ರಾಜಧಾನಿಯನ್ನೇ ಬೆಚ್ಚಿ ಬೀಳಿಸಿದೆ Drugs ದಂಧೆ; 3 ಫ್ಯಾಕ್ಟರಿ ಸೀಜ್, 55 ಕೋಟಿ ಮೌಲ್ಯದ ಡ್ರಗ್ ಪತ್ತೆ.

ಹೊಸ ವರ್ಷಾಚರಣೆಗೆ ನಗರ ಸಜ್ಜಾಗುತ್ತಿರುವ ನಡುವೆಯೇ, ಬೆಂಗಳೂರಿನಲ್ಲಿ ಕಾರ್ಯನಿರ್ವಹಿಸುತ್ತಿದ್ದ ಭಾರೀ ಡ್ರಗ್ಸ್ ಜಾಲವನ್ನು ಮಹಾರಾಷ್ಟ್ರ ಪೊಲೀಸರು ಭೇದಿಸಿದ್ದಾರೆ. ಮಹಾರಾಷ್ಟ್ರದ ANTF ಕೊಂಕಣ ವಿಭಾಗದ ಪೊಲೀಸರು ನಡೆಸಿದ ವಿಶೇಷ ಕಾರ್ಯಾಚರಣೆ ಯಲ್ಲಿ 55.88 ಕೋಟಿ ರೂಪಾಯಿ ಮೌಲ್ಯದ ಡ್ರಗ್ಸ್ಗಳನ್ನು ವಶಪಡಿಸಿಕೊಳ್ಳಲಾಗಿದ್ದು, ಪ್ರಕರಣ ಸಂಬಂಧ ನಾಲ್ವರನ್ನು ಬಂಧಿಸಲಾಗಿದೆ.
ಬೆಂಗಳೂರಿನಲ್ಲಿ ನಡೆಯುತ್ತಿದೆ ಡ್ರಗ್ಸ್ ಜಾಲ
ಮಹಾರಾಷ್ಟ್ರದ ರಾಷ್ಟ್ರ ಮಾದಕ ದ್ರವ್ಯ ನಿಗ್ರಹ ದಳ (NDPS) ಮುಂಬೈನಲ್ಲಿ ನಡೆಸಿದ ದಾಳಿಯ ವೇಳೆ ಸುಮಾರು ಒಂದೂವರೆ ಕೋಟಿ ರೂಪಾಯಿ ಮೌಲ್ಯದ ಡ್ರಗ್ಸ್ ವಶಕ್ಕೆ ಪಡೆದು, ಅಬ್ದುಲ್ ಖಾದಿರ್ ಶೇಖ್ ಎಂಬಾತನನ್ನು ಬಂಧಿಸಿತ್ತು. ವಿಚಾರಣೆ ವೇಳೆ ಆತ ನೀಡಿದ ಮಾಹಿತಿಯ ಆಧಾರದಲ್ಲಿ ಬೆಂಗಳೂರಿನಲ್ಲಿ ನಡೆಯುತ್ತಿದ್ದ Drugs ಜಾಲ ಬೆಳಕಿಗೆ ಬಂದಿದೆ.
ನಾಲ್ವರು ಬಂಧನ
ಬೆಂಗಳೂರಿನಲ್ಲಿ ನಡೆದ ದಾಳಿಯಲ್ಲಿ 4.1 ಕೆಜಿ ಘನ ರೂಪದ MDMA ಹಾಗೂ 17 ಕೆಜಿ ದ್ರವ MDMA ಸೇರಿ ಒಟ್ಟು 21.4 ಕೆಜಿ ಡ್ರಗ್ಸ್ ವಶಕ್ಕೆ ಪಡೆಯಲಾಗಿದೆ. ಇದರ ಅಂದಾಜು ಮೌಲ್ಯ 55.88 ಕೋಟಿ ರೂಪಾಯಿ ಎಂದು ಪೊಲೀಸರು ತಿಳಿಸಿದ್ದಾರೆ. ರಾಜಸ್ಥಾನ ಮೂಲದ ಸೂರಜ್ ರಮೇಶ್ ಯಾದವ್, ಮಲ್ಖಾನ್ ರಾಮಲಾಲ್ ಬಿಷ್ಣೋಯ್ ಸೇರಿದಂತೆ ನಾಲ್ವರನ್ನು ಬಂಧಿಸಲಾಗಿದೆ.
ಇದನ್ನು ಓದಿ : ಇನ್ಮುಂದೆ ಮೆಟ್ರೋದಲ್ಲಿ ಮೊಬೈಲ್ ಬಳಕೆಗೂ ಬೀಳುತ್ತಾ ಬ್ರೇಕ್?

