ಶಿರಾ :
ಶಿರಾ ಐತಿಹಾಸಿಕವಾಗಿ ಪ್ರಸಿದ್ಧಿ ಪಡೆದಿರುವ ತಾಲೂಕು ಆದರೆ ಇಂತಹ ಪ್ರದೇಶದ ಬಹುತೇಕ ಗ್ರಾಮಗಳಲ್ಲಿ ಅಭಿವೃದ್ಧಿ ಅನ್ನೋ ಕಾಣ್ತಾನೇ ಇಲ್ಲ. ಒಂದು ಕಡೆ ಗ್ರಾಮದಿಂದ ಗ್ರಾಮಕ್ಕೆ ದಾರಿ ಕಲ್ಪಿಸುವ ರಸ್ತೆಗಳು ಹದಗೆಟ್ಟಿದ್ದು, ಗ್ರಾಮಸ್ಥರು ಓಡಾಡಲು ಪರದಾಡುವಂತ ಪರಿಸ್ಥಿತಿ ಎದುರಾಗಿದೆ. ಅಧಿಕಾರಿಗಳ ನಿರ್ಲಕ್ಷ್ಯದಿಂದಾಗಿ ಶಿರಾ ತಾಲೂಕಿನ ಕಳ್ಳಂಬೆಳ್ಳ ಹೊಂಬಳಿಯ ಯಲದಬಾಗಿ ಗ್ರಾಮ ಪಂಚಾಯ್ತಿ ವ್ಯಾಪಿಯಲ್ಲಿರುವ ಮುದಿಮಡು ಗ್ರಾಮದಲ್ಲಿ ಸೂಕ್ತವಾದ ರಸ್ತೆಯಿಲ್ಲದೇ ಹದಗೆಟ್ಟ ರಸ್ತೆಯಲ್ಲಿ ಓಡಾಡವಂತಹ ಪರಿಸ್ಥಿತಿ ನಿರ್ಮಾಣವಾಗಿದೆ.
ಮುದಿಮಡು ಗ್ರಾಮದಲ್ಲಿ ಸುಮಾರು 15 ವರ್ಷಗಳಿಂದಲೂ ರಸ್ತೆ ನಿರ್ಮಾಣವಿಲ್ಲದೇ ಮಣ್ಣಿನ ರಸ್ತೆಯಲ್ಲಿಯೇ ಜನರು ಪ್ರತಿನಿತ್ಯ ಸಂಚರಿಸಬೇಕಾದ ಪರಿಸ್ಥಿತಿ ಇದೆ. ಈ ಗ್ರಾಮದಲ್ಲಿ ರಸ್ತೆಯಿಲ್ಲದೇ ಕಾಲುದಾರಿ ರಸ್ತೆಯಲ್ಲೆ ಓಡಾಡಬೇಕಾದ ಪರಿಸ್ಥಿತಿ ಇದೆ. ಇನ್ನು ಈ ದಾರಿಯಲ್ಲಿ ಕೊಳಚೆ ನೀರು ನಿಂತಿದ್ದು ಗಬ್ಬೇದ್ದು ನಾರುತ್ತಿದೆ, ಅಲ್ದೇ ಈ ದಾರಿ ಪಕ್ಕದಲ್ಲಿಯೇ ಸರ್ಕಾರಿ ಶಾಲೆ ಕೂಡ ಇದೆ. ಗ್ರಾಮಸ್ಥರು ಸೇರಿದಂತೆ ವೃದ್ದರು, ಮಕ್ಕಳು ನಿತ್ಯ ವಿಧಿಯಿಲ್ಲದೇ ಈ ರಸ್ತೆಯಲ್ಲೆ ಸಂಚರಿಸಬೇಕು, ಇನ್ನು ಶಾಲಾ ಮಕ್ಕಳು ಈ ವಾಸನೆಯಲ್ಲೇ ಪಾಠ ಕೇಳುವ ಪರಿಸ್ಥಿತಿ ಇದೆ, ಇನ್ನು ಈ ವಾಸನೆಗೆ ಇಡೀ ಏರಿಯಾನೇ ಗಬ್ಬೇದ್ದು ನಾರುತ್ತಿದ್ದು, ಜನರು ಸಾಂಕ್ರಾಮಿಕ ರೋಗಗಳಿಗೆ ತುತ್ತಾಗುವ ಭೀತಿಯಲ್ಲಿದ್ದಾರೆ. ಇನ್ನು ಈ ಗ್ರಾಮಕ್ಕೆ ನಕಾಶೆ ಪ್ರಕಾರ ರಸ್ತೆ ಇದ್ದರೂ ಅಧಿಕಾರಿಗಳು ಮಾತ್ರ ರಸ್ತೆ ನಿರ್ಮಿಸೋಕೆ ಮನಸ್ಸೆ ಮಾಡ್ತಿಲ್ವಂತೆ. ಈ ಕಾರಣಕ್ಕೆ ಮುದಿಮಡು ಗ್ರಾಮದ ಜನರು ನಮಗೆ ರಸ್ತೆ ಮಾಡಿಕೊಡಿ ಅಂತ ಪರಿಪರಿಯಾಗಿ ಬೇಡಿಕೊಳ್ತಾ ಇದಾರೆ.
