ಶಿರಾ :
ಶಿರಾ ಎರಡನೇ ರಾಜಧಾನಿಯಾಗಿ ಬೆಳೆಯುತ್ತಿರೋ ನಗರ ಅಂತಾನೇ ಕರೆಸಿಕೊಳುತ್ತಿದೆ. ತುಮಕೂರಿನಿಂದ ಕೇವಲ 50 ಕಿಲೋ ಮೀಟರ್ ದೂರದಲ್ಲಿರುವ ತಾಲೂಕು ಅಭಿವೃದ್ಧಿಯತ್ತ ಸಾಗ್ತಿದೆ ಅನ್ನೋ ಮಾತಿದೆ. ಐತಿಹಾಸಿಕವಾಗಿಯೂ ಹೆಚ್ಚು ಪ್ರಸಿದ್ಧಿ ಪಡೆದಿದೆ. ಆದ್ರೆ ಇಂತಹ ನಗರದಲ್ಲಿ ಸಾರ್ವಜನಿಕರನ್ನು ರಕ್ಷಣೆ ಮಾಡುವ ಆರಕ್ಷಕರು ಶಿಥಿಲಾವಸ್ತೆಯಿಂದ ಕೂಡಿರುವ ಪೊಲೀಸ್ ಠಾಣೆಯಲ್ಲಿಯೇ ಕೆಲಸ ಮಾಡಬೇಕಾದ ಪರಿಸ್ಥಿತಿ ನಿರ್ಮಾಣವಾಗಿದೆ.
19ನೇ ಶತಮಾನದ ಪೂರ್ವಾರ್ಧದಲ್ಲಿ ಶಿರಾ ಪೊಲೀಸ್ ಠಾಣೆಯನ್ನು ನಿರ್ಮಿಸಲಾಗಿತ್ತು ಎನ್ನಲಾಗಿದೆ. 50 ವರ್ಷಗಳ ಹಿಂದೆ ನಿರ್ಮಾಣವಾದ ಈ ಪೊಲೀಸ್ ಠಾಣೆ ಈಗ್ಲೋ, ಆಗ್ಲೋ ಅನ್ನೋ ಸ್ಥಿತಿಯಲ್ಲಿದೆ. ಶಿರಾ ನಗರ ಪೊಲೀಸ್ ಠಾಣೆಯು ನೂತನ ಕಟ್ಟಡವಿಲ್ಲದೆ ಸೊರಗುತ್ತಿದೆ. ಮಳೆಯಾದಾಗಲೆಲ್ಲ ಜಲಾವೃತಗೊಳ್ಳುವ ಹಳೆಯ ಕಟ್ಟಡದಲ್ಲಿಯೇ ಪೊಲೀಸರು ಕಾರ್ಯನಿರ್ವಹಿಸಬೇಕಿದೆ. ಇನ್ನು ಇಲ್ಲಿ ಬಂದು ಕುಳಿತುಕೊಂಡ್ರೆ ಯಾವಾಗ ಹೆಂಚುಗಳು ನಮ್ಮ ತಲೆಯ ಮೇಲೆ ಬೀಳುತ್ತವೆ ಅನ್ನೋ ಭಯ. ಆ ಭಯ ಕೇವಲ ಅಲ್ಲಿ ಕಾರ್ಯನಿರ್ವಹಿಸುವ ಸಿಬ್ಬಂದಿಗಳಿಗೆ ಮಾತ್ರವಲ್ಲ ಅಲ್ಲಿಗೆ ಹೋಗುವ ಸಾರ್ವಜನಿಕರದ್ದು ಕೂಡ.
