KSRTC ನೌಕರರಿಗೆ CM ಸಿದ್ದರಾಮಯ್ಯ ನೇತೃತ್ವದ ರಾಜ್ಯ ಸರ್ಕಾರ ನ್ಯೂ ಇಯರ್ಗೆ ಗುಡ್ನ್ಯೂಸ್ ನೀಡಿದೆ.

ದೀರ್ಘಕಾಲದಿಂದ ವರ್ಗಾವಣೆ ನಿರೀಕ್ಷೆಯಲ್ಲಿದ್ದ ರಾಜ್ಯ ರಸ್ತೆ ಸಾರಿಗೆ ನಿಗಮಗಳ (KSRTC) ನೌಕರರಿಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ನೇತೃತ್ವದ ರಾಜ್ಯ ಸರ್ಕಾರ ನ್ಯೂ ಇಯರ್ಗೆ ಗುಡ್ನ್ಯೂಸ್ ನೀಡಿದೆ.
ಸಾರಿಗೆ ನಿಗಮಗಳಲ್ಲಿ ಬಹುದಿನಗಳಿಂದ ಕೇಳಿಬರುತ್ತಿದ್ದ ಅಂತರ ನಿಗಮ ವರ್ಗಾವಣೆಗೆ ಇದೀಗ ಅಧಿಕೃತವಾಗಿ ಚಾಲನೆ ನೀಡಲಾಗಿದ್ದು, ಜನವರಿ 1ರಿಂದಲೇ ನೌಕರರಿಗೆ ಅರ್ಜಿ ಸಲ್ಲಿಸಲು ಅವಕಾಶ ಕಲ್ಪಿಸಲಾಗಿದೆ.
ಕುಟುಂಬದಿಂದ ದೂರ ಉಳಿಯಬೇಕಾದ ಪರಿಸ್ಥಿತಿ
ಇದುವರೆಗೆ ಜಾರಿಯಲ್ಲಿದ್ದ ನಿಯಮಗಳಂತೆ, ಸಾರಿಗೆ ನೌಕರರು ತಾವು ಕಾರ್ಯನಿರ್ವಹಿಸುತ್ತಿದ್ದ ನಿಗಮದ ವ್ಯಾಪ್ತಿಯಲ್ಲಿಯೇ ವರ್ಗಾವಣೆಯಾಗಬೇಕಿತ್ತು.
ಉದಾಹರಣೆಗೆ, KSRTC ನೌಕರರು ಕೆಎಸ್ಆರ್ಟಿಸಿಯಲ್ಲೇ ಉಳಿಯಬೇಕಾಗಿತ್ತು. ಬಿಎಂಟಿಸಿ, ಕೆಕೆಆರ್ಟಿಸಿ ಅಥವಾ ಎನ್ಡಬ್ಲ್ಯೂಕೆಆರ್ಟಿಸಿ ನಡುವೆ ವರ್ಗಾವಣೆಗೆ ತಾಂತ್ರಿಕ ಅಡೆತಡೆಗಳು ಇದ್ದವು.
ಇದರಿಂದಾಗಿ ನೂರಾರು ಕಿಲೋಮೀಟರ್ ದೂರದ ಜಿಲ್ಲೆಗಳಲ್ಲಿ ಕೆಲಸ ಮಾಡುತ್ತಿದ್ದ ಸಾವಿರಾರು ನೌಕರರು ತಮ್ಮ ಕುಟುಂಬದಿಂದ ದೂರ ಉಳಿಯಬೇಕಾದ ಪರಿಸ್ಥಿತಿ ಎದುರಿಸುತ್ತಿದ್ದರು.
ಇದನ್ನು ಓದಿ : ಹೊಸ ವರ್ಷಕ್ಕೆ ಬೆಂಗಳೂರಿನಲ್ಲೇ ತಯಾರಾಗ್ತಿತ್ತು ಡ್ರಗ್!

ಹೋರಾಟಕ್ಕೆ ದೊಡ್ಡ ಜಯ
ಈಗ ಸರ್ಕಾರ ಕೈಗೊಂಡಿರುವ ಈ ತೀರ್ಮಾನದಿಂದ ನೌಕರರ ಬಹುಕಾಲದ ಹೋರಾಟಕ್ಕೆ ದೊಡ್ಡ ಜಯ ಸಿಕ್ಕಂತಾಗಿದೆ. ಕೆಎಸ್ಆರ್ಟಿಸಿ ವ್ಯವಸ್ಥಾಪಕ ನಿರ್ದೇಶಕರಾದ ಅಕ್ರಂ ಪಾಷಾ ಅವರು ಈ ಕುರಿತು ಅಧಿಕೃತ ಅಧಿಸೂಚನೆ ಹೊರಡಿಸಿದ್ದು, ಎಲ್ಲಾ ಸಾರಿಗೆ ನಿಗಮಗಳ ಮುಖ್ಯಸ್ಥರಿಗೆ ಅಗತ್ಯ ನಿರ್ದೇಶನಗಳನ್ನು ನೀಡಿದ್ದಾರೆ.
ಒಂದು ತಿಂಗಳ ಕಾಲ ಅರ್ಜಿ ಸಲ್ಲಿಸಲು ಅವಕಾಶ
ಅಧಿಸೂಚನೆಯಂತೆ, ಜನವರಿ 1ರಿಂದ ಜನವರಿ 31ರವರೆಗೆ ಒಂದು ತಿಂಗಳ ಕಾಲ ವರ್ಗಾವಣೆಗೆ ಅರ್ಜಿ ಸಲ್ಲಿಸಲು ಅವಕಾಶ ನೀಡಲಾಗಿದೆ.
ಅರ್ಹ ನೌಕರರು ‘ಸಾಮಾನ್ಯ ವರ್ಗಾವಣೆ’ ಅಥವಾ ಇಬ್ಬರು ನೌಕರರ ಪರಸ್ಪರ ಒಪ್ಪಿಗೆಯ ಮೇರೆಗೆ ನಡೆಯುವ ‘ಪರಸ್ಪರ ವರ್ಗಾವಣೆ’ (Mutual Transfer) ಅಡಿಯಲ್ಲಿ ಒಂದು ನಿಗಮದಿಂದ ಮತ್ತೊಂದು ನಿಗಮಕ್ಕೆ ವರ್ಗಾವಣೆಗೆ ಆನ್ಲೈನ್ ಅಥವಾ ನಿಗದಿತ ಮಾದರಿಯಲ್ಲಿ ಅರ್ಜಿ ಸಲ್ಲಿಸಬಹುದಾಗಿದೆ.
ಇದು ಸುವರ್ಣಾವಕಾಶ
ವರ್ಗಾವಣೆ ಪ್ರಕ್ರಿಯೆ ಸಂಪೂರ್ಣ ಪಾರದರ್ಶಕವಾಗಿದ್ದು, ಜೇಷ್ಠತೆ (Seniority) ಮತ್ತು ಮಾನವೀಯ ಆಧಾರಗಳಿಗೆ ಆದ್ಯತೆ ನೀಡಲಾಗುತ್ತದೆ. ಕೆಎಸ್ಆರ್ಟಿಸಿ, ಬಿಎಂಟಿಸಿ, ಕೆಕೆಆರ್ಟಿಸಿ ಮತ್ತು ಎನ್ಡಬ್ಲ್ಯೂಕೆಆರ್ಟಿಸಿ ನಿಗಮಗಳ ನಡುವೆ ನೌಕರರು ವರ್ಗಾವಣೆಯಾಗಲು ಇದು ಸುವರ್ಣಾವಕಾಶವಾಗಿದೆ.





