
BANGALORE: ಕಲಬುರ್ಗಿ ಜಿಲ್ಲೆಯ ಆಳಂದ ವಿಧಾನಸಭಾ ಕ್ಷೇತ್ರದಲ್ಲಿ ನಡೆದ ಮತಪಟ್ಟಿ ರಾಜಕೀಯದ ಕುರಿತು ಗಂಭೀರ ಆರೋಪಗಳು ಕೇಳಿಬಂದ ಹಿನ್ನೆಲೆ, ರಾಜ್ಯ ಸರ್ಕಾರ ವಿಶೇಷ ತನಿಖಾ ತಂಡ (ಎಸ್ಐಟಿ) ರಚಿಸಿದೆ. ಹೌದು.. ಮತಪಟ್ಟಿಯಿಂದ ಅನಧಿಕೃತವಾಗಿ ಹೆಸರು ಕೈ ಬಿಡಲಾಗಿರುವ ಪ್ರಕರಣದ ಕುರಿತು 21.02.2023ರಂದು ನೀಡಲಾದ ದೂರಿನ ಆಧಾರದ ಮೇಲೆ ಕಲಬುರ್ಗಿ ಜಿಲ್ಲೆ ಆಳಂದ ಪೊಲೀಸ್ ಠಾಣೆಯಲ್ಲಿ ಎಫ್ಐಆರ್ ಸಂಖ್ಯೆ 26/2023 ಅಡಿಯಲ್ಲಿ IPC ಕಲಂಗಳು 182, 419, 464 ಮತ್ತು 465ರಂತೆ ಪ್ರಕರಣ ದಾಖಲಾಗಿದೆ.
ಈ ಪ್ರಕರಣದ ಸಂಬಂಧ ರಾಜ್ಯ ಸರ್ಕಾರ ಸಿಐಡಿ ಅಪರ ಪೊಲೀಸ್ ಮಹಾ ನಿರ್ದೇಶಕ ಬಿ.ಕೆ. ಸಿಂಗ್ ಅವರ ನೇತೃತ್ವದಲ್ಲಿ ವಿಶೇಷ ತನಿಖಾ ತಂಡವನ್ನು ರಚಿಸಿದ್ದು, ಸಿಐಡಿ ಎಸ್ಪಿ ಸೈದುಲು ಅದಾವತ್ ಮತ್ತು ಸಿಐಡಿ ಎಸ್ಪಿ ಶುಭಾನ್ವಿತ ಅವರು ಈ ತಂಡದಲ್ಲಿ ಸದಸ್ಯರಾಗಿದ್ದಾರೆ.
ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಲೋಕಸಭೆ ವಿಪಕ್ಷ ನಾಯಕ ರಾಹುಲ್ ಗಾಂಧಿ ದೆಹಲಿಯಲ್ಲಿ ಸುದ್ದಿಗೋಷ್ಠಿ ನಡೆಸಿ, ಮತಗಳ್ಳತನದ ಗಂಭೀರ ಆರೋಪಗಳನ್ನು ಮಾಡಿದ್ದಾರೆ. ಇನ್ನು ಈ ಕ್ರಿಮಿನಲ್ ಪ್ರಕರಣಕ್ಕೆ ಸಂಬಂಧಿಸಿದಂತೆ ರಾಜ್ಯದ ಇತರ ಪೊಲೀಸ್ ಠಾಣೆಗಳಲ್ಲಿ ದಾಖಲಾಗ ಬಹುದಾದ ಇತರ ಪ್ರಕರಣಗಳ ಸಮಗ್ರ ತನಿಖೆಯನ್ನು ಕೈಗೊಳ್ಳಲು ಎಸ್ ಐಟಿ ತನಿಖಾ ತಂಡವನ್ನು ರಚಿಸಲಾಗಿದೆ. ವಿಶೇಷ ತನಿಖಾ ತಂಡಕ್ಕೆ ಕರ್ನಾಟಕ ರಾಜ್ಯ ಕ್ಷೇತ್ರ ವ್ಯಾಪ್ತಿಗೆ ಸಂಬಂಧಿಸಿದಂತೆ, ಪೊಲೀಸ್ ಠಾಣಾಧಿಕಾರವನ್ನು ನೀಡಲಾಗಿದೆ. ಅಲ್ದೇ ಎಲ್ಲ ಪ್ರಕರಣಗಳ ಸಮಗ್ರ ತನಿಖೆಯನ್ನು ಕೈಗೊಂಡು ಶೀಘ್ರವೇ ತನಿಖೆಯನ್ನು ಪೂರ್ಣಗೊಳಿಸಿ ತನಿಖಾ ವರದಿಯನ್ನು ಸರ್ಕಾರಕ್ಕೆ ಸಲ್ಲಿಸುವಂತೆ ಸೂಚಿಸಲಾಗಿದೆ.




