
MADHUGIRI-
ಮಧುಗಿರಿ ತಾಲೂಕಿನ ಚಿಕ್ಕಮಾಲೂರು ಗ್ರಾಮದಲ್ಲಿ ಅಭಿವೃದ್ಧಿ ಎಂಬುದು ಮರೀಚಿಕೆಯಾಗಿದ್ದು, 15ನೇ ಹಣಕಾಸು ಯೋಜನೆಯ ಹಣ ಹಾಗೂ ನರೇಗಾ ಯೋಜನೆಯ ಹಣವನ್ನು ದುರ್ಬಳಕೆ ಮಾಡಿಕೊಂಡಿದ್ದು, ಕೆಲಸ ಮಾಡಿಸದೇ ಬಿಲ್ ಮಾಡಿಕೊಂಡಿದ್ದಾರೆ ಎಂದು ಆರೋಪಿಸಿದ ಚಿಕ್ಕಮಾಲೂರು ಗ್ರಾಮದ ಗ್ರಾಮಸ್ಥರು ರಾತ್ರಿ 9ಗಂಟೆವರೆಗೂ ಪಿಡಿಒ ದೊಡ್ಡಯ್ಯ ಸ್ವಾಮಿ ಅವರನ್ನು ಗ್ರಾಮ ಸಂಚಾರ ಮಾಡಿಸಿದ ಘಟನೆ ಮಧುಗಿರಿ ತಾಲೂಕಿನ ಚಿಕ್ಕಮಾಲೂರು ಗ್ರಾಮದಲ್ಲಿ ನಡೆದಿದೆ.
ಮಧುಗಿರಿ ತಾಲೂಕಿನ ಚಿಕ್ಕಮಾಲೂರು ಗ್ರಾಮದಲ್ಲಿ ಚರಂಡಿಗಳು ಗಬ್ಬೆದ್ದು ನಾರುತ್ತಿವೆ ರೋಗ ರುಜಿನಗಳು ಬಂದು ಮೃತಪಟ್ಟರು ಅಂತ್ಯ ಸಂಸ್ಕಾರ ಮಾಡಲು ಸ್ಮಶಾನದ ವ್ಯವಸ್ಥೆ ಇಲ್ಲ. ಸ್ಮಶಾನಕ್ಕೆ ಹೋಗಲು ಸೂಕ್ತ ರಸ್ತೆಯೂ ಇಲ್ಲ ಅಲ್ದೇ ಸ್ಮಶಾನದಲ್ಲಿ ಮುಳ್ಳಿನ ಗಿಡಗಳು ತುಂಬಿವೆ. ಹೀಗಾಗಿ ಸ್ಮಶಾನದ ಅಭಿವೃದ್ಧಿಗೆ 15ನೇ ಹಣಕಾಸು ಯೋಜನೆಯಡಿ 50 ಸಾವಿರ ಹಣ ಬಿಡುಗಡೆ ಮಾಡಲಾಗಿದೆ. ಆದ್ರೆ ಸ್ಮಶಾನ ಅಭಿವೃದ್ಧಿ ಹೆಸರಲ್ಲಿ ಪಿಡಿಒ ಗೋಲ್ಮಾಲ್ ಮಾಡಿದ್ದಾರೆ ಎಂದು ಗ್ರಾಮಸ್ಥರು ಕಿಡಿಕಾರಿದ್ರು.
ಇನ್ನು ಚಿಕ್ಕಮಾಲೂರು ಗ್ರಾಮದಲ್ಲಿ ಸ್ವಚ್ಛತೆ ಎಂಬುದು ಮಾಯವಾಗಿದ್ದು, ಕನಿಷ್ಠ ಮೂಲಭೂತ ಸೌಕರ್ಯವೂ ಇಲ್ಲವಾಗಿದೆ, ಗ್ರಾಮಕ್ಕೆ ಕನಿಷ್ಠ ನೀರು, ಬೆಳಕು, ಸ್ವಚ್ಛತೆ ಕಾಪಾಡಲು ವಿಫಲವಾದ ಗ್ರಾಮ ಪಂಚಾಯ್ತಿ ಪಿಡಿಒ ಹಾಗೂ ಅಧಿಕಾರಿಗಳನ್ನು ಗ್ರಾಮಸ್ಥರು ಪಿಡಿಒಗೆ ರಾತ್ರಿ 9 ಗಂಟೆ ವರೆಗೆ ಗ್ರಾಮ ಸಂಚಾರ ಮಾಡಿಸಿ ಗ್ರಾಮದ ಸಮಸ್ಯೆಗಳನ್ನು ಕಣ್ಣಿಗೆ ಕುಕ್ಕುವಂತೆ ತೋರಿಸಿದ್ದಾರೆ. ಈ ವೇಳೆ ಸಾರ್ವಜನಿಕರು ಸ್ಮಶಾನದ ಅಭಿವೃದ್ಧಿ ಹೆಸರಲ್ಲಿ ಗೋಲ್ಮಾಲ್ ಮಾಡಿದ್ದು, ಕಾಮಗಾರಿ ಹೆಸರಲ್ಲಿ ಬಿಲ್ ಅಪ್ರೂವಲ್ ಮಾಡಲು ಯತ್ನ ನಡೆದಿದೆ ಎಂದು ಗ್ರಾಮಸ್ಥರ ಪ್ರಶ್ನೆಗೆ ಪಿಡಿಒ ಕಕ್ಕಾಬಿಕ್ಕಿಯಾದ್ರು, 15 ನೇ ಹಣಕಾಸು ಯೋಜನೆಯಡಿ ಸಾರ್ವಜನಿಕ ಸ್ಮಶಾನ ಸ್ವಚ್ಛತೆ ಮಾಡಲಾಗಿತ್ತು. ಮಳೆಯಾದ ಪರಿಣಾಮ ಗಿಡಮರಗಳು ಬೆಳದುಕೊಂಡಿವೆ. ಸ್ಮಶಾನಕ್ಕೆ ಸೂಕ್ತ ರಸ್ತೆ ಅಭಿವೃದ್ಧಿಗೆ ನೂತನ ಅಧ್ಯಕ್ಷರ ಜತೆ ಚರ್ಚಿಸಿ ಕ್ರಮ ಕೈಗೊಳ್ಳಲಾಗುವುದು ಎಂದು ಪಿಡಿಒ ಉತ್ತರಿಸಿದ್ರು.
ಒಟ್ನಲ್ಲಿ ಗ್ರಾಮಸ್ಥರು ಮಾಡಿದ ಕೆಲಸದಿಂದಾಗಿ ಪಿಡಿಒ ಇಡೀ ಗ್ರಾಮವನ್ನು ಸಂಚಾರ ಮಾಡುವಂತೆ ಮಾಡಿದ್ದು, ಗ್ರಾಮದಲ್ಲಿದ್ದ ಸಮಸ್ಯೆಗಳನ್ನು ಕಣ್ಣಾರೆ ಕಾಣುವಂತೆ ಮಾಡಿದ್ದಾರೆ. ಗ್ರಾಮಸ್ಥರು ತರಾಟೆ ತೆಗೆದುಕೊಂಡ ಬಳಿಕವಾದ್ರು ಅಧಿಕಾರಿಗಳು ಎಚ್ಚೆತ್ತು ಕ್ರಮ ಕೈಗೊಳ್ಳುತ್ತಾರಾ ಎಂದು ಕಾದುನೋಡಬೇಕಿದೆ