ದೇಶದ ವಿವಿಧ ರಾಜ್ಯಗಳಿಗೆ ಡ್ರಗ್ಸ್ ಸರಬರಾಜು
ಆರೋಪಿಗಳು R.J Event ಎಂಬ ಹೆಸರಿನಲ್ಲಿ ಡ್ರಗ್ಸ್ ತಯಾರಿಕಾ ಘಟಕವನ್ನು ನಡೆಸುತ್ತಿರುವುದು ಪತ್ತೆಯಾಗಿದ್ದು, ಈ ಮೂಲಕ ಬೆಂಗಳೂರಿನಿಂದ ಮಹಾರಾಷ್ಟ್ರ ಸೇರಿದಂತೆ ದೇಶದ ವಿವಿಧ ರಾಜ್ಯಗಳಿಗೆ ಡ್ರಗ್ಸ್ ಸರಬರಾಜು ಮಾಡುತ್ತಿದ್ದ ಶಂಕೆ ವ್ಯಕ್ತವಾಗಿದೆ. ವಿಶೇಷವಾಗಿ ಹೊಸ ವರ್ಷ, ಪಾರ್ಟಿ ಸಂಸ್ಕೃತಿ ಹೆಚ್ಚಿರುವ ಸಮಯವನ್ನು ಟಾರ್ಗೆಟ್ ಮಾಡಿಕೊಂಡು ಡ್ರಗ್ಸ್ ವಿತರಣೆ ಮಾಡಲು ಯೋಜನೆ ರೂಪಿಸಲಾಗಿತ್ತು ಎಂದು ತನಿಖೆಯಿಂದ ತಿಳಿದುಬಂದಿದೆ.
ಪೊಲೀಸರು ಮಾಹಿತಿ
ಡ್ರಗ್ಸ್ ಜಾಲವನ್ನು ಬಾಗಲೂರು ಪೊಲೀಸ್ ಠಾಣೆ ವ್ಯಾಪ್ತಿಯ ಸ್ಪಂದನ ಲೇಔಟ್ ಕಾಲೋನಿ, ಕೊತ್ತನೂರು ಪೊಲೀಸ್ ಠಾಣೆ ವ್ಯಾಪ್ತಿಯ ಎನ್.ಜಿ. ಗೋಲ್ಲಹಳ್ಳಿ ಪ್ರದೇಶದಲ್ಲಿರುವ ಆರ್.ಜೆ. ಈವೆಂಟ್ ಕಾರ್ಖಾನೆ ಹಾಗೂ ಅವಲಹಳ್ಳಿ ಪೊಲೀಸ್ ಠಾಣೆ ವ್ಯಾಪ್ತಿಯ ಯರಪ್ಪನಹಳ್ಳಿ ಮನೆಯೊಂದರಲ್ಲಿ ನಡೆಸಲಾಗುತ್ತಿತ್ತು ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.
ವಿಚಾರಣೆಗೆ ಒಳಪಡಿಸಲಾಗಿದೆ
ಸದ್ಯ ಮಹಾರಾಷ್ಟ್ರ ಪೊಲೀಸರ ಮಾಹಿತಿ ಆಧರಿಸಿ ಬೆಂಗಳೂರು ಪೊಲೀಸರು ಸಹ ಸಮಾಂತರವಾಗಿ ತನಿಖೆ ಕೈಗೊಂಡಿದ್ದಾರೆ. ಈ ಜಾಲಕ್ಕೆ ಇನ್ನೂ ಹೆಚ್ಚಿನ ಆರೋಪಿಗಳು, ಹಣಕಾಸು ಮೂಲಗಳು ಹಾಗೂ ರಾಜ್ಯಾಂತರ ಸಂಪರ್ಕಗಳಿರುವ ಸಾಧ್ಯತೆ ಇದ್ದು, ಬಂಧಿತರನ್ನು ತೀವ್ರ ವಿಚಾರಣೆಗೆ ಒಳಪಡಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.

ಇದನ್ನು ನೋಡಿ : ಪಕ್ಕದ ದೇಶದಲ್ಲಿ ಮೂರೂಮುಕ್ಕಾಲು ತಾಸು !




