Honnavar ದಲ್ಲಿ ಅಪಘಾತವೆಂದು ಹೇಳಲಾಗಿದ್ದ ಪ್ರಕರಣ ಹಣಕ್ಕಾಗಿ ನಡೆದ ಪೂರ್ವಯೋಜಿತ ಕೊಲೆ ಎಂಬುದು ಪೊಲೀಸರ ತನಿಖೆಯಲ್ಲಿ ದೃಢಪಟ್ಟಿದ್ದು, ಆರೋಪಿಯನ್ನು ಬಂಧಿಸಲಾಗಿದೆ.

ಉತ್ತರ ಕನ್ನಡ ಜಿಲ್ಲೆಯ Honnavar ತಾಲೂಕಿನ ಸೂಳೆಮುರ್ಕಿ ಕ್ರಾಸ್ ಬಳಿ ಸಂಭವಿಸಿದ್ದ ಇಬ್ಬರ ಸಜೀವ ದಹನ ಪ್ರಕರಣದಲ್ಲಿ ಭೀಕರ ಸತ್ಯ ಬೆಳಕಿಗೆ ಬಂದಿದೆ. ಆರಂಭದಲ್ಲಿ ಆಕಸ್ಮಿಕ ಅಪಘಾತ ಎಂದು ದಾಖಲಾಗಿದ್ದ ಪ್ರಕರಣ,
ಇದೀಗ ಹಣಕ್ಕಾಗಿ ನಡೆಸಿದ ಪೂರ್ವಯೋಜಿತ ಕೊಲೆ ಎಂಬುದು ತನಿಖೆಯಲ್ಲಿ ಸಾಬೀತಾಗಿದೆ.
ಮೀನಿನ ವ್ಯಾಪಾರಿಗಳು ಸಜೀವ ದಹನ
ಜನವರಿ 7ರಂದು ಹೊನ್ನಾವರ ತಾಲೂಕಿನ ಸೂಳೆಮುರ್ಕಿ ಕ್ರಾಸ್ ಬಳಿ ಕಾರಿನಲ್ಲಿ ಸುಟ್ಟು ಕರಕಲಾದ ಸ್ಥಿತಿಯಲ್ಲಿ ಇಬ್ಬರ ಮೃತದೇಹಗಳು ಪತ್ತೆಯಾಗಿದ್ದವು. ಮೃತರನ್ನು ಸಿದ್ದಾಪುರ ಮೂಲದ ಮಂಜುನಾಥ ಮತ್ತು ಚಂದ್ರಶೇಖರ್ ಎಂಬ ಮೀನಿನ ವ್ಯಾಪಾರಿಗಳು ಎಂದು ಗುರುತಿಸಲಾಗಿತ್ತು.
ಈ ಹಿನ್ನೆಲೆಯಲ್ಲಿ ಹೊನ್ನಾವರ ಪೊಲೀಸರು ಮೊದಲಿಗೆ ಇದನ್ನು ಅಪಘಾತ ಪ್ರಕರಣವಾಗಿ ದಾಖಲಿಸಿದ್ದರು.

ಆದರೆ ಮೃತರ ಕುಟುಂಬದವರು ಇದು ಆಕಸ್ಮಿಕ ಅಪಘಾತವಲ್ಲ, ಕೊಲೆ ಎಂದು ಅನುಮಾನ ವ್ಯಕ್ತಪಡಿಸಿ ದೂರು ನೀಡಿದ್ದರು. ಇದರಿಂದ ಪ್ರಕರಣಕ್ಕೆ ತಿರುವು ಸಿಕ್ಕಿದ್ದು, ಹೊನ್ನಾವರ ಪೊಲೀಸರು ಗಂಭೀರ ತನಿಖೆ ಕೈಗೊಂಡರು.
ಹಣಕ್ಕಾಗಿ ಸ್ನೇಹಿತರನ್ನೇ ಕೊಂದ ಆರೋಪಿ ಬಂಧನ
ತನಿಖೆ ವೇಳೆ ಪ್ರಮೋದ್ ನಾಯ್ಕ್ ಎಂಬಾತನ ಮೇಲೆ ಪೊಲೀಸರಿಗೆ ಅನುಮಾನ ಮೂಡಿತು. ತನಿಖೆಗೆ ಹಾಜರಾಗದೆ ಆತ ಪರಾರಿಯಾಗಿದ್ದ. 14 ದಿನಗಳ ಶೋಧದ ಬಳಿಕ ಪ್ರಮೋದ್ ನಾಯ್ಕ್ ಅನ್ನು ಪೊಲೀಸರು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.

ಪೊಲೀಸರ ವಿಚಾರಣೆಯಲ್ಲಿ ಪ್ರಮೋದ್ ನಾಯ್ಕ್ ಭೀಕರ ಕೃತ್ಯವನ್ನು ಒಪ್ಪಿಕೊಂಡಿದ್ದಾನೆ.
ಮೃತರಾದ ಮಂಜುನಾಥ ಮತ್ತು ಚಂದ್ರಶೇಖರ್ ಇಬ್ಬರೂ ಪ್ರಮೋದ್ ಜೊತೆ ಕೆಲಸ ಮಾಡುತ್ತಿದ್ದು, ವ್ಯವಹಾರಕ್ಕಾಗಿ ಸುಮಾರು 5 ಲಕ್ಷ ರೂ. ಸಾಲ ಮಾಡಿದ್ದರು.
ಇದಲ್ಲದೆ, ತನ್ನ ಹೆಸರಿನಲ್ಲಿ ಮಾಡಿಸಿದ್ದ ಕೋಟಿ ರೂಪಾಯಿ ಇನ್ಶುರೆನ್ಸ್ ಹಣ ಪಡೆಯುವ ಉದ್ದೇಶದಿಂದ, ಪ್ರಮೋದ್ ಇಬ್ಬರಿಗೂ ಮಧ್ಯದಲ್ಲಿ ಕೀಟನಾಶಕ ಸೇರಿಸಿ ಹತ್ಯೆ ಮಾಡಿದ್ದಾನೆ.
ನಂತರ ತನ್ನ ಸ್ನೇಹಿತರ ಸಹಾಯದಿಂದ ಕಾರನ್ನು ಸೂಳೆಮುರ್ಕಿ ಕ್ರಾಸ್ ಬಳಿ ತಳ್ಳಿ, ಪೆಟ್ರೋಲ್ ಸುರಿದು ಬೆಂಕಿ ಹಚ್ಚಿರುವುದಾಗಿ ಆತ ತಪ್ಪೊಪ್ಪಿಕೊಂಡಿದ್ದಾನೆ.
ತನಿಖೆ ಮುಂದುವರಿಕೆ – ಇತರ ಆರೋಪಿಗಳ ಶೋಧ
ಪ್ರಸ್ತುತ ಪ್ರಮೋದ್ ನಾಯ್ಕ್ ಪೊಲೀಸರ ವಶದಲ್ಲಿದ್ದು, ಪ್ರಕರಣದ ತನಿಖೆ ಮುಂದುವರೆದಿದೆ. ಈ ಭೀಕರ ಕೃತ್ಯದಲ್ಲಿ ಭಾಗಿಯಾದ ಇತರ ಆರೋಪಿಗಳ ಪತ್ತೆಗೆ ಪೊಲೀಸರು ಶೋಧ ಕಾರ್ಯ ಮುಂದುವರಿಸಿದ್ದಾರೆ.




