ತುಮಕೂರು :
ನೀರಿನ ವಿಚಾರಕ್ಕೆ ಹೆಂಗಸರ ನಡುವೆ ಜಗಳ, ಗಲಾಟೆ ನಡೆಯೋದು ಕಾಮನ್ ಹಳ್ಳಿಗಳಲ್ಲಂತೂ ಆಗಾಗ ಇಂತಹ ದೃಶ್ಯಗಳು ಕಾಣಿಸ್ತಾನೆ ಇರ್ತವೆ. ಆದರೆ ತುಮಕೂರು ನಗರದಲ್ಲಿ ಕುಡಿಯುವ ನೀರು ಹಿಡಿಯುವ ವಿಚಾರಕ್ಕೆ ಮರಳೂರು ದಿಣ್ಣೆಯ ೬ನೇ ಕ್ರಾಸ್ ನಲ್ಲಿ ಗಲಾಟೆ ನಡೆದಿದೆ. ಕುಡಿಯುವ ನೀರಿನ ವಿಚಾರಕ್ಕೆ ಜಗಳ ನಡೆದಿದ್ದು, ಮರಳೂರು ದಿಣ್ಣೆಯ ನಿವಾಸಿ ರಕೀಬ್ ಉನ್ನಿಸಾ ಹಾಗೂ ಮಕ್ಕಳು ಸಹಿದಾ ಭಾನು, ಇಕ್ಬಾಲ್ ಅಹ್ಮದ್ ಹಾಗೂ ಅಬ್ದುಲ್ ಖಾದರ್ ಮೇಲೆ ಮಾರಕಾಸ್ತ್ರಗಳಿಂದ ಹಲ್ಲೆ ನಡೆಸಿದ್ದಾರಂತೆ. ವೀರಸಾಗರದ ನಿವಾಸಿಗಳಾದ ಇಕ್ಬಾಲ್ ಅಹ್ಮದ್, ತನ್ನ ತಮ್ಮನ ಮಗ ಅಬ್ದುಲ್ ಖಾದರ್ ಜೊತೆ ತಂಗಿ ಸಹಿದಾ ಭಾನು ಮನೆಗೆ ಬಂದಿದ್ದರು. ಈ ವೇಳೆ ಇವರಿಬ್ಬರಿಗೂ ತಿಂಡಿಯನ್ನು ನೀಡಿ ಸಹಿದಾ ಬಾನು ಕುಡಿಯುವ ನೀರು ಹಿಡಿದುಕೊಳ್ಳಲು ಹೊರಗೆ ಹೋಗಿದ್ದರು. ಆಗ ಎದುರು ಮನೆಯ ರಕೀಬ್ ಉನ್ನಿಸಾ ನೀರು ಹಿಡಿಯುವ ವಿಚಾರಕ್ಕೆ ಸಹಿದಾ ಭಾನು ಜೊತೆ ಗಲಾಟೆ ತೆಗೆದಿದ್ದಾಳಂತೆ. ಈ ವೇಳೆ ಮಾತಿಗೆ ಮಾತು ಬೆಳೆದಿದ್ದು, ರಕೀಬ್ ಉನ್ನಿಸಾ ಜೊತೆ ಆಕೆಯ ಮಕ್ಕಳಾದ ಸಲ್ಮಾನ್, ಫರ್ಹಾನ್ ಮತ್ತು ಗಂಡ ಫಯಾಜ್ ಎಲ್ಲರೂ ಸೇರಿ ಸಹಿದಾ ಭಾನು ಜೊತೆ ಜಗಳ ಮಾಡಿದ್ದಾರೆ.
ಗಲಾಟೆ ಜೋರಾಗ್ತಿದ್ದಂತೆ ಒಳಗೆ ತಿಂಡಿ ತಿನ್ನುತ್ತಿದ್ದ ಇಕ್ಬಾಲ್ ಅಹ್ಮದ್ ಮತ್ತು ಅಬ್ದುಲ್ ಖಾದರ್ ಇಬ್ಬರೂ ಹೊರಗಡೆ ಬಂದು ಜಗಳ ಬಿಡಿಸೋದಕ್ಕೆ ಮುಂದಾಗಿದ್ದಾರಂತೆ. ಈ ವೇಳೆ ರಕೀಬ್ ಉನ್