Belagavi : ಬಾಗಲಕೋಟೆಯಲ್ಲಿ ಬುದ್ಧಿಮಾಂದ್ಯ ಮಕ್ಕಳ ಮೇಲೆ ನಡೆದ ಅಮಾನವೀಯ ಹಲ್ಲೆ ಪ್ರಕರಣ ರಾಜ್ಯಾದ್ಯಂತ ತೀವ್ರ ಆಕ್ರೋಶಕ್ಕೆ ಕಾರಣವಾಗಿದೆ.

Belagavi : ಲೈಸನ್ಸ್ ಇಲ್ಲದೆ ವಸತಿಶಾಲೆ ನಡೆಸಿದ್ದ ಭಯಾನಕ ಸತ್ಯ ಬಯಲು
ಬಾಗಲಕೋಟೆಯಲ್ಲಿ ಬುದ್ಧಿಮಾಂದ್ಯ ಮಕ್ಕಳ ಮೇಲೆ ನಡೆದ ಅಮಾನವೀಯ ಹಲ್ಲೆ ಪ್ರಕರಣ ರಾಜ್ಯಾದ್ಯಂತ ತೀವ್ರ ಆಕ್ರೋಶಕ್ಕೆ ಕಾರಣವಾಗಿದೆ. ದಿವ್ಯಜ್ಯೋತಿ ಬುದ್ಧಿಮಾಂದ್ಯ ಮಕ್ಕಳ ವಸತಿಶಾಲೆಯಲ್ಲಿ 16 ವರ್ಷದ ಬಾಲಕನ ಮೇಲೆ ಶಿಕ್ಷಕ ದಂಪತಿ ಕ್ರೂರವಾಗಿ ಹಲ್ಲೆ ನಡೆಸಿದ್ದ ಪ್ರಕರಣಕ್ಕೆ ಸಂಬಂಧಿಸಿದಂತೆ ಪೊಲೀಸರು ದಂಪತಿಯನ್ನು ಬಂಧಿಸಿದ್ದಾರೆ.
ಖಾರದಪುಡಿ ಎರಚಿ, ಪೈಪ್ನಿಂದ ಥಳನೆ- ರಾಕ್ಷಸಿ ಕೃತ್ಯ
ಬಾಗಲಕೋಟೆ ನವನಗರದ 54ನೇ ಸೆಕ್ಟರ್ನಲ್ಲಿ ಕಾರ್ಯನಿರ್ವಹಿಸುತ್ತಿದ್ದ ದಿವ್ಯಜ್ಯೋತಿ ಬುದ್ಧಿಮಾಂದ್ಯ ಮಕ್ಕಳ ವಸತಿಶಾಲೆಯಲ್ಲಿ ಈ ದುರ್ಘಟನೆ ನಡೆದಿದೆ.
ಬಾಲಕ ದೀಪಕ್ ರಾಠೋಡ್ (16) ಮೇಲೆ ಶಿಕ್ಷಕ ಅಕ್ಷಯ್ ಇಂಗಳಕರ್ ಬೆಲ್ಟ್ ಮತ್ತು ಪ್ಲಾಸ್ಟಿಕ್ ಪೈಪ್ನಿಂದ ಹಲ್ಲೆ ನಡೆಸಿದ್ದಾನೆ. ಅಲ್ಲದೆ, ಆತನ ಪತ್ನಿ ಆನಂದಿ ಬಾಲಕನ ಕಣ್ಣಿಗೆ ಖಾರದಪುಡಿ ಎರಚಿ ವಿಕೃತಿ ಮೆರೆದಿದ್ದಾಳೆ.
ಹಲ್ಲೆಗೆ ಒಳಗಾದ ಬಾಲಕನ ತಂದೆ ಅಶೋಕ ರಾಠೋಡ ನೀಡಿದ ದೂರಿನ ಮೇರೆಗೆ ನವನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಈ ಪ್ರಕರಣದಲ್ಲಿ ಆರೋಪಿಗಳ ವಿರುದ್ಧ:
- ಭಾರತೀಯ ನ್ಯಾಯ ಸಂಹಿತೆ – 2023
- ಜುವೆನೈಲ್ ಜಸ್ಟಿಸ್ (JJ) ಕಾಯ್ದೆ
- RPWD (ವಿಕಲಚೇತನರ ಹಕ್ಕು) ಕಾಯ್ದೆ
- SC/ST ಅಟ್ರಾಸಿಟಿ ಕಾಯ್ದೆ
ಅಡಿ ಪ್ರಕರಣ ದಾಖಲಿಸಲಾಗಿದೆ.
