
BENGALURU : ಬೆಂಗಳೂರು ನಗರದ ಬಗಲಗುಂಟೆಯಲ್ಲಿ ಆಸ್ತಿಯ ಆಸೆಗೆ ತಂದೆಯನ್ನೇ ಕೊಂದ ಮಗನ ಕ್ರೂರತೆ ಇದೀಗ ಮರಣೋತ್ತರ ಪರೀಕ್ಷೆ (Post-mortem Report) ಮೂಲಕ ಬೆಳಕಿಗೆ ಬಂದಿದೆ. ದಾಸರಹಳ್ಳಿಯ ಕೆಂಪೇಗೌಡ ನಗರ ನಿವಾಸಿಯಾಗಿದ್ದ ಉದ್ಯಮಿ ಮಂಜಣ್ಣ (ವಯಸ್ಸು 60) ಅವರನ್ನು ಅವರೇ ಮಗ ಮನೋಜ್ ಹಾಗೂ ಆತನ ಸ್ನೇಹಿತ ಪ್ರವೀಣ್ ಸೇರಿ ಕೊಲೆ ಮಾಡಿದ್ದಾರೆ.
ಸೆಪ್ಟೆಂಬರ್ 2 ರಂದು, ವುಡ್ ಫ್ಯಾಕ್ಟರಿಯಲ್ಲಿ ಕೆಲಸ ಮಾಡುತ್ತಿದ್ದ ಮಂಜಣ್ಣ ಅವರನ್ನು ವಿಶ್ರಾಂತಿಗೆಂದು ಮನೋಜ್ ಮನೆಗೆ ಕಳುಹಿಸಿದ್ದು, ಮನೆಯಲ್ಲಿ ಯಾರೂ ಇಲ್ಲದಾಗ ಮನೋಜ್ ಹಾಗೂ ಪ್ರವೀಣ್ ಮದ್ಯಪಾನ ಮಾಡಿ ಬಂದು, ಟವಲ್ನಿಂದ ಅವರ ಕುತ್ತಿಗೆ ಬಿಗಿದು ಕೊಲೆ ಮಾಡಿದ್ದು, ಬಳಿಕ ಈ ಕೊಲೆಯನ್ನು ಹೃದಯಾಘಾತ ಎಂದು ಬಿಂಬಿಸಿದ್ದಾರೆ. ಆದರೆ ಮಂಜಣ್ಣ ಅವರ ಮೃತದೇಹವನ್ನು ನೋಡಿ ಪೋಲಿಸರಿಗೆ ಅನುಮಾನ ಉಂಟಾಗಿ, ಮರಣೋತ್ತರ ಪರೀಕ್ಷೆಗೆ ಕಳಿಸಿದರು. ಇದೀಗ ಪಿಎಂ ವರದಿಯಲ್ಲಿ ಇದು ನೈಜ ಕೊಲೆ ಎಂದು ದೃಢಪಟ್ಟಿದೆ.
ಈ ಪ್ರಕರಣದಲ್ಲಿ, ಕೊಲೆಗೆ ನೇರವಾಗಿ ಸಹಕರಿಸಿದ ಪ್ರವೀಣ್ ಹಾಗೂ ಇನ್ನೊಬ್ಬನನ್ನು ಪೊಲೀಸರು ಬಂಧಿಸಿ ವಿಚಾರಣೆ ನಡೆಸುತ್ತಿದ್ದಾರೆ. ಆದರೆ ಪ್ರಮುಖ ಆರೋಪಿ ಮನೋಜ್ ಈಗಾಗಲೇ ಪರಾರಿಯಾಗಿದ್ದು, ಪೊಲೀಸರು ಅವನಿಗಾಗಿ ಬಲೆ ಬೀಸಿದ್ದಾರೆ.




