Murder : ಲಿವಿನ್ ರಿಲೇಷನ್ಶಿಪ್ನಲ್ಲಿದ್ದ ಮಹಿಳೆಯಿಂದಲೇ ಪ್ರಿಯಕರನ ಕೊಲೆ ಮಾಡಿರುವಂತಹ ಘಟನೆ ವಿಜಯಪುರ ನಗರದ ಅಮನ್ ಕಾಲೋನಿಯ ಮನೆಯೊಂದರಲ್ಲಿ ನಡೆದಿದೆ.

ವಿಜಯಪುರ ನಗರದ ಅಮನ್ ಕಾಲೋನಿಯ ಮನೆಯಲ್ಲಿ ನಡೆದ ಘಟನೆ ಸ್ಥಳೀಯರಲ್ಲಿ ಆತಂಕ ಮೂಡಿಸಿದೆ. ಲಿವಿಂಗ್ ರಿಲೇಷನ್ಶಿಪ್ನಲ್ಲಿ ಇದ್ದ ಸಮೀರ್ ಅಲಿಯಾಸ್ ಪಿಕೆ ಇನಾಂದಾರ್ (26) ಎಂಬ ಯುವಕನನ್ನು ಅವರ ಪ್ರೇಯಸಿ ತಯ್ಯಾಬಾ ಹಾಗೂ ಆಕೆಯ ಸಹೋದರ ಅಸ್ಲಮ್ ಭಾಗವಾನ್ ಸೇರಿ ಕತ್ತು ಹಿಸುಕಿ ಹತ್ಯೆ ಮಾಡಿರುವ ಘಟನೆ ಬೆಳಕಿಗೆ ಬಂದಿದೆ. ಈ ಸಂಬಂಧ ಗೋಲಗುಂಬಜ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಇಬ್ಬರನ್ನೂ ವಶಕ್ಕೆ ಪಡೆದು ವಿಚಾರಣೆ ಆರಂಭಿಸಲಾಗಿದೆ.
ಮಹಿಳೆಯೇ ಠಾಣೆಗೆ ಬಂದು ಕೊಲೆ ಒಪ್ಪಿಕೊಂಡರು
ಇಂದು ಬೆಳಿಗ್ಗೆ ತಯ್ಯಾಬಾ ಸ್ವತಃ ಗೋಲಗುಂಬಜ್ ಪೊಲೀಸ್ ಠಾಣೆಗೆ ಆಗಮಿಸಿ, “ನಾನು ನನ್ನ ಪ್ರಿಯಕರನನ್ನು ಕತ್ತು ಹಿಸುಕಿ ಕೊಲೆ ಮಾಡಿದ್ದೇನೆ, ನನ್ನ ಸಹೋದರ ಸಹಾಯ ಮಾಡಿದ್ದಾನೆ,” ಎಂದು ಹೇಳಿದಾಗ ಕ್ಷಣ ಮಾತ್ರಕ್ಕೆ ಪೊಲೀಸರು ಗಾಬರಿಯಾದರು. ನಂತರ ಪೊಲೀಸರು ತಕ್ಷಣ ಸ್ಥಳಕ್ಕೆ ತೆರಳಿ ಪರಿಶೀಲನೆ ನಡೆಸಿದ್ದು, ಕೊಲೆ ವಿಚಾರ ಗೊತ್ತಾಗಿದೆ.
ಮನೆಯ ಮಾಲೀಕ ಅಬ್ದುಲ್ ಜಮಾದಾರ್ ಹೇಳುವ ಪ್ರಕಾರ, ತಯ್ಯಾಬಾ ಸಹೋದರಿಗೆ 5–6 ತಿಂಗಳ ಹಿಂದೆ ಮನೆ ಬಾಡಿಗೆಗೆ ನೀಡಲಾಗಿತ್ತು. ಸಮೀರ್ ಅಲ್ಲಿ ಯಾರಿಗೂ ತಿಳಿಯದಂತೆ ಬಂದು ಹೋಗುತ್ತಿದ್ದನು, ಯಾವುದೇ ಗಲಾಟೆ ಮಾಡುತ್ತಿರಲಿಲ್ಲ ಎಂದು ತಿಳಿಸಿದರು.
