
TUMAKURU : ತುಮಕೂರು ಜಿಲ್ಲೆಯಲ್ಲಿ ಈ ವರ್ಷದ ದಸರಾ ಹಬ್ಬವನ್ನು ಅದ್ದೂರಿಯಾಗಿ ಆಚರಿಸಲು ಸಿದ್ಧತೆ ಜೋರಾಗಿದೆ. ನಾಳೆ, ಸೆಪ್ಟೆಂಬರ್ 22 ರಂದು ದಸರಾ ಧಾರ್ಮಿಕ ಕಾರ್ಯಕ್ರಮದೊಂದಿಗೆ ಹಬ್ಬದ ಮೊದಲ ದಿನದ ಕಾರ್ಯಕ್ರಮಕ್ಕೆ ಚಾಲನೆ ನೀಡಲಾಗುತ್ತಿದೆ ಎಂದು ಜಿಲ್ಲಾ ಉಸ್ತುವಾರಿ ಸಚಿವ ಹಾಗೂ ಗೃಹ ಸಚಿವ ಡಾ. ಜಿ. ಪರಮೇಶ್ವರ್ ಅವರು ತಿಳಿಸಿದ್ದಾರೆ.
ಈ ಬಾರಿ ಬಹಳ ವರ್ಷಗಳ ನಂತರ ಜಿಲ್ಲೆಗೆ ಕೇಂದ್ರ ಸಚಿವ ಸ್ಥಾನ ಸಿಕ್ಕಿದ್ದು, ಕೇಂದ್ರ ಸಚಿವ ವಿ. ಸೋಮಣ್ಣ ಅವರನ್ನು ಕಾರ್ಯಕ್ರಮಕ್ಕೆ ಆಹ್ವಾನಿಸಲಾಗಿದೆ. ಧಾರ್ಮಿಕ ಕಾರ್ಯಕ್ರಮವನ್ನು ಜಿಲ್ಲೆಯ ಪ್ರಮುಖ ಸ್ವಾಮೀಜಿಯವರು ಉದ್ಘಾಟಿಸಲಿದ್ದು, ಅದೇ ವೇದಿಕೆಯಲ್ಲಿ ಟಿ.ಬಿ. ಜಯಚಂದ್ರ ಹಾಗೂ ಸಚಿವ ಶಿವರಾಜ್ ತಂಗಡಗಿ ಉಪಸ್ಥಿತರಿರಲಿದ್ದಾರೆ.
ಇನ್ನು ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಗೃಹ ಸಚಿವ ಪರಮೇಶ್ವರ್ ಅವರು. “ಇದು ಒಬ್ಬರ ಅಥವಾ ಒಂದು ಸ್ಥಳದ ಹಬ್ಬವಲ್ಲ, ಇದು ನಮ್ಮ ಸಂಸ್ಕೃತಿ ನಾಡ ಹಬ್ಬ, ಕಲೆ, ಸಾಹಿತ್ಯ ಮತ್ತು ಇತಿಹಾಸವನ್ನು ಪ್ರತಿಬಿಂಬಿಸುವ ನಾಡಹಬ್ಬ ಆಗಬೇಕು ಎಂದು ನಾವೆಲ್ಲಾ ತೀರ್ಮಾನಿಸಿದ್ದೇವೆ” ಎಂದು ಡಾ. ಪರಮೇಶ್ವರ್ ಹೇಳಿದರು.
ದಸರಾ ಹಬ್ಬದ ಆಚರಣೆಯನ್ನು ಜನರ ಮಟ್ಟಕ್ಕೆ ತಲುಪಿಸಲು, 3 ಲಕ್ಷಕ್ಕೂ ಹೆಚ್ಚು ವಿದ್ಯಾರ್ಥಿಗಳಿಂದ ಹ್ಯಾಂಡ್ಬಿಲ್ ಹಂಚಿಕೆ ನಡೆಯುತ್ತಿದೆ. ಈ ಮೂಲಕ, ಹಬ್ಬದ ಮಹತ್ವ, ಕಾರ್ಯಕ್ರಮದ ವಿವರ ಹಾಗೂ ಸಂಸ್ಕೃತಿಯ ಪ್ರಚಾರವನ್ನು ತಲುಪಿಸಲಾಗುತ್ತಿದೆ. ದಸರಾ ಪ್ರಯುಕ್ತ ವಿವಿಧ ಸಾಂಸ್ಕೃತಿಕ ಕಾರ್ಯಕ್ರಮಗಳು, ಕಲಾ ಪ್ರದರ್ಶನಗಳು ಮತ್ತು ಸಾಹಿತ್ಯ ಸಮಾರಂಭಗಳು ಜಿಲ್ಲೆಯಲ್ಲಿ ಆಯೋಜನೆಯಾಗಲಿದ್ದು, ಹಬ್ಬವು ಸ್ಥಳೀಯ ಕಲಾವಿದರಿಗೆ ತನ್ನ ಪ್ರತಿಭೆ ಪ್ರದರ್ಶಿಸಲು ವೇದಿಕೆ ನೀಡಲಿದೆ. ಈ ಮೂಲಕ ದಸರಾ, ನಾಡು ಮತ್ತು ನುಡಿಯ ತೋಡಕನ್ನು ಮುಂದಿನ ಪೀಳಿಗೆಗೆ ಪರಿಚಯಿಸುವ ಉದ್ದೇಶವಿದೆ ಎಂದರು.




