ವೃದ್ಧೆಗೆ 24 ಕೋಟಿ Digital Arrest ವಂಚನೆ – 6 ಮಂದಿ ಆರೋಪಿಗಳನ್ನು ಬಂಧಿಸಿದ ಪೊಲೀಸರು.

ಬೆಂಗಳೂರಿನ 74 ವರ್ಷದ ವೃದ್ಧೆಯೊಬ್ಬರನ್ನು ಡಿಜಿಟಲ್ ಅರೆಸ್ಟ್ ಹೆಸರಿನಲ್ಲಿ ಬೆದರಿಸಿ 24 ಕೋಟಿ ರೂಪಾಯಿ ವಂಚನೆ ಮಾಡಿದ್ದ ಪ್ರಕರಣ ದಿನಕ್ಕೊಂದು ಹೊಸ ತಿರುವು ಪಡೆದುಕೊಳ್ಳುತ್ತಿದೆ. ಬೆಂಗಳೂರು ಸೈಬರ್ ಪೊಲೀಸರ ತನಿಖೆ ವೇಳೆ ಇದು ಕೇವಲ ಒಂದು ವಂಚನೆ ಪ್ರಕರಣವಲ್ಲ, ದೇಶದ ಹಲವು ರಾಜ್ಯಗಳಲ್ಲಿ ವ್ಯಾಪಿಸಿರುವ ಬೃಹತ್ ಸೈಬರ್ ಕ್ರಿಮಿನಲ್ ನೆಟ್ವರ್ಕ್ ಅನ್ನೋದು ಬೆಳಕಿಗೆ ಬಂದಿದೆ.
ವಿವಿಧ ರಾಜ್ಯಗಳ ಆರೋಪಿಗಳ ಬಂಧನ
ಬೆಂಗಳೂರಿನ ಶಿವಾಜಿನಗರದ ವೃದ್ಧ ಮಹಿಳೆಯೊಬ್ಬರಿಗೆ ಐಷಾರಾಮಿ ಡಿಜಿಟಲ್ ಜಾಲ ಹೆಣೆದು ಬರೋಬ್ಬರಿ 24 ಕೋಟಿ ರೂಪಾಯಿ ದೋಚಿದ್ದ ಪ್ರಕರಣ ಸಂಬಂಧ ಈಗಾಗಲೇ ಮುಂಬೈ ಮೂಲದ ಆಕಾಶ್ ಮಲ್ಲಿಕ್, ತಮಿಳುನಾಡಿನ ಶಿವಜ್ಞಾನಮ್, ಗುಜರಾತ್ ಮೂಲದ ಪಾಲಾಕ್ ಬೈ ಪಾಟೇಲ್, ಹಮೀದ್ ಹಾಗೂ ದೆಹಲಿಯ ಓಂಪ್ರಕಾಶ್ ಸೇರಿದಂತೆ ವಿವಿಧ ರಾಜ್ಯಗಳ ಆರೋಪಿಗಳನ್ನು ಪೊಲೀಸರು ಬಂಧಿಸಿದ್ದಾರೆ.

ಬೆಂಗಳೂರು ಸೈಬರ್ ಪೊಲೀಸರಿಂದ ತನಿಖೆ
ಇನ್ನು ತನಿಖೆ ವೇಳೆ ಆರೋಪಿ ಪಾಲಾಕ್ ಬೈ ಹಾಗೂ ನರೇಂದ್ರ ಪಟೇಲ್ ವಿರುದ್ಧ ಬೆಳಗಾವಿ ಸಿಸಿಪಿಎಸ್ ಠಾಣೆಯಲ್ಲಿ 15 ಕೋಟಿ Digital Arrest ಪ್ರಕರಣ ದಾಖಲಾಗಿದ್ದು, ಆರೋಪಿಗಳನ್ನು ಬಾಡಿ ವಾರೆಂಟ್ ಮೇಲೆ ವಶಕ್ಕೆ ಪಡೆಯಲು ಬೆಂಗಳೂರು ಸೈಬರ್ ಪೊಲೀಸರು ಸಿದ್ಧತೆ ನಡೆಸಿದ್ದಾರೆ.
ಜೊತೆಗೆ ಮತ್ತೊಬ್ಬ ಆರೋಪಿ ಶಿವಜ್ಞಾನಮ್ ತಮಿಳುನಾಡಿನ ಈರೋಡ್ ಮೂಲದವನಾಗಿದ್ದು, ನಾಲ್ಕು ಸೈಬರ್ ಅಪರಾಧ ಪ್ರಕರಣಗಳಲ್ಲಿ ಭಾಗಿಯಾಗಿದ್ದಾನೆ ಎನ್ನಲಾಗಿದೆ. ಇದೇ ರೀತಿ ಮುಂಬೈ ಮೂಲದ ಆಕಾಶ್ ಮಲ್ಲಿಕ್ ವಿರುದ್ಧವೂ ಮೂರು ಸೈಬರ್ ಪ್ರಕರಣಗಳು ದಾಖಲಾಗಿವೆ.ಹೀಗಾಗಿ ಬೇರೆ ಬೇರೆ ರಾಜ್ಯಗಳ ಆರೋಪಿಗಳಿಗೆ ಹೇಗೆ ಸಂಪರ್ಕ ಆಯ್ತು ಎಂಬುದರ ಕುರಿತು ಬೆಂಗಳೂರು ಸೈಬರ್ ಪೊಲೀಸರು ತನಿಖೆ ಮುಂದುವರೆಸಿದ್ದಾರೆ.