ರಸ್ತೆಯ ಒತ್ತುವರಿ ವಿಚಾರವಾಗಿ ಗ್ರಾಮಸ್ಥರೊಬ್ಬರು ಮಾತನಾಡಿ ನೋಡಿ ಸ್ವಾಮಿ ಇವರು ರಸ್ತೆ ಅನ್ನುತ್ತಿರುವ ಜಾಗ ನಮ್ಮದು. ಆ ಜಾಗ ಇನ್ನು ನಮಗೆ ಭಾಗ ಆಗಿಲ್ಲ. ಜಾಗದ ವಿಚಾರವಾಗಿ ಕೋರ್ಟ್‌ನಲ್ಲಿ ಪೆಂಡಿಂಗ್ ಇದೆ. ಈಗಿರುವಾಗ ಯಾರೋ ಹೇಳಿದ ಮಾತನ್ನು ಅಧಿಕಾರಿಗಳು ಕೇಳಿ ರಸ್ತೆ ಮಾಡೋಕೆ ಬರೋದು ಸರಿಯಿಲ್ಲ. ಗ್ರಾಮಕ್ಕೆ ಸೇರಿದ ಜಾಗದಲ್ಲಿ ರಸ್ತೆ ಮಾಡಿ ಅದಕ್ಕೆ ನಮ್ಮ ಅಭ್ಯಂತರ ಏನು ಇಲ್ಲ ಅಂತಾರೆ.
ಇನ್ನು ಈ ಗ್ರಾಮದಲ್ಲಿ ರಸ್ತೆ ನಿರ್ಮಾಣ ಮಾಡೋಕೆ ಸರ್ಕಾರಿ ಅಧಿಕಾರಿಗಳನ್ನು ಗ್ರಾಮಸ್ಥರು ಕೇಳ್ತಿದ್ದಾರೆ. ಆದರೆ ಅಧಿಕಾರಿಗಳು ನಿಮಗೆ ರಸ್ತೆ ಮಾಡಬೇಕಂದರೆ ಒತ್ತುವರಿ ಯಾಗಿರುವ ಜಾಗ ಮೊದಲು ತೆರವು ಆಗಬೇಕು ಅಂತಿದ್ದಾರೆ. ಮತ್ತೊಂದು ಕಡೆ ಒತ್ತುವರಿ ಮಾಡಿಕೊಂಡಿರೋರು ಈ ಜಾಗ ನಮಗೆ ಸೇರಿದ್ದು. ಜಾಗದ ಬಗ್ಗೆ ಕೋರ್ಟ್ ನಲ್ಲಿ ಕೇಸ್ ನಡಿತಾ ಇದೆ ಎಂದು ಹೇಳ್ತಿದ್ದಾರೆ. ಒಟ್ಟಿನಲ್ಲಿ ಈ ಬಗ್ಗೆ ಸಂಬಂಧಪಟ್ಟ ಅಧಿಕಾರಿಗಳು ಗಮನ ಹರಿಸಿ ಗ್ರಾಮದಲ್ಲಿ ರಸ್ತೆ ನಿರ್ಮಾಣಕ್ಕೆ ಮುಂದಾಗ್ತಾರಾ ಕಾದು ನೋಡಬೇಕಿದೆ.