
Karur stampede case | TVK leader arrested : ನಟ ಹಾಗೂ ರಾಜಕಾರಣಿ ವಿಜಯ್ ಅವರ ರ್ಯಾಲಿಯಲ್ಲಿ ಸಂಭವಿಸಿದ ಕಾಲ್ತುಳಿತ ದುರಂತಕ್ಕೆ ಸಂಬಂಧಿ ಸಿದಂತೆ ತಮಿಳುನಾಡಿನಲ್ಲಿ ಮಹತ್ವದ ಬೆಳವಣಿಗೆ ನಡೆದಿದೆ. ಕರೂರಿನಲ್ಲಿ ನಡೆದ ಟಿವಿಕೆ (ತಮಿಳಗ ವೆಟ್ರಿ ಕಳಗಂ) ರ್ಯಾಲಿಯಲ್ಲಿ 41 ಮಂದಿ ಪ್ರಾಣ ಕಳೆದುಕೊಂಡಿದ್ದು, ಈ ಪ್ರಕರಣದಲ್ಲಿ ಹಲವು ರಾಜಕೀಯ ನಾಯಕರುಗಳ ವಿರುದ್ಧ ಪೊಲೀಸರು ಕಾನೂನು ಕ್ರಮ ಕೈಗೊಂಡಿದ್ದಾರೆ.
ಕರೂರು ಪಶ್ಚಿಮ ಜಿಲ್ಲೆಯ ಟಿವಿಕೆ ಕಾರ್ಯದರ್ಶಿ ಮತಿಯಜಗನ್ ಅವರನ್ನು ಪೊಲೀಸರು ಬಂಧಿಸಿದ್ದು, ಈ ದುರಂತಕ್ಕೆ ಕಾರಣವಾದ ಪ್ರಮುಖ ಲೋಪಗಳಿಗೆ ಅವರನ್ನು ಹೊಣೆದಾರ ರೆಂದು ಹೇಳಲಾಗಿದೆ. ಇದಕ್ಕೂ ಮೊದಲು ಅವರ ವಿರುದ್ಧ ಕೊಲೆ ಯತ್ನ, ಅಪರಾಧಾತ್ಮಕ ನಿರ್ಲಕ್ಷ್ಯ, ಹಾಗೂ ಸಾರ್ವಜನಿಕ ಸುರಕ್ಷತಿಗೆ ಅಪಾಯ ಉಂಟುಮಾಡುವ ಹಲವು ವಿಧಿಗಳ ಅಡಿಯಲ್ಲಿ FIR ದಾಖಲಿಸಲಾಗಿತ್ತು.
ಇನ್ನು ಇದೇ ರ್ಯಾಲಿಗೆ ಸಂಬಂಧಿಸಿದಂತೆ ಟಿವಿಕೆ ಪ್ರಧಾನ ಕಾರ್ಯದರ್ಶಿ ಬಸ್ಸಿ ಆನಂದ್ ಮತ್ತು ಜಂಟಿ ಪ್ರಧಾನ ಕಾರ್ಯದರ್ಶಿ ನಿರ್ಮಲ್ ಶೇಖರ್ ವಿರುದ್ಧವೂ ಪ್ರಕರಣ ದಾಖಲಾಗಿದೆ.
ಪೊಲೀಸ್ ಅಧಿಕಾರಿಯೊಬ್ಬರು ನೀಡಿದ ದೂರಿನ ಮೇರೆಗೆ ಸಲ್ಲಿಸಲಾದ ಎಫ್ಐಆರ್ ಪ್ರಕಾರ, ಗೊಂದಲದ ಸಮಯದಲ್ಲಿ ಒಂದು ಹಂತದಲ್ಲಿ 11 ಜನರ ಸಾವಿಗೆ ಕಾರಣವಾದ ಉದ್ದೇಶಪೂರ್ವಕ ಕೃತ್ಯಗಳಿಗೆ ವಿಜಯ್ ಅವರನ್ನೇ ಹೆಸರಿಸಲಾಗಿದೆ. ರಾಜಕೀಯ ಶಕ್ತಿಯನ್ನು ಪ್ರದರ್ಶಿಸಲು ಜಿಲ್ಲೆಗೆ ಬಂದ ನಂತರ ವಿಜಯ್ ಉದ್ದೇಶಪೂರ್ವಕವಾಗಿ ನಾಲ್ಕು ಗಂಟೆ ತಡವಾಗಿ ರ್ಯಾಲಿಯಲ್ಲಿ ಪಾಲ್ಗೊಂಡಿದ್ದಾರೆ. ಇದರಿಂದಾಗಿ ಜನಸಂದಣಿಯಲ್ಲಿ ಅಶಾಂತಿ ಮತ್ತು ಅನಿಯಂತ್ರಿತ ಪರಿಸ್ಥಿತಿ ಉಂಟಾಯಿತು ಎಂದು ದೂರಿನಲ್ಲಿ ಆರೋಪಿಸಲಾಗಿದೆ
ಇದಲ್ಲದೆ, ಅಧಿಕಾರಿಗಳು ವಿಧಿಸಿದ ಷರತ್ತುಗಳನ್ನು ಉಲ್ಲಂಘಿಸಿ ವಿಜಯ್ ಅವರು ಅನುಮತಿಯಿಲ್ಲದೆ ರೋಡ್ ಶೋ ನಡೆಸಿದ ಆರೋಪವಿದೆ. ಟಿವಿಕೆಯ ಇತರ ಹಿರಿಯ ನಾಯಕರು ಪದೇ ಪದೇ ಎಚ್ಚರಿಕೆಗಳನ್ನು ನಿರ್ಲಕ್ಷಿಸಿದ್ದಾರೆ ಎಂದು ಪೊಲೀಸರು ಆರೋಪಿಸಿದ್ದಾರೆ.




