ಶಿರಾ:
ದಿನಕಳೆದಂತೆ ಶಿರಾ ನಗರ ಸಮಸ್ಯೆಗಳ ಆಗರವಾಗಿ ಬದಲಾಗ್ತಿದೆ. ಜೊತೆಗೆ ಶಿರಾ ನಗರದಲ್ಲಿ ಸ್ವಚ್ಚತೆಯಂಥೂ ಮರಿಚೀಕೆಯಾಗಿಬಿಟ್ಟಿದೆ. ಶಿರಾ ನಗರಸಭೆ ವ್ಯಾಪ್ತಿಗೆ ಒಳಪಡುವ ಹಳೇ ರಾಷ್ರೀಯ ಹೆದ್ದಾರಿಯಲ್ಲಿ ಚರಂಡಿ ಕಟ್ಟಿಕೊಂಡಿದ್ದು, ಕೊಳಚೆ ನೀರು ರಸ್ತೆ ಮೇಲೆ ಹರಿಯುತ್ತಿದ್ದು, ಸಾರ್ವಜನಿಕರು ತೊಂದರೆ ಅನುಭವಿಸುವಂತಾಗಿದೆ.
ಈ ರಸ್ತೆಯಲ್ಲಿ ವಾಹನ ಸಂಚಾರ ಹೆಚ್ಚಾಗಿ ಇರೋದ್ರಿಂದ, ಅತಿಯಾದ ಕೊಳಚೆ ನೀರು ರಸ್ತೆ ಮೇಲೆ ಹರಿದು ಬರ್ತಿದ್ದು, ಈ ರಸ್ತೆಯಲ್ಲಿ ಹಾದುಹೋಗುವ ಶಾಲಾಮಕ್ಕಳು, ಪಾದಚಾರಿಗಳ ಮೇಲೆ ಚರಂಡಿ ನೀರು ಪ್ರೋಕ್ಷಣೆಯಾಗುತ್ತಿದ್ರೂ, ನಗರಸಭೆ ಅಧಿಕಾರಿಗಳು ಮಾತ್ರ ಕಣ್ಮುಚ್ಚಿ ಕುಳಿತಿದ್ದಾರೆ.
ಇನ್ನು ಶಿರಾ ನಗರದಲ್ಲಿ ಚರಂಡಿಯಲ್ಲಿ ನಿಂತ ಕೊಳಚೆ ನೀರು ರಸ್ತೆ ಮೇಲೆ ಹರಿಯುತ್ತಿರೋದ್ರಿಂದ ರಸ್ತೆಯ ಅಕ್ಕಪಕ್ಕದಲ್ಲಿ ಸೊಳ್ಳೆಗಳ ಕಾಟ ಹೆಚ್ಚಾಗಿದ್ದು ಇದರಿಂದ ಸಾಂಕ್ರಾಮಿಕ ರೋಗಗಳು ಹರಡುವ ಭೀತಿ ಎದುರಾಗಿದೆ. ಆದ್ದರಿಂದ ನಗರಸಭೆ ಅಧಿಕಾರಿಗಳು ಇದ್ರ ಬಗ್ಗೆ ತಕ್ಷಣ ಗಮನ ಹರಿಸಿ ಸೂಕ್ತ ಚರಂಡಿ ವ್ಯವಸ್ಥೆ ಕಲ್ಪಿಸಿ ಮುಂದೆ ಆಗುವಂತಹ ಅಪಾಯವನ್ನು ತಪ್ಪಿಸಬೇಕು ಎಂದು ಸ್ಥಳೀಯರು ಒತ್ತಾಯಿಸಿದ್ದಾರೆ.
ಈಗಾಗಲೇ ಶಿರಾ ವಿಧಾನಸಭಾ ಕ್ಷೇತ್ರದ ಶಾಸಕರು ಈ ಸಮಸ್ಯೆಯನ್ನ ಬಗೆಹರಿಸಿ ಸಮರ್ಪಕ ವ್ಯವಸ್ಥೆ ಕಲ್ಪಿಸಲು ಸೂಚನೆಯನ್ನು ನೀಡಿದ್ದು. ಇನ್ನಾದ್ರೂ ಅಧಿಕಾರಿಗಳು ಎಚ್ಚೆತ್ತುಕೊಂಡು ಸಮಸ್ಯೆಗೆ ಮುಕ್ತಿ ಕೊಡಿಸ್ತಾರಾ ಎಂದು ಕಾದು ನೋಡಬೇಕಿದೆ.