ಇದನ್ನು ಓದಿ : Belagavi : ರಾಣಿ ಚನ್ನಮ್ಮ ಮೃಗಾಲಯದಲ್ಲಿ ಮತ್ತೊಂದು ಕೃಷ್ಣಮೃಗ ಸಾವು
ಕಿರುಕುಳಕ್ಕೆ ಬೇಸತ್ತು ಕೊಲೆ ಮಾಡಿದ ಆರೋಪ
ಪೊಲೀಸ್ ಮೂಲಗಳ ಪ್ರಕಾರ, ಮೃತ ಸಮೀರ್ ರೌಡಿ ಶೀಟರ್ ಆಗಿದ್ದು, ಕೊಲೆ ಮತ್ತು ಕೊಲೆ ಯತ್ನ ಪ್ರಕರಣಗಳಲ್ಲಿ ಆರೋಪಿ ಪಟ್ಟಿಯಲ್ಲಿ ಇದ್ದನು. ಕಳೆದ ನಾಲ್ಕು ವರ್ಷಗಳಿಂದ ಸಮೀರ್ ಮತ್ತು ತಯ್ಯಾಬಾ ಒಟ್ಟಿಗೆ ಇದ್ದರೂ, ಒಂದು ವರ್ಷದ ಹಿಂದೆ ಇವರ ನಡುವೆ ಮನಸ್ತಾಪ ಉಂಟಾಗಿ ಜಗಳಕ್ಕೂ ಕಾರಣವಾಗಿತ್ತು. ಕೆಲಕಾಲ ದೂರವಿದ್ದ ಇವರಿಬ್ಬರು ಮತ್ತೆ ಒಂದಾದ ಬಳಿಕ ಸಮೀರ್ ತಯ್ಯಾಬಾಗೆ ಕಿರುಕುಳ ನೀಡುತ್ತಿದ್ದನೆಂಬ ಮಾಹಿತಿ ದೊರೆತಿದೆ.
ಈ ಕಿರುಕುಳಕ್ಕೆ ಬೇಸತ್ತ ತಯ್ಯಾಬಾ ಸಹೋದರ ಅಸ್ಲಮ್ ಸಹಾಯದಿಂದ ಸಮೀರ್ ಅನ್ನು ಹತ್ಯೆ ಮಾಡುವ ನಿರ್ಧಾರ ಕೈಗೊಂಡಿದ್ದಳು. ನಿನ್ನೆ ರಾತ್ರಿ ಸುಮಾರು 8.30ಕ್ಕೆ ಸಮೀರ್ ಮನೆಗೆ ಬಂದು, ರಾತ್ರಿ 11ರಿಂದ 12ರ ನಡುವೆ ಕತ್ತು ಹಿಸುಕಿ ಕೊಲೆ ಮಾಡಲಾಗಿದೆ. ಬಳಿಕ ಶವವನ್ನು ಮನೆಯಲ್ಲೇ ಇಟ್ಟು ಬೆಳಿಗ್ಗೆವರೆಗೂ ಕಾಯಲಾಗಿದ್ದು, ಬೆಳಿಗ್ಗೆ 8 ಗಂಟೆಯ ಸುಮಾರಿಗೆ ತಯ್ಯಾಬಾ ಪೊಲೀಸರಿಗೆ ಘಟನೆ ಬಗ್ಗೆ ತಿಳಿಸಿದ್ದಾಳೆ.
ಪ್ರಾಥಮಿಕ ತನಿಖೆ ಆರಂಭ
ಇನ್ನು ಗೋಲಗುಂಬಜ್ ಪೊಲೀಸರು ಮತ್ತು ಸುಕೋ ತಂಡ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದು, ಸಮೀರ್ ತಂದೆ “ನನ್ನ ಮಗನನ್ನು ನಾಲ್ವರು ಸೇರಿ ಕೊಲೆ ಮಾಡಿದ್ದಾರೆ, ತಪ್ಪಿತಸ್ತರಿಗೆ ಕಠಿಣ ಶಿಕ್ಷೆ ಆಗಬೇಕು” ಎಂದು ಬೇಡಿಕೆ ಇಟ್ಟಿದ್ದಾರೆ.
ಸಮೀರ್ ಕೊಲೆಗೆ ಕಿರುಕುಳವೇ ನಿಜವಾದ ಕಾರಣವೋ ಅಥವಾ ಮತ್ತೇನಾದರೂ ಕಾರಣವಿದೆಯೋ ಎಂಬುದನ್ನು ಪೊಲೀಸರು ತನಿಖೆ ನಡೆಸುತ್ತಿದ್ದಾರೆ. ಮರಣೋತ್ತರ ಪರೀಕ್ಷೆಯ ನಂತರ ಶವವನ್ನು ಕುಟುಂಬಕ್ಕೆ ಹಸ್ತಾಂತರಿಸಲಿದ್ದಾರೆ.
ಇದನ್ನು ನೋಡಿ : SHIVAMOGGA TO BANGLORE HIGHWAY DANGER – ಅಪಘಾತಗಳು ಆಗ್ತಾ ಇದ್ರು ಡೋಂಟ್ ಕೇರ್




