಮುಖ ಗ್ರಂಥಗಳು
ಒಂದೊಂದೇ ಪುಸ್ತಕವನ್ನು ಸಂಗ್ರಹಿಸುತ್ತಾ ಆರಂಭವಾದ ಪ್ರಯತ್ನ ಇಂದು ದೊಡ್ಡ ಖಾಸಗಿ ಗ್ರಂಥಾಲಯವಾಗಿ ಬೆಳೆದಿದೆ. ಇಲ್ಲಿ ಯಾವುದೇ ವಿಷಯಕ್ಕೆ ಸಂಬಂಧಿಸಿದ ಪುಸ್ತಕಗಳನ್ನು ಓದಲು ಹಾಗೂ ವೀಕ್ಷಿಸಲು ಅವಕಾಶವಿದೆ.
ವಿಶ್ವದ ಪ್ರಮುಖ ಗ್ರಂಥಗಳು ಒಂದೇ ಸೂರಿನಡಿ ಲಭ್ಯವಿರುವುದು ಈ ಪುಸ್ತಕ ಮನೆಯ ವಿಶೇಷತೆ.
ಅಂಕೇಗೌಡರ ಪುಸ್ತಕ ಪ್ರೇಮಕ್ಕೆ ಕಾರಣವಾಗಿದ್ದು ಅವರ ಶಾಲಾ ದಿನಗಳು. ಶಾಲಾ ಗ್ರಂಥಾಲಯದಲ್ಲಿ ಪುಸ್ತಕಗಳನ್ನು ಮನೆಗೆ ತೆಗೆದುಕೊಂಡು ಹೋಗಲು ಅವಕಾಶ ಇಲ್ಲದ ಹಿನ್ನೆಲೆ, ಸ್ವಂತವಾಗಿ ಪುಸ್ತಕಗಳನ್ನು ಸಂಗ್ರಹಿಸಲು ಅವರು ಮುಂದಾದರು.
ಇದೇ ಆಸಕ್ತಿ ಮುಂದಾಗಿ ವಿಶ್ವದ ದೊಡ್ಡ ಖಾಸಗಿ ಗ್ರಂಥಾಲಯ ನಿರ್ಮಾಣಕ್ಕೆ ಕಾರಣವಾಯಿತು.
ಈ ಪುಸ್ತಕ ಮನೆ ಈಗಾಗಲೇ ಲಿಮ್ಕಾ ಬುಕ್ ಆಫ್ ರೆಕಾರ್ಡ್ನಲ್ಲಿ ಸ್ಥಾನ ಪಡೆದಿದೆ. ಆರಂಭದಲ್ಲಿ ಸಣ್ಣ ಕಟ್ಟಡದಲ್ಲಿ ಶುರುವಾದ ಗ್ರಂಥಾಲಯಕ್ಕೆ, ಉದ್ಯಮಿ ಹರಿಕೋಡೆ ನಿರ್ಮಿಸಿ ನೀಡಿದ ಹೊಸ ಕಟ್ಟಡ ಮತ್ತೊಂದು ಆಯಾಮ ನೀಡಿದೆ.
ಅಂಕೇಗೌಡರ ಈ ಮಹತ್ತರ ಸಾಧನೆಗೆ ಅವರ ಪತ್ನಿಯ ಸಹಕಾರವೂ ಅಮೂಲ್ಯ. ಪುಸ್ತಕಗಳ ಜೋಡಣೆ, ಸ್ವಚ್ಛತೆ ಸೇರಿದಂತೆ ಹಲವು ಕಾರ್ಯಗಳಲ್ಲಿ ಅವರು ಪತಿಯೊಂದಿಗೆ ಕೈಜೋಡಿಸಿದ್ದಾರೆ.
ಪುಸ್ತಕ ಲೋಕಕ್ಕೆ ಆಹ್ವಾನಿಸುವ ‘ಪುಸ್ತಕ ಮನೆ’
ಒಮ್ಮೆ ಈ ಪುಸ್ತಕ ಮನೆಗೆ ಕಾಲಿಟ್ಟರೆ, ಜ್ಞಾನ ಲೋಕವೇ ನಿಮ್ಮ ಕಣ್ಣ ಮುಂದೆ ತೆರೆದುಕೊಳ್ಳುತ್ತದೆ. ಪಾಂಡವಪುರ–ಶ್ರೀರಂಗಪಟ್ಟಣ ಹೆದ್ದಾರಿಯಲ್ಲಿ ಪ್ರಯಾಣಿಸುವವರನ್ನು ಸೂಜಿಗಲ್ಲಿನಂತೆ ಸೆಳೆಯುವ ಈ ಪುಸ್ತಕ ಮನೆ, ಜ್ಞಾನದ ಹಸಿವನ್ನು ಹೆಚ್ಚಿಸುವ ತಾಣವಾಗಿದೆ.
ಪುಸ್ತಕ ಪ್ರೇಮವೇ ಅಂಕೇಗೌಡರನ್ನು ಎತ್ತರದ ಸ್ಥಾನಕ್ಕೆ ಕೊಂಡೊಯ್ದಿದೆ. ಗ್ರಾಮೀಣ ಪ್ರದೇಶದಲ್ಲೇ ಇಂತಹ ಅಪರೂಪದ ಗ್ರಂಥಾಲಯ ನಿರ್ಮಿಸಿದ ಅವರ ಸೇವೆಯನ್ನು ಸರ್ಕಾರ ಗುರುತಿಸಿ ಪದ್ಮಶ್ರೀ ಪ್ರಶಸ್ತಿಗೆ ಆಯ್ಕೆ ಮಾಡಿದೆ.




