ವಿಜಯಪುರ :
ಪತ್ನಿಗೆ ಬುದ್ದಿಮಾತು ಹೇಳಿದ್ದೇ ಪತಿಯ ಪ್ರಾಣಕ್ಕೆ ಸಂಚಕಾರ ತಂದಿದೆ. ಮೊಬೈಲ್ನಲ್ಲಿ ಸದಾಕಾಲ ಬೇರೆಯವರೊಂದಿಗೆ ಚಾಟ್ ಮಾಡುತ್ತಾ ಕಾಲ ಕಳೆಯುತ್ತಿದ್ದ ಪತ್ನಿಗೆ ಪತಿ ಪ್ರಶ್ನೆ ಮಾಡಿ ಚಾಟ್ ಮಾಡಬೇಡ ಎಂದು ಬುದ್ದಿ ಮಾತು ಹೇಳಿದ್ದಕ್ಕೆ ಪತಿ ಮೇಲೆ ಸಿಟ್ಟಾಗಿ ತೇಜಸ್ವಿನಿ ಎಂಬಾಕೆ ಪತಿ ಅಜಿತ್ ಎಂಬುವನಿಗೆ ಚಾಕುವಿನಿಂದ ಇರಿದು ಕೊಲೆ ಮಾಡಲು ಯತ್ನಿಸಿದ್ದಾಳೆ.
ಬೆಂಗಳೂರಿನಲ್ಲಿ ನಿವೃತ್ತ ಡಿಜಿಪಿ ಓಂಪ್ರಕಾಶ್ ಅವರನ್ನು ಪತ್ನಿಯೇ ಚಾಕುವಿನಿಂದ ಇರಿದು ಕೊಲೆ ಮಾಡಿರುವ ಸುದ್ದಿ ತಣ್ಣಗಾಗಿಲ್ಲ. ಈ ಮಧ್ಯೆ ಅದೇ ಮಾದರಿಯಲ್ಲಿ ವಿಜಯಪುರ ನಗರದಲ್ಲಿ ಪತ್ನಿಯೇ ಪತಿ ಕತ್ತಿಗೆ ಚಾಕು ಹಾಕಿ ಕೊಲೆಗೆ ಯತ್ನಿಸಿರುವಂತಹ ಘಟನೆ ನಡೆದಿದೆ. ಇಂದು ಮುಂಜಾನೆ ಆಲಕುಂಟೆ ನಗರದಲ್ಲಿರುವ ಮನೆಯಲ್ಲಿ ಪತ್ನಿ ತೇಜು ರಾಠೋಡ್ ಎಂಬಾಕೆ ತನ್ನ ಪತಿ ಗಾಢ ನಿದ್ರೆಯಲ್ಲಿದ್ದಾಗ ಚಾಕುವಿನಿಂದ ಬಾಲವಾಗಿ ಇರಿದು ಕೊಲೆಗೆ ಯತ್ನಿಸಿದ್ದಾಳೆ. ಕೂಡಲೇ ಗಾಯಾಳು ಅಜಿತನ್ನು ನಗರದ ಬಿಎಲ್ಡಿಇ ಆಸ್ಪತ್ರೆಗೆ ದಾಖಲು ಮಾಡಿ ಚಿಕಿತ್ಸೆ ನೀಡಲಾಗ್ತಿದೆ. ಅಜಿತ್ ಆರೋಗ್ಯ ಸ್ಥಿರವಾಗಿದೆ ಎಂದು ವೈದ್ಯರು ಮಾಹಿತಿ ನೀಡಿದ್ದಾರೆ. ಸದ್ಯ ಸ್ಥಳಕ್ಕೆ ಡಿವೈಎಸ್ಪಿ ಬಸವರಾಜ ಯಲಿಗಾರ ಹಾಗೂ ಇತರೆ ಅಧಿಕಾರಿಗಳು ಭೇಟಿ ನೀಡಿ ಪರಿಶೀಲನೆ ಮಾಡಿದ್ದಾರೆ.
ಆದರ್ಶನಗರ ಪೊಲೀಸರು ತೇಜುಳನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಿದ್ದಾರೆ. ಪೊಲೀಸರ ತನಿಖೆಯಲ್ಲಿ ಹೆಚ್ಚಿನ ಮಾಹಿತಿ ತಿಳಿಯಬೇಕಿದೆ. ಆದರ್ಶ ನಗರ ಪೊಲೀಸ್ ಠಾಣಾ ವ್ಯಾಪ್ತಿ ಪ್ರಕರಣ ದಾಖಲಾಗಿದ್ದು, ಪೊಲೀಸ್ ವಿಚಾರಣೆ ವೇಳೆ ನಂತರ ಆರೋಪಿ ಸತ್ಯವನ್ನು ಒಪ್ಪಿಕೊಂಡಿದ್ದು, ಬುದ್ದಿವಾದ ಹೇಳಿದ್ದಕ್ಕೆ ಪತಿ ಕೊಲೆಗೆ ಯತ್ನಿಸಿದ್ದಾಳೆ ಎನ್ನುವುದು ತಿಳಿದು ಬಂದಿದೆ.