ಇನ್ನು ಈ ಪೊಲೀಸ್ ಠಾಣೆ ಅಂದು ಹೇಗಿತ್ತೊ ಈಗಲೂ ಅದೇ ಸ್ಥಿತಿಯಲ್ಲಿದೆ. ಯಾವುದೇ ಮೂಲ ಸೌಲಭ್ಯಗಳಿಲ್ಲದೆ ಇಂದಿಗೂ ಸೊರಗುತ್ತಿದೆ. ಕೆಲ ವರ್ಷಗಳ ಹಿಂದೆ ಕಟ್ಟಡ ಅಲ್ಪಸ್ವಲ್ಪ ಸುಣ್ಣ-ಬಣ್ಣ ಕಂಡಿದೆಯಾದ್ರು ಸಮಗ್ರವಾಗಿ ನವೀಕರಣಗೊಂಡಿಲ್ಲ. ಸಮಾಜವನ್ನು ಕಾಯುವ ಪೊಲೀಸರ ಠಾಣೆಯಲ್ಲಿನ ಸಾಮಗ್ರಿಗಳು, ಕಂಪ್ಯೂಟರ್ ಮೇಲೆ ಯಾವ ಕ್ಷಣದಲ್ಲಾದ್ರೂ ಗೋಡೆ ಕುಸಿದು ಬೀಳಬಹುದು. ಇನ್ನು ಮಳೆಗಾಲ ಬಂತೆಂದರೆ ಈ ಠಾಣೆಯ ಪರಿಸ್ಥಿತಿ ಹೇಳತೀರದು.
ಪಿಎಸ್ಐ ಕುಳಿತುಕೊಳ್ಳುವ ಕೊಠಡಿ, ಕಂಪ್ಯೂಟರ್ ಕೊಠಡಿ ಹಾಗೂ ಹಾಲ್ ಸಂಪೂರ್ಣ ಶಿಥಿಲಾವಸ್ಥೆಗೆ ತಲುಪಿದೆ. ನಗರದಲ್ಲಿ ಜನಸಂಖ್ಯೆಗೆ ತಕ್ಕಂತೆ ಹಳೆ ಆಸ್ಪತ್ರೆಯಿಂದ ನೂತನ ಆಸ್ಪತ್ರೆ, ನೂತನ ಬೆಸ್ಕಾಂ ಇಲಾಖೆ ಕಟ್ಟಡ, ನೂತನ ಪ್ರವಾಸಿ ಮಂದಿರ, ತಾಲ್ಲೂಕು ಕಚೇರಿ ಕಟ್ಟಡ ನೂತನವಾಗಿದೆ ಮತ್ತೆ ಕೆಲವು ಜೀರ್ಣೋದ್ಧಾರಗೊಂಡಿವೆ. ನೂತನ ಬಸ್ ಸ್ಟ್ಯಾಂಡ್ ಕಾಮಗಾರಿ ನಡೆಯುತ್ತಿದೆ. ಇದರ ಜೊತೆಗೆ ಡಿವೈಎಸ್ಪಿ , ಗ್ರಾಮಾಂತರ ಪೊಲೀಸ್ ಠಾಣೆಯ ಕೂಡ ಅಭಿವೃದ್ಧಿ ಕಂಡಿದೆ. ಆದರೆ ನಗರ ಪೊಲೀಸ್ ಠಾಣೆ ಮಾತ್ರ ಅಭಿವೃದ್ಧಿ ಕಾಣದೆ ಶಿಥಿಲಗೊಂಡಿದೆ. ಮಳೆಗಾಲದಲ್ಲಿ ಪೊಲೀಸರು ನೆಮ್ಮದಿಯಿಂದ ಕೆಲಸ ಮಾಡಲು ಸಾಧ್ಯವಾಗಲ್ಲ. ಮೆಳೆಗಾಲದಲ್ಲಿ ಪೊಲೀಸ್ ಠಾಣೆಯಲ್ಲಿನ ದಾಖಲೆಪತ್ರ, ಶಸ್ತ್ರಾಸ್ತ್ರ, ಕಂಪ್ಯೂಟರ್ ಮತ್ತಿತರ ಸಾಮಗ್ರಿಗಳನ್ನು ಸುರಕ್ಷಿತವಾಗಿ ಇಟ್ಟುಕೊಳ್ಳುವುದು ಹೇಗೆ ಎನ್ನುವುದೇ ಪೊಲೀಸರಿಗೆ ದೊಡ್ಡ ತಲೆ ನೋವಾಗಿದೆ. ಕೂಡಲೇ ಸಂಬಂಧಪಟ್ಟ ಅಧಿಕಾರಿಗಳು ಇತ್ತ ಗಮನಹರಿಸಿ ಪೊಲೀಸರು ಕಾರ್ಯನಿರ್ವಹಿಸಲು ಅನುವುಮಾಡಿಕೊಡಬೇಕಿದೆ.