Gulbarga ವಿಶ್ವವಿದ್ಯಾಲಯದಲ್ಲಿ ದಲಿತ ವಿದ್ಯಾರ್ಥಿನಿಗೆ ಲೈಂಗಿಕ ಕಿರುಕುಳ ನೀಡಿದ ಆರೋಪದ ಹಿನ್ನೆಲೆಯಲ್ಲಿ ಸಿಪಾಯಿ ಸಿಬ್ಬಂದಿಯನ್ನು ಸೇವೆಯಿಂದ ವಜಾಗೊಳಿಸಲಾಗಿದೆ.

ದಲಿತ ವಿದ್ಯಾರ್ಥಿನಿಗೆ ಲೈಂಗಿಕ ಹಾಗೂ ಮಾನಸಿಕ ಕಿರುಕುಳ ನೀಡಿದ ಆರೋಪದ ಹಿನ್ನೆಲೆಯಲ್ಲಿ Gulbarga ವಿಶ್ವವಿದ್ಯಾಲಯ ಭೌತಶಾಸ್ತ್ರ ಅಧ್ಯಯನ ಮತ್ತು ಸಂಶೋಧನಾ ವಿಭಾಗದಲ್ಲಿ ಸಿಪಾಯಿ ಹುದ್ದೆಯಲ್ಲಿ ಕೆಲಸ ಮಾಡುತ್ತಿದ್ದ ಸಿಬ್ಬಂದಿಯನ್ನು ಸೇವೆಯಿಂದ ವಜಾಗೊಳಿಸಲಾಗಿದೆ.
ವಜಾಗೊಂಡ ಸಿಬ್ಬಂದಿಯನ್ನು ವಿಜಯಕುಮಾರ ಕಡಗಂಚಿ ಎಂದು ಗುರುತಿಸಲಾಗಿದೆ. ವಿದ್ಯಾರ್ಥಿನಿಯ ಭವಿಷ್ಯದ ಹಿತದೃಷ್ಟಿಯಿಂದ ತಕ್ಷಣ ಕ್ರಮ ಕೈಗೊಳ್ಳಲಾಗಿದೆ ಎಂದು ವಿಶ್ವವಿದ್ಯಾಲಯದ ಆಡಳಿತ ಮಂಡಳಿ ತಿಳಿಸಿದೆ.

ವಿದ್ಯಾರ್ಥಿನಿಯಿಂದ ಗಂಭೀರ ಆರೋಪ
ಎಂ.ಎಸ್ಸಿ ವ್ಯಾಸಂಗ ಮಾಡುತ್ತಿರುವ ವಿದ್ಯಾರ್ಥಿನಿ, ಕಳೆದ ಒಂದು ವರ್ಷದಿಂದ ಆರೋಪಿಯು ತನ್ನ ಮೇಲೆ ನಿರಂತರವಾಗಿ ಕಿರುಕುಳ ನೀಡುತ್ತಿದ್ದಾನೆ ಎಂದು ದೂರಿನಲ್ಲಿ ಉಲ್ಲೇಖಿಸಿದ್ದಾಳೆ.
ಅದರ ಜೊತೆಗೆ, ಅಶ್ಲೀಲ ಪದಗಳಿಂದ ನಿಂದನೆ ಮಾಡುವುದು ಜಾತಿಯನ್ನು ಗುರಿಯಾಗಿಸಿ ಹೀಯಾಳಿಸುವುದು ಜೀವ ಬೆದರಿಕೆ ಹಾಕುವುದು ದೇಹದ ಬಗ್ಗೆ ಅವಮಾನಕಾರಿ ಮಾತುಗಳಾಡುವುದು ಹೀಗೆ ಹಲವು ರೀತಿಯ ಕಿರುಕುಳ ನೀಡಲಾಗಿದೆ ಎಂದು ವಿದ್ಯಾರ್ಥಿನಿ ಆರೋಪಿಸಿದ್ದಾಳೆ.