ಯಾರು ಈ ಸೈಬರ್ ಜಾಲದ ಕಿಂಗ್ಪಿನ್?
ಇನ್ನು ಪ್ರಕರಣ ಸಂಬಂಧ ಸುಮಾರು 1.46 ಕೋಟಿ ರೂಪಾಯಿ ಹಣವನ್ನ ಬೆಂಗಳೂರು ಸೈಬರ್ ಕಮಾಂಡ್ ಪೊಲೀಸರು ರಿಕವರಿ ಮಾಡಿದ್ದು, ಒಟ್ಟಾರೆ 2.86 ಕೋಟಿ ರೂಪಾಯಿ ವಶಪಡಿಸಿಕೊಳ್ಳುವ ಪ್ರಕ್ರಿಯೆ ಮುಂದುವರೆದಿದೆ.
ಆದರೆ ಈ ಬೃಹತ್ ಸೈಬರ್ ಜಾಲದ ಕಿಂಗ್ಪಿನ್ ಯಾರು ಅನ್ನೋದು ಇನ್ನೂ ಪತ್ತೆಯಾಗಿಲ್ಲ. ಪ್ರಕರಣದ ತನಿಖೆ ಮುಂದುವರೆದಿದ್ದು, ಮತ್ತಷ್ಟು ಆರೋಪಿಗಳ ಬಂಧನ ಸಾಧ್ಯತೆ ಇದೆ ಎಂದು ಸೈಬರ್ ಕಮಾಂಡ್ ಡಿಜಿಪಿ ಡಾ. ಪ್ರಣವ್ ಮೊಹಾಂತಿ ಮಾಹಿತಿ ನೀಡಿದ್ದಾರೆ.
ಇದನ್ನು ಓದಿ : ಡಿಜಿಟಲ್ ಅರೆಸ್ಟ್ ವಂಚನೆ-ಸಿಬಿಐ ತನಿಖೆಗೆ ಸುಪ್ರೀಂ ಕೋರ್ಟ್ ನಿರ್ದೇಶನ ಸಾಧ್ಯತೆ

ಮ್ಯೂಲ್ ಅಕೌಂಟ್ಗಳಿಗೆ ಹಣ ವರ್ಗಾವಣೆ
ಇನ್ನು ಬ್ಯಾಂಕ್ ಮೂಲಗಳಿಂದ ಮಾಹಿತಿ ಸಂಗ್ರಹಿಸಿ ದೊಡ್ಡ ಹುದ್ದೆಯಲ್ಲಿ ಕೆಲಸ ಮಾಡಿ ನಿವೃತ್ತರಾದವರನ್ನೇ ಟಾರ್ಗೆಟ್ ಮಾಡ್ತಿದ್ದ ಗ್ಯಾಂಗ್, ಹಣ ಬಂದ ಬಳಿಕ 20ಕ್ಕೂ ಹೆಚ್ಚು ಮ್ಯೂಲ್ ಅಕೌಂಟ್ಗಳಿಗೆ ಹಣ ವರ್ಗಾವಣೆ ಮಾಡುತ್ತಿತ್ತು ಎನ್ನಲಾಗಿದೆ. ಕರ್ನಾಟಕದಲ್ಲಿಯೂ ತಮ್ಮ ಜಾಲ ವಿಸ್ತರಿಸಿಕೊಂಡಿದ್ದ ಆರೋಪಿಗಳು ಸ್ಥಳೀಯ ಯುವಕರನ್ನು ಬಳಸಿಕೊಂಡು ಮಾಹಿತಿ ಕಲೆ ಹಾಕುತ್ತಿದ್ದರು ಎಂಬ ಮಾಹಿತಿ ಪೊಲೀಸರಿಗೆ ಸಿಕ್ಕಿದೆ.

ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.




