
GUBBI:
ಸಾಮಾಜಿಕ ಹಾಗೂ ಶೈಕ್ಷಣಿಕ ಸಮೀಕ್ಷೆ ಹೆಸರಲ್ಲಿ ನಡೆಯುವ ಜಾತಿಗಣತಿಯಲ್ಲಿ ಒಕ್ಕಲಿಗರು ಒಗ್ಗಟ್ಟು ಪ್ರದರ್ಶನ ಮಾಡಬೇಕಿದೆ. ಯಾವುದೇ ಉಪಜಾತಿ, ಒಳ ಪಂಗಡ ಇದ್ದರೂ ಗಣತಿಯಲ್ಲಿ ಕ್ರಮ ಸಂಖ್ಯೆ 8 ರಲ್ಲಿ ಧರ್ಮ ಹಿಂದೂ ಎಂದು ಹಾಗೂ ಕ್ರಮ ಸಂಖ್ಯೆ 9 ರಲ್ಲಿ ಒಕ್ಕಲಿಗ ಎಂದು ನಮೂದಿಸಿ, ನಂತರ ಉಳಿದ ಎಲ್ಲಾ ಪ್ರಶ್ನೆಗಳಿಗೆ ಮಾಹಿತಿ ನೀಡಲು, ತಾಲ್ಲೂಕಿನ ಒಕ್ಕಲಿಗ ಒಕ್ಕೂಟದಿಂದ ಎಲ್ಲಾ ಮುಖಂಡರು ಪಕ್ಷಾತೀತ ನಿಲುವು ವ್ಯಕ್ತಪಡಿಸಿದರು.
ಪಟ್ಟಣದ ಪ್ರವಾಸಿ ಮಂದಿರದಲ್ಲಿ ನಡೆದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಮುಖಂಡರು, ನಮ್ಮ ಉಪಜಾತಿಗಳು ಕ್ರಮ ಸಂಖ್ಯೆ 10 ರಲ್ಲಿ ಬರೆಸಬಹುದು. ಆದರೆ, ಒಗ್ಗಟ್ಟಿನ ಪ್ರದರ್ಶನಕ್ಕೆ ನಮ್ಮ ಮಠಾಧೀಶರು ಕರೆ ನೀಡಿ ಒಕ್ಕಲಿಗ ಎಂದೇ ನಮೂದಿಸಲು ಸೂಚಿಸಿದ್ದಾರೆ. ಈ ಹಿನ್ನಲೆ ಸಾಧ್ಯವಾದಷ್ಟು ತಾಲ್ಲೂಕಿನ ನಮ್ಮ ಜನಾಂಗದ ಎಲ್ಲಾ ಮನೆಗಳಿಗೂ ಜಾಗೃತಿ ಮೂಡಿಸಲು, ಒಕ್ಕೂಟದಿಂದ ಪ್ರಕಟವಾದ ಕರ ಪತ್ರ ಹಂಚಲಾಗುತ್ತಿದೆ ಎಂದು ತಿಳಿಸಿದರು.

ಜೆಡಿಎಸ್ ಮುಖಂಡ ಬಿ.ಎಸ್.ನಾಗರಾಜು ಮಾತನಾಡಿ, ದಸರಾ ಹಬ್ಬದ ಈ ಸಮಯದಲ್ಲಿ ತರಾತುರಿ ಜಾತಿಗಣತಿ ಮಾಡುತ್ತಿರುವ ಸರ್ಕಾರ, ಒಕ್ಕಲಿಗರ ಸಂಖ್ಯೆ ಕ್ಷೀಣಿಸುವ ದುರುದ್ದೇಶ ಹೊಂದಿರುವಂತೆ ಕಾಣುತ್ತಿದೆ. ಸಾಮಾಜಿಕ ಸಮೀಕ್ಷೆ ಹೆಸರಲ್ಲಿ ಜಾತಿಗಳ ಮಧ್ಯೆ ಒಡಕು ಮೂಡಿಸುವ ಈ ತಂತ್ರ ಒಳ್ಳೆಯದಲ್ಲ ಎಂದರು.
ಬಿಜೆಪಿ ಮುಖಂಡ ಎಚ್.ಟಿ.ಭೈರಪ್ಪ ಮಾತನಾಡಿ, ಹಿಂದೂ ಧರ್ಮದ ಎಲ್ಲಾ ಜಾತಿಗಳಿಗೆ ಕ್ರಿಶ್ಚಿಯನ್ ಎಂದು ಸೇರಿಸಿ, ಹೊಸ ಜಾತಿಗಳ ಸೃಷ್ಟಿ ಮಾಡಿದ್ದು ಕಾನೂನು ಬಾಹಿರ. ಈ ಹೆಸರುಗಳನ್ನು ಕೈ ಬಿಡುವ ಭರವಸೆ ನೀಡಿರುವ ಆಯೋಗ ಜಾತಿಗಳ ಹೆಸರು ಮುಂದುಬರೆಸಿದ್ದಲ್ಲಿ, ಈ ಹಿಂದೆ ನಡೆದ ಚಿನ್ನಪ್ಪರೆಡ್ಡಿ ವರದಿ ವಿರುದ್ಧ ಹೋರಾಟದಂತೆ ಮತ್ತೊಂದು ಬೃಹತ್ ಹೋರಾಟ ನಡೆಸಲಾಗುವುದು ಎಂದರು.
ಜೆಡಿಎಸ್ ಮುಖಂಡ ಕಳ್ಳಿಪಾಳ್ಯ ಲೋಕೇಶ್ ಮಾತನಾಡಿ, ದಸರಾ ಹಬ್ಬದ ವೇಳೆ ಕೇವಲ ಹದಿನೈದು ದಿನದಲ್ಲಿ ಜಾತಿಗಣತಿ ಸಾಧ್ಯವಿಲ್ಲ. 60 ಪ್ರಶ್ನೆಗಳಿಗೆ ಉತ್ತರ ನೀಡಲು ಸಾಕಷ್ಟು ಸಮಯ ಬೇಕಿದೆ. ಈ ಪೈಕಿ ಜಾತಿಗಳ ಹೆಸರು ಬರೆಸಲು ಗೊಂದಲ ಮೂಡಿಸುವ ಪ್ರಯತ್ನ ನಡೆದಿದೆ ಎಂದರು.
ಈ ಸಂದರ್ಭದಲ್ಲಿ ಒಕ್ಕಲಿಗರ ಸಂಘ ಮಾಜಿ ಜಿಲ್ಲಾಧ್ಯಕ್ಷ ಕರಿಯಪ್ಪ, ಮುಖಂಡರಾದ ಬ್ಯಾಟರಂಗೇಗೌಡ, ತೊರೆಹಳ್ಳಿ ರಂಗನಾಥ್, ನಾಗರಾಜ್, ಸಿಂಗೋನಹಳ್ಳಿ ಸೋಮಣ್ಣ, ಕಳ್ಳಿಪಾಳ್ಯ ನಾಗರಾಜ್, ಜಿ.ಆರ್.ರಮೇಶ್ ಗೌಡ ಇತರರು ಹಾಜರಿದ್ರು.