ವಿಡಿಯೋ ಮಾಡಿ ಜಾಲತಾಣದಲ್ಲಿ ಹಾಕುವುದಾಗಿ ಬೆದರಿಕೆ
ಇದಲ್ಲದೆ, ವಿದ್ಯಾರ್ಥಿನಿ ತನ್ನ ದೂರಿನಲ್ಲಿ ಮತ್ತೊಂದು ಗಂಭೀರ ವಿಷಯವನ್ನು ಬಹಿರಂಗಪಡಿಸಿದ್ದಾಳೆ. ಆರೋಪಿಯು ತನ್ನ ಗಮನಕ್ಕೆ ಬರದಂತೆ ವಿಡಿಯೋ ಚಿತ್ರೀಕರಿಸಿ,
ಅದನ್ನು ಜಾಲತಾಣದಲ್ಲಿ ಹಂಚಿಕೊಳ್ಳುವುದಾಗಿ ಬೆದರಿಕೆ ಹಾಕಿದ್ದಾನೆ ಎಂದು ಹೇಳಿದ್ದಾಳೆ.
ಮುಂದುವರಿದು,ಆರೋಪಿಯು ತನ್ನ ಗಮನಕ್ಕೆ ತಂದ ಬಳಿಕವೇ ತರಗತಿಯಿಂದ ಹೊರಗೆ ಹೋಗಬೇಕು ಎಂದು ತಾಕೀತು ಮಾಡುತ್ತಿದ್ದ.
ಈ ನಿರಂತರ ಕಿರುಕುಳದಿಂದ ಬೇಸತ್ತು ವಿದ್ಯಾರ್ಥಿನಿ ಆತ್ಮಹತ್ಯೆಗೆ ಪ್ರಯತ್ನಿಸಿದ ವಿಷಯವೂ ದೂರಿನಲ್ಲಿ ಉಲ್ಲೇಖಿಸಲಾಗಿದೆ.

ಅಧಿಕಾರಿಗಳ ಗಮನಕ್ಕೆ ತಂದರೂ ಕ್ರಮ ಕೈಗೊಂಡಿಲ್ಲ ಎಂಬ ಆರೋಪ
ವಿದ್ಯಾರ್ಥಿನಿ ತನ್ನ ಮೇಲೆ ನಡೆದ ಕಿರುಕುಳದ ಬಗ್ಗೆ ವಿಭಾಗ ಮುಖ್ಯಸ್ಥರ ಗಮನಕ್ಕೆ ತಂದಿದ್ದರೂ, ಯಾವುದೇ ಕ್ರಮ ಕೈಗೊಳ್ಳಲಾಗಿಲ್ಲ ಎಂದು ದೂರಿನಲ್ಲಿ ತಿಳಿಸಿದ್ದಾಳೆ.
ಈ ಹಿನ್ನೆಲೆಯಲ್ಲಿ, ವಿಶ್ವವಿದ್ಯಾಲಯದ ಕುಲಸಚಿವರು ಪ್ರೊ. ರಮೇಶ ಲಂಡನಕರ್ ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿ ತಕ್ಷಣ ಕ್ರಮ ಕೈಗೊಂಡಿದ್ದಾರೆ.
ವಿದ್ಯಾರ್ಥಿನಿಯ ಲಿಖಿತ ದೂರನ್ನು ಆಧರಿಸಿ,ವಿಜಯಕುಮಾರ ಕಡಗಂಚಿ ಅವರನ್ನು ಸೇವೆಯಿಂದ ವಜಾಗೊಳಿಸಿ ಅಧಿಕೃತ ಆದೇಶ ಹೊರಡಿಸಲಾಗಿದೆ.
ಅದರ ಜೊತೆಗೆ,ವಿಭಾಗದ ಸಿಬ್ಬಂದಿ ವಿರುದ್ಧ ದೂರು ಬಂದರೂ ಕ್ರಮ ಏಕೆ ಕೈಗೊಂಡಿಲ್ಲ ಎಂಬ ಬಗ್ಗೆ ವಿವರಣೆ ನೀಡುವಂತೆ
ಭೌತಶಾಸ್ತ್ರ ವಿಭಾಗದ ಮುಖ್ಯಸ್ಥ ಪ್ರೊ. ಬಸವರಾಜ ಸಣ್ಣಕ್ಕಿ ಅವರಿಗೆ ಸೂಚನೆ ನೀಡಲಾಗಿದೆ.




