ತುಮಕೂರು :
ತುಮಕೂರು ಹೇಳಿಕೇಳಿ ರಾಜ್ಯದ ಎರಡನೇ ಅತೀ ದೊಡ್ಡ ಜಿಲ್ಲೆ, ತುಮಕೂರು ಜಿಲ್ಲೆಯಲ್ಲಿ ಬರೋಬ್ಬರಿ 10 ತಾಲೂಕುಗಳಿದ್ದು, 11 ವಿಧಾನಸಭಾ ಕ್ಷೇತ್ರಗಳಿವೆ. ಹೀಗಾಗಿ ತುಮಕೂರು ಜಿಲ್ಲಾಸ್ಪತ್ರೆಗೆ ಬರುವ ರೋಗಿಗಳ ಸಂಖ್ಯೆ ದಿನೇದಿನೇ ಹೆಚ್ಚಾಗ್ತಾನೆ ಇದೆ. ಜೊತೆಗೆ ಜಿಲ್ಲಾಸ್ಪತ್ರೆಯಲ್ಲಿರುವ ಶವಗಾರ ಕೂಡ ಬ್ಯುಸಿಯಾಗ್ತಿದ್ದು, ಜಿಲ್ಲೆಯ ಎಲ್ಲಾ ತಾಲೂಕುಗಳಿಂದಲೂ ಮೃತದೇಹಗಳನ್ನು ಇಲ್ಲಿಗೆ ತರಲಾಗ್ತಿದೆ. ಆದರೆ ಸದ್ಯ ತುಮಕೂರಿನ ಶವಗಾರಕ್ಕೆ ದಾರಿ ಯಾವುದಯ್ಯ? ಎನ್ನುವ ಪ್ರಶ್ನೆ ಮೂಡ್ತಿದೆ.
ತುಮಕೂರು ಜಿಲ್ಲಾಸ್ಪತ್ರೆ ಆವರಣದಲ್ಲಿರುವ ಶವಗಾರಕ್ಕೆ ದಾರಿಯಿಲ್ಲದೇ ಸಾರ್ವಜನಿಕರು ಪರದಾಡುವ ಸ್ಥಿತಿ ನಿರ್ಮಾಣವಾಗಿದೆ. ಮೊದಲೇ ತಮ್ಮವರನ್ನು ಕಳೆದುಕೊಂಡ ದುಃಖದಲ್ಲಿರೋ ಕುಟುಂಬಸ್ಥರು ಈ ಶವಗಾರಕ್ಕೆ ಬರಲಾಗದೇ ತೊಂದರೆ ಅನುಭವಿಸುವಂತಾಗಿದೆ. ಮೃತದೇಹಗಳನ್ನು ಸಾಗಾಟ ಮಾಡಲು ಆಗದೇ ಪರದಾಡುವ ಸ್ಥಿತಿ ನಿರ್ಮಾಣವಾಗಿದೆ.
ಜಿಲ್ಲಾಸ್ಪತ್ರೆ ಆವರಣದಲ್ಲಿ ಸದ್ಯ ವಿವಿಧ ಅಭಿವೃದ್ದಿ ಕಾಮಗಾರಿಗಳು ನಡೆಯುತ್ತಿದ್ದು, ಶವಗಾರಕ್ಕೆ ರಸ್ತೆಯಿಲ್ಲದೇ ಪರದಾಡುವಂತಾಗಿದೆ. ಇನ್ನು ಆರೋಗ್ಯ ಇಲಾಖೆ ಈ ಶವಗಾರಕ್ಕೆ ಹೊಸ ರಸ್ತೆಯನ್ನು ಮಾಡಿಸ್ತಾ ಇದೆ. ಆದರೆ ಈ ಕಾಮಗಾರಿ ವಿಳಂಬದಿಂದಾಗಿ ಇಲ್ಲಿಗೆ ಬರುವ ಜನರು ಸಮಸ್ಯೆ ಅನುಭವಿಸುವಂತಾಗಿದೆ.
ಇನ್ನು ಶವಗಾರದಲ್ಲೂ ಮೂಲಭೂತ ಸೌಕರ್ಯವಿಲ್ಲದೆ ಸಿಬ್ಬಂದಿ ಪರದಾಟ ನಡೆಸುವಂತಾಗಿದೆ. ಮೃತದೇಹ ಶೇಖರಣೆ ಮಾಡಲು ಸರಿಯಾದ ಫ್ರೀಜರ್ ಗಳ ವ್ಯವಸ್ಥೆ ಕೂಡ ಇಲ್ಲಿ ಇಲ್ಲ. ಇಲ್ಲಿರುವ 3 ಫ್ರೀಜರ್‌ಗಳು ಕೆಟ್ಟು ಹೋಗಿದ್ದು, ಜಿಲ್ಲಾಸ್ಪತ್ರೆ ಆಡಳಿತ ಇವುಗಳನ್ನು ಇನ್ನೂ ಸರಿಪಡಿಸುವ ಕೆಲಸ ಮಾಡಿಲ್ಲ. ಹೀಗಾಗಿ ಒಂದೇ ಪ್ರೀಜರ್ ನಲ್ಲಿ ಮೃತದೇಹಗಳನ್ನು ಶೇಖರಿಸಿ ನಿರ್ವಹಣೆ ಮಾಡಲಾಗ್ತಿದೆ. ಇನ್ನು ಇಲ್ಲಿ ನಡೆಯುತ್ತಿರುವ ಕಾಮಗಾರಿಗಳಿಂದ ಶವಗಾರಕ್ಕೆ ವಾಟರ್, ವಿದ್ಯುತ್ ಸಂಪರ್ಕ ಕೂಡ ಕಡಿತಗೊಂಡಿದೆಯಂತೆ. ತಾತ್ಕಾಲಿಕವಾಗಿ ಲ್ಯಾಂಡ್ರಿ ರೂಂ ನಿಂದ ವೈರ್ ಎಳೆದು ವಿದ್ಯುತ್ ಸಂಪರ್ಕವನ್ನು ತೆಗೆದುಕೊಂಡಿದ್ದಾರಂತೆ.
ಈ ಶವಗಾರದ ನೀರನ್ನು ಹೊರಗೆ ತೆರೆದ ಸ್ಥಳಕ್ಕೆ ಹರಿಬಿಡಲಾಗ್ತಿದ್ದು, ಈ ರಕ್ತಮಿಶ್ರಿತ ನೀರಿನಿಂದ ಸಾಂಕ್ರಾಮಿಕ ರೋಗ ಹರಡುವ ಭೀತಿ ಕೂಡ ಎದುರಾಗಿದೆ. ಇಷ್ಟೆಲ್ಲಾ ಸಮಸ್ಯೆಗಳಿಂದ ಕೂಡಿರುವ ಈ ಶವಗಾರಕ್ಕೆ ಮುಕ್ತಿ ಯಾವಾಗ ಅನ್ನೋ ಪ್ರಶ್ನೆ ಸಾರ್ವಜನಿಕರಲ್ಲಿ ಮೂಡ್ತಿದೆ.