Bengaluru : ರ್ಷದ ಮೊದಲ ಜಂಟಿ ಅಧಿವೇಶನದಲ್ಲಿ ಮಾನ್ಯ ರಾಜ್ಯಪಾಲರು ಸಚಿವ ಸಂಪುಟ ಸಿದ್ಧಪಡಿಸಿದ ಭಾಷಣವನ್ನು ಓದದೇ, ಸಂವಿಧಾನದ ವಿಧಿಗಳನ್ನು ಉಲ್ಲಂಘನೆ ಮಾಡಿದ್ದಾರೆ.

Bengaluru : ವರ್ಷದ ಮೊದಲ ಜಂಟಿ ಅಧಿವೇಶನದಲ್ಲಿ ಸಚಿವ ಸಂಪುಟ ಸಿದ್ಧಪಡಿಸಿದ ಭಾಷಣವನ್ನು ಓದದೇ, ಸಂವಿಧಾನದ ವಿಧಿಗಳನ್ನು ಉಲ್ಲಂಘಿಸಿರುವ ರಾಜ್ಯಪಾಲ ಥಾವರ್ ಚಂದ್ ಗೆಹ್ಲೋಟ್ ವಿರುದ್ಧ ಸುಪ್ರೀಂ ಕೋರ್ಟ್ನಲ್ಲಿ ಮೊಕದ್ದಮೆ ಹೂಡುವ ಕುರಿತು ಚರ್ಚೆ ನಡೆಸಲಾಗುತ್ತಿದೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ತಿಳಿಸಿದ್ದಾರೆ.
ಸುದ್ದಿಗಾರರೊಂದಿಗೆ ಮಾತನಾಡಿದ ಸಿಎಂ, ರಾಜ್ಯಪಾಲರ ನಡೆ ಜನಪ್ರತಿನಿಧಿಗಳ ಸಭೆಗೆ ಮಾಡಿದ ಅವಮಾನವಾಗಿದ್ದು, ಇದನ್ನು ಸರ್ಕಾರ ತೀವ್ರವಾಗಿ ಖಂಡಿಸುತ್ತದೆ ಎಂದು ಹೇಳಿದರು. ಈ ವಿಚಾರದಲ್ಲಿ ಕಾನೂನು ಹೋರಾಟಕ್ಕೆ ಮುಂದಾಗುವ ನಿರ್ಧಾರವನ್ನು ಶೀಘ್ರದಲ್ಲೇ ಕೈಗೊಳ್ಳಲಾಗುತ್ತದೆ ಎಂದು ಸ್ಪಷ್ಟಪಡಿಸಿದರು.

ಸಂವಿಧಾನ ಉಲ್ಲಂಘನೆ ಆರೋಪ
ಪ್ರತಿ ವರ್ಷದ ಮೊದಲ ಜಂಟಿ ಅಧಿವೇಶನದಲ್ಲಿ ರಾಜ್ಯಪಾಲರು ಸಚಿವ ಸಂಪುಟ ಸಿದ್ಧಪಡಿಸಿದ ಭಾಷಣವನ್ನೇ ಓದಬೇಕು ಎಂಬುದು ಸಂವಿಧಾನದ ಸ್ಪಷ್ಟ ನಿಯಮವಾಗಿದೆ.
ಸಂವಿಧಾನದ ಕಲಂ 176 ಮತ್ತು 163ರ ಪ್ರಕಾರ ರಾಜ್ಯಪಾಲರು ಸ್ವತಃ ಭಾಷಣ ಸಿದ್ಧಪಡಿಸುವಂತಿಲ್ಲ ಎಂದು ಸಿಎಂ ಸಿದ್ದರಾಮಯ್ಯ ಹೇಳಿದರು.
ಆದರೆ ಈ ಬಾರಿ ರಾಜ್ಯಪಾಲರು ಸರ್ಕಾರ ನೀಡಿದ ಭಾಷಣವನ್ನು ಸಂಪೂರ್ಣವಾಗಿ ಓದದೆ, ತಾವೇ ಸಿದ್ಧಪಡಿಸಿದ ಭಾಷಣವನ್ನು ಓದಿರುವುದು ಸಂವಿಧಾನಬಾಹಿರ ಕ್ರಮವಾಗಿದೆ ಎಂದು ಅವರು ಆಕ್ರೋಶ ವ್ಯಕ್ತಪಡಿಸಿದರು.

ಮನರೇಗಾ ರದ್ದು, ಹೊಸ ಕಾಯ್ದೆಗೆ ವಿರೋಧ
ಈ ನಡುವೆ ಕೇಂದ್ರ ಸರ್ಕಾರ ಮನರೇಗಾ ಕಾಯ್ದೆಯನ್ನು ರದ್ದುಪಡಿಸಿ, ‘ವಿಕಸಿತ ಭಾರತ – ರೋಜ್ಗಾರ್ ಮತ್ತು ಅಜೀವಿಕಾ ಮಿಷನ್ (ಗ್ರಾಮೀಣ)’ ಅಂದರೆ ವಿಬಿಜಿ ರಾಮ್ ಜಿ ಕಾಯ್ದೆಯನ್ನು ಜಾರಿಗೆ ತಂದಿರುವುದಕ್ಕೂ ರಾಜ್ಯ ಸರ್ಕಾರ ತೀವ್ರ ವಿರೋಧ ವ್ಯಕ್ತಪಡಿಸಿದೆ.
ಮಹಾತ್ಮ ಗಾಂಧಿ ಅವರ ಹೆಸರನ್ನು ಕಾಯ್ದೆಯಿಂದ ತೆಗೆದುಹಾಕಿರುವುದು ಅಸ್ವೀಕಾರಾರ್ಹ ಎಂದು ಸಿಎಂ ಹೇಳಿದರು.
2005ರಲ್ಲಿ ಜಾರಿಯಾದ ಮನರೇಗಾ ಕಾಯ್ದೆಯಿಂದ ದಲಿತರು, ಮಹಿಳೆಯರು, ಸಣ್ಣ ರೈತರು ಮತ್ತು ಬಡ ಕಾರ್ಮಿಕರಿಗೆ ವರ್ಷಕ್ಕೆ ಕನಿಷ್ಠ 100 ದಿನಗಳ ಉದ್ಯೋಗ ಭದ್ರತೆ ಸಿಕ್ಕಿತ್ತು ಎಂದು ಅವರು ನೆನಪಿಸಿದರು.

ಹೊಸ ಕಾಯ್ದೆಯಿಂದ ಉದ್ಯೋಗ ಭದ್ರತೆಗೆ ಧಕ್ಕೆ
ಕಾಯ್ದೆಯಲ್ಲಿ ಮಹಿಳೆಯರು, ದಲಿತರು ಮತ್ತು ಬಡ ಕಾರ್ಮಿಕರಿಗೆ ಉದ್ಯೋಗ ಖಾತ್ರಿ ಇಲ್ಲದಂತಾಗಿದೆ. ಹಿಂದಿನ ಕಾಯ್ದೆಯಲ್ಲಿ ಗ್ರಾಮಸಭೆ ಹಾಗೂ ಪಂಚಾಯ್ತಿಗಳಿಗೆ ಯೋಜನೆ ರೂಪಿಸುವ ಅಧಿಕಾರ ಇದ್ದರೆ,
ಹೊಸ ಕಾಯ್ದೆಯಲ್ಲಿ ಎಲ್ಲ ನಿರ್ಣಯಗಳನ್ನು ಕೇಂದ್ರ ಸರ್ಕಾರವೇ ತೆಗೆದುಕೊಳ್ಳಲಿದೆ ಎಂದು ಸಿಎಂ ಆರೋಪಿಸಿದರು.
ಇದರಿಂದ ಬಡ ಕಾರ್ಮಿಕರು ತಮ್ಮ ಇಚ್ಛೆಯ ಸ್ಥಳದಲ್ಲಿ ಕೆಲಸ ಮಾಡುವ ಹಕ್ಕನ್ನು ಕಳೆದುಕೊಳ್ಳಬೇಕಾಗುತ್ತದೆ ಎಂದು ಅವರು ಹೇಳಿದರು.

ರಾಜ್ಯಪಾಲರ ನಡೆಗೆ ತೀವ್ರ ಆಕ್ಷೇಪ
ರಾಜ್ಯಪಾಲರು ಹೊಸ ಕಾಯ್ದೆಯನ್ನು ಉದ್ದೇಶಪೂರ್ವಕವಾಗಿ ಸಮರ್ಥಿಸಿಕೊಂಡಿದ್ದಾರೆ. ಅವರು ಕೇಂದ್ರ ಸರ್ಕಾರದ ಕೈಗೊಂಬೆಯಂತೆ ವರ್ತಿಸಿದ್ದು, ಸರ್ಕಾರದ ಅಭಿಪ್ರಾಯವನ್ನು ಕಡೆಗಣಿಸಿದ್ದಾರೆ ಎಂದು ಸಿಎಂ ಸಿದ್ದರಾಮಯ್ಯ ಕಿಡಿಕಾರಿದರು.
ಈ ಎಲ್ಲ ಅಂಶಗಳನ್ನು ರಾಜ್ಯಪಾಲರ ಭಾಷಣದಲ್ಲಿ ಸೇರಿಸಲಾಗಿತ್ತು. ಆದರೆ ಅದನ್ನು ಓದದೇ ಬಿಟ್ಟುಬಿಟ್ಟಿರುವುದು ಸಂವಿಧಾನಬದ್ಧ ಪದ್ಧತಿಗೆ ವಿರುದ್ಧವಾಗಿದೆ ಎಂದು ಹೇಳಿದರು.

ಹೋರಾಟ ಮುಂದುವರಿಕೆ ಘೋಷಣೆ
ಮನರೇಗಾ ಕಾಯ್ದೆ ಮರುಸ್ಥಾಪನೆ ಹಾಗೂ ಹೊಸ ಕಾಯ್ದೆ ರದ್ದುಪಡಿಸುವವರೆಗೆ ನಮ್ಮ ಹೋರಾಟ ನಿರಂತರವಾಗಿರುತ್ತದೆ ಎಂದು ಸಿಎಂ ಸ್ಪಷ್ಟಪಡಿಸಿದರು. ಈ ಹಿಂದೆ ರೈತ ವಿರೋಧಿ ಕಾಯ್ದೆಗಳನ್ನು ವಾಪಸ್ಸು ಪಡೆದಂತೆ, ಈ ಕಾಯ್ದೆಯನ್ನೂ ಹಿಂಪಡೆಯುವವರೆಗೆ ಹೋರಾಟ ನಡೆಯಲಿದೆ ಎಂದು ಎಚ್ಚರಿಕೆ ನೀಡಿದರು.
ಕಾನೂನು ಕ್ರಮಕ್ಕೆ ಸಿದ್ಧತೆ
ಸರ್ಕಾರ ಸಿದ್ಧಪಡಿಸಿರುವ ಭಾಷಣದ ಪ್ರತಿಯನ್ನು ಎಲ್ಲಾ ಶಾಸಕರು ಮತ್ತು ಎಂಎಲ್ಸಿಗಳಿಗೆ ವಿತರಿಸಲಾಗಿದೆ. ಈ ಕುರಿತು ಚರ್ಚಿಸಿ ಸಂವಿಧಾನಬದ್ಧವಾಗಿ ಕಾನೂನು ಕ್ರಮ ಕೈಗೊಳ್ಳಲಾಗುತ್ತದೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ತಿಳಿಸಿದರು.
ರಾಜ್ಯಪಾಲರ ನಡೆ ಸಂವಿಧಾನಕ್ಕೆ ವಿರುದ್ಧವಾಗಿದ್ದು, ಜನಪ್ರತಿನಿಧಿಗಳ ಗೌರವಕ್ಕೆ ಧಕ್ಕೆ ತಂದಿದೆ ಎಂಬುದು ಸರ್ಕಾರದ ಸ್ಪಷ್ಟ ನಿಲುವಾಗಿದೆ.




