MADHUGIRI: ಮಹಿಳೆಯನ್ನ ಕೊಂದು ಒಡವೆ ಎಗರಿಸಿದ್ದ ಅಪರಾಧಿಗಳಿಗೆ ಜೀವಾವಧಿ ಶಿಕ್ಷೆ ವಿಧಿಸಿದ ನ್ಯಾಯಾಲಯ

ಮಧುಗಿರಿ: 

ಮಹಿಳೆಯನ್ನು ಕೊಲೆ ಮಾಡಿದ್ದ ಇಬ್ಬರು ಆರೋಪಿಗಳಿಗೆ ಜೀವಾವಧಿ ಶಿಕ್ಷೆ ಮತ್ತು ತಲಾ ರೂ. 60 ಸಾವಿರ ದಂಡ ವಿಧಿಸಿ ಮಧುಗಿರಿಯ 4ನೇ ಅಧಿಕ ಜಿಲ್ಲಾ ಮತ್ತು ಸತ್ರ ನ್ಯಾಯಾಲಯ ತೀರ್ಪು ನೀಡಿದೆ. ಕೊರಟಗೆರೆ ತಾಲೂಕಿನ ಮುಗ್ಗೊಂಡನಹಳ್ಳಿ ಗ್ರಾಮದ ಆರೋಪಿ ಶಿವಕುಮಾರ್ ಅಲಿಯಾಸ್ ಗೆಣಸು ಬಿನ್ ನಂಜಪ್ಪ ಹಾಗೂ ಮಧುಗಿರಿ ತಾಲೂಕಿನ ಬಿಜಾವರ ಗ್ರಾಮದ ಮಂಜುನಾಥ ಅಲಿಯಾಸ್ ಮೆಂಟಲ್ ಮಂಜ ಅಪರಾಧಿಗಳು. ಇವರು ತಮ್ಮ ಸಂಬಂಧಿಯಾಗಿದ್ದ ತುಂಬಾಡಿ ಗ್ರಾಮದ ಗಿರಿಜಮ್ಮ ಅನ್ನೋರನ್ನ ಬಂಗಾರದ ಒಡವೆಗಳ ಆಸೆಗಾಗಿ ಕೊಲೆ ಮಾಡಿದ್ದರು.

ಆರೋಪಿಗಳಾದ ಶಿವಕುಮಾರ್ ಹಾಗೂ ಮಂಜುನಾಥ ಇಬ್ಬರೂ ಸೇರಿಕೊಂಡು ಜೂನ್‌ 6 2019ರಂದು ತುಂಬಾಡಿಗೆ ತೆರಳಿ ಗಿರಿಜಮ್ಮರನ್ನು ತುಂಬಾಡಿಯಿಂದ ಟಾಟಾ ಇಂಡಿಕಾ ವಿಸ್ತಾ ಕಾರಿನಲ್ಲಿ ಗರಣಿ ಹೊಸಕೋಟೆಗೆ ಮಟನ್ ಊಟಕ್ಕೆ ಹೋಗೋಣ ಎಂದು ಕರೆದುಕೊಂಡು ಹೋಗಿದ್ದರು. ನಂತರ ಬಡವನಹಳ್ಳಿ ಠಾಣಾ ವ್ಯಾಪ್ತಿಯ ಮಾಯಗೊಂಡನಹಳ್ಳಿ ಕ್ರಾಸ್ ಬಳಿ ಕೆಂಪಚೆನ್ನೇನಹಳ್ಳಿ ಬಳಿ ಗಿರಿಜಮ್ಮಳ ಕುತ್ತಿಗೆಗೆ ಹಗ್ಗ ಬಿಗಿದು ಇಬ್ಬರೂ ಸೇರಿ ಕೊಲೆ ಮಾಡಿದ್ದರು. ಬಳಿಕ ಆಕೆಯ ಬಳಿಯಿದ್ದ ಸುಮಾರು 1,83,500 ರೂ ಬೆಲೆಯ ಒಡವೆಗಳನ್ನು ತೆಗೆದುಕೊಂಡು, ರಂಟವಾಳದಲ್ಲಿ ಡಿಸೇಲ್ ಖರೀದಿಸಿ ಆಂದ್ರ ಪುಲಮಘಟ್ಟದ ಜಮೀನಿನಲ್ಲಿ ಗಿರಿಜಮ್ಮಳ ಮೃತ ದೇಹಕ್ಕೆ ಡೀಸೆಲ್ ಹಾಕಿ ಸುಟ್ಟು ಮೃತಳ ಮೊಬೈಲ್ ಮತ್ತು ಸಿಮ್ ಸಿಗದಂತೆ ನಾಶಪಡಿಸಿದ್ದರು. ಮೃತಳ ಮೈಮೇಲಿದ್ದ ಒಡವೆಗಳನ್ನು ಕೊರಟಗೆರೆಯ ಮುತ್ತೂಟ್ ಪೈನಾನ್ಸ್‌ ನಲ್ಲಿ ನೆಕ್ಲೆಸ್ ಮತ್ತು ಉಂಗುರ ಅಡವಿಟ್ಟು ಸಾಲ ಪಡೆದು ಇನ್ನುಳಿದ ಒಡವೆಗಳನ್ನು ತೋವಿನಕೆರೆಯ ಭಾಗ್ಯಲಕ್ಷ್ಮಿ ಜೂವೆಲರ್ಸ್‌ ಗೆ ಸರ, ತಾಳಿ, ಓಲೆ ಮಾಡಿಕೊಡುವಂತೆ ಕೊಟ್ಟು ಬಂದಿದ್ದರು.

ಈ ಬಗ್ಗೆ ಬಡವನಹಳ್ಳಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು. ಅಂದಿನ ತನಿಖಾಧಿಕಾರಿ ಪೊಲೀಸ್ ಇನ್ಸ್ಪೆಕ್ಟರ್ ಪ್ರಭಾಕರ್ ದೋಷಾರೋಪಣ ಪಟ್ಟಿ ಸಲ್ಲಿಸಿದ್ದರು. ಈ ಪ್ರಕರಣದ ವಿಚಾರಣೆ ನಡೆಸಿದ ಮಧುಗಿರಿಯ 4ನೇ ಅಧಿಕ ಜಿಲ್ಲಾ ಮತ್ತು ಸತ್ರ ನ್ಯಾಯಾಲಯದ ನ್ಯಾಯಾಧೀಶರಾದ ಯಾದವ ಕರಕೇರ ಇಬ್ಬರೂ ಆರೋಪಿತರಿಗೆ ಭಾರತೀಯ ದಂಡ ಸಂಹಿತೆಯ ಕಲಂ: 302, 201, 404 ಅಡಿಯಲ್ಲಿ ಜೀವಾವಧಿ ಶಿಕ್ಷೆ ಮತ್ತು ತಲಾ ರೂ. 60,000 ದಂಡ ವಿಧಿಸಿ ತೀರ್ಪು ನೀಡಿದ್ದಾರೆ.

Author:

...
Sub Editor

ManyaSoft Admin

share
No Reviews