Chitradurga : ಕೋರ್ಟ್ ಆದೇಶವನ್ನು ಉಲ್ಲಂಘಿಸಿ ಮುರುಘಾಶ್ರೀ (Murughashree) ಮಠದ ಆಸ್ತಿಯನ್ನು ಮಾರಾಟ ಮಾಡಿದ್ದಾರೆಂಬ ಗಂಭೀರ ಆರೋಪ ಚಿತ್ರದುರ್ಗದಲ್ಲಿ ಕೇಳಿಬಂದಿದೆ. ಈ ಪ್ರಕರಣ ಮಠದ ಭಕ್ತರು ಹಾಗೂ ಸಾರ್ವಜನಿಕ ವಲಯದಲ್ಲಿ ತೀವ್ರ ಚರ್ಚೆಗೆ ಕಾರಣವಾಗಿದೆ.

Chitradurga : ಪೋಕ್ಸೊ ಪ್ರಕರಣಗಳ ನಡುವೆಯೇ ಹೊಸ ವಿವಾದ
ಚಿತ್ರದುರ್ಗದ ಮುರುಘಾ ಮಠದ ಶಿವಮೂರ್ತಿ ಮುರುಘಾ ಶರಣರು ಇತ್ತೀಚೆಗೆ ಮೊದಲ ಪೋಕ್ಸೊ ಪ್ರಕರಣದಲ್ಲಿ ಖುಲಾಸೆಯಾಗಿದ್ದು, ಎರಡನೇ ಪ್ರಕರಣ ಇನ್ನೂ ನ್ಯಾಯಾಲಯದ ವಿಚಾರಣೆಯ ಹಂತದಲ್ಲಿದೆ. ಈ ಬೆಳವಣಿಗೆಯ ಬೆನ್ನಲ್ಲೇ, ಮುರುಘಾಶ್ರೀ ವಿರುದ್ಧ ಮತ್ತೊಂದು ಆರೋಪ ಹೊರಬಿದ್ದಿದೆ.
ಮುರುಘಾಶ್ರೀ ಪೋಕ್ಸೊ ಪ್ರಕರಣದಲ್ಲಿ ಆರೋಪಿಯಾಗಿದ್ದ ಸಂದರ್ಭದಲ್ಲಿ ಮಠದ ಆಡಳಿತದಲ್ಲಿ ಯಾವುದೇ ಹಸ್ತಕ್ಷೇಪ ಮಾಡಬಾರದು ಎಂದು ಸುಪ್ರೀಂ ಕೋರ್ಟ್ ಸ್ಪಷ್ಟ ಆದೇಶ ನೀಡಿತ್ತು. ಆದರೂ, ಆ ಆದೇಶವನ್ನು ಮೀರಿ 2025ರ ಅಕ್ಟೋಬರ್ 6ರಂದು ಚಿತ್ರದುರ್ಗ ಜಿಲ್ಲೆಯ ಹೊಸದುರ್ಗ ತಾಲೂಕಿನಲ್ಲಿರುವ ಸುಮಾರು ₹2 ಕೋಟಿ ಮೌಲ್ಯದ ನಾಲ್ಕು ನಿವೇಶನಗಳನ್ನು ಮಂಜುನಾಥ್ ಎಂಬವರಿಗೆ ಸ್ಪೆಷಲ್ ಜಿಪಿಎ ನೀಡಿ ಮಾರಾಟ ಮಾಡಿದ್ದಾರೆಂದು ಮಠದ ಭಕ್ತ ಪ್ರಕಾಶ್ ಆರೋಪಿಸಿದ್ದಾರೆ.
ಪೋಕ್ಸೊ ಆರೋಪದ ಹಿನ್ನೆಲೆ ಸರ್ಕಾರದಿಂದ ಮಠಕ್ಕೆ ಆಡಳಿತ ಸಮಿತಿ ನೇಮಿಸಲಾಗಿದೆ. ಆದರೆ ಆಡಳಿತ ಸಮಿತಿಯ ಗಮನಕ್ಕೆ ಬಾರದಂತೆ ಮಠದ ಆಸ್ತಿ ಮಾರಾಟ ಮಾಡಿರುವುದು ಅಕ್ಷಮ್ಯ ಅಪರಾಧ ಎಂದು ದೂರುದಾರರು ಆರೋಪಿಸಿದ್ದಾರೆ.
ಇದನ್ನು ಓದಿ : ಇನ್ಮುಂದೆ ಮೆಟ್ರೋದಲ್ಲಿ ಮೊಬೈಲ್ ಬಳಕೆಗೂ ಬೀಳುತ್ತಾ ಬ್ರೇಕ್?
ಕಾನೂನು ಕ್ರಮಕ್ಕೆ ಆಗ್ರಹ
ಈ ಕುರಿತು ಮಠದ ಆಡಳಿತ ಸಮಿತಿ ಅಧ್ಯಕ್ಷ ಶಿವಯೋಗಿ ಕಳಸದ್ ಅವರಿಗೆ ದೂರು ಸಲ್ಲಿಸಲಾಗಿದ್ದು, ತಪ್ಪಿತಸ್ಥರ ವಿರುದ್ಧ ಕಾನೂನು ಕ್ರಮ ಕೈಗೊಳ್ಳಬೇಕೆಂದು ಆಗ್ರಹಿಸಲಾಗಿದೆ.
ದೂರು ಸ್ವೀಕರಿಸಿದ ಬಳಿಕ ಮಾಧ್ಯಮಗಳಿಗೆ ಪ್ರತಿಕ್ರಿಯಿಸಿದ ಅಧ್ಯಕ್ಷ ಶಿವಯೋಗಿ ಕಳಸದ್, ಈ ಪ್ರಕರಣವನ್ನು ಕಾನೂನು ತಜ್ಞರಿಂದ ಪರಿಶೀಲಿಸಲಾಗುವುದು ಎಂದು ತಿಳಿಸಿದ್ದಾರೆ. ಮಠದ ಆಸ್ತಿ ಅಕ್ರಮವಾಗಿ ಮಾರಾಟವಾಗಿದೆ ಎಂಬುದು ಸಾಬೀತಾದಲ್ಲಿ ಸೂಕ್ತ ಕ್ರಮ ಕೈಗೊಳ್ಳಲಾಗುವುದು ಎಂಬ ಭರವಸೆಯನ್ನೂ ನೀಡಿದ್ದಾರೆ.
ಇದನ್ನು ನೋಡಿ : ಪಕ್ಕದ ದೇಶದಲ್ಲಿ ಮೂರೂಮುಕ್ಕಾಲು ತಾಸು !