ಪ್ರಕರಣಕ್ಕೆ ಸಂಬಂಧಿಸಿದಂತೆ ಮುಖ್ಯ ಆರೋಪಿಗಳಾದ ಅಕ್ಷಯ್ ಮತ್ತು ಆನಂದಿ ದಂಪತಿಯ ಜೊತೆಗೆ ಸಹ ಶಿಕ್ಷಕರಾದ ವಿಠಲ್ ಹಾಗೂ ವಿಶಾಲ್ರನ್ನು ಕೂಡ ಪೊಲೀಸರು ವಶಕ್ಕೆ ಪಡೆದಿದ್ದಾರೆ.
ಡಿವೈಎಸ್ಪಿ ಗಜಾನನ ಸುತಾರ್ ನೇತೃತ್ವದಲ್ಲಿ ಸ್ಥಳ ಮಹಜರು, ಹಲ್ಲೆಗೆ ಬಳಸಿದ ವಸ್ತುಗಳ ಸೀಜ್ ಕಾರ್ಯ ನಡೆಯುತ್ತಿದೆ.
ಪರವಾನಗಿ ಇಲ್ಲದೆ ವಸತಿಶಾಲೆ ನಡೆಸಿದ್ದ ದಂಪತಿ
ವಿಡಿಯೋ ವೈರಲ್ ಆದ ನಂತರ ಅಧಿಕಾರಿಗಳು ಶಾಲೆಗೆ ಭೇಟಿ ನೀಡಿದಾಗ, ಯಾವುದೇ ಸರ್ಕಾರಿ ಪರವಾನಗಿ ಇಲ್ಲದೆ ಶಾಲೆ ನಡೆಸಲಾಗುತ್ತಿತ್ತು ಎಂಬ ಸತ್ಯ ಬಯಲಾಗಿದೆ.
ಶಾಲೆಯಲ್ಲಿ ಒಟ್ಟು 40 ಬುದ್ಧಿಮಾಂದ್ಯ ಮಕ್ಕಳು ಇದ್ದು, ಎಲ್ಲರನ್ನೂ ತಾತ್ಕಾಲಿಕವಾಗಿ ಬಾಲಮಂದಿರಕ್ಕೆ ಶಿಫ್ಟ್ ಮಾಡಲಾಗುತ್ತದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
“ತಕ್ಷಣವೇ ಶಾಲೆ ಮುಚ್ಚಿ” – ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್
ಈ ಕುರಿತು ಪ್ರತಿಕ್ರಿಯೆ ನೀಡಿದ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್,
“ಇದು ಅತ್ಯಂತ ಅಮಾನವೀಯ ಹಾಗೂ ಸಮಾಜಕ್ಕೆ ಕಳಂಕ ತರುವ ಘಟನೆ. ಸರ್ಕಾರದ ಅನುಮತಿ ಇಲ್ಲದೇ ನಡೆಸುತ್ತಿರುವ ಈ ವಸತಿ ಶಾಲೆಯನ್ನು ತಕ್ಷಣವೇ ಮುಚ್ಚಲಾಗುತ್ತದೆ”
ಎಂದು ಸ್ಪಷ್ಟಪಡಿಸಿದ್ದಾರೆ.
ಮಕ್ಕಳ ರಕ್ಷಣಾಧಿಕಾರಿಗಳನ್ನು ಸ್ಥಳಕ್ಕೆ ಕಳುಹಿಸಲಾಗಿದ್ದು, ಪೋಷಕರ ಅನುಮತಿಯಿಂದ ಮಕ್ಕಳನ್ನು ಸರ್ಕಾರಿ ರಕ್ಷಣಾ ನಿಲಯಗಳಿಗೆ ಸ್ಥಳಾಂತರಿಸಲಾಗುವುದು ಎಂದು ತಿಳಿಸಿದ್ದಾರೆ.
ಪೋಷಕರ ಆಕ್ರೋಶ
ಘಟನೆ ಬಹಿರಂಗವಾಗುತ್ತಿದ್ದಂತೆ ವಿವಿಧ ಊರುಗಳಿಂದ ಪೋಷಕರು ಶಾಲೆಗೆ ಆಗಮಿಸಿ ತಮ್ಮ ಮಕ್ಕಳನ್ನು ಮನೆಗೆ ಕರೆದೊಯ್ಯುತ್ತಿದ್ದಾರೆ.
ಒಟ್ಟು 32 ಮಕ್ಕಳಲ್ಲಿ 11 ಮಕ್ಕಳನ್ನು ಈಗಾಗಲೇ ಪೋಷಕರಿಗೆ ಒಪ್ಪಿಸಲಾಗಿದೆ.ಶಾಲೆ ಎದುರು ಜಮಾಯಿಸಿದ ಪೋಷಕರು ಕಣ್ಣೀರಿಡುತ್ತಾ,
“ಇಂತಹ ಕೃತ್ಯಗಳಿಗೆ ಕಠಿಣ ಶಿಕ್ಷೆ ವಿಧಿಸಬೇಕು” ಎಂದು ಒತ್ತಾಯಿಸಿದ್ದಾರೆ.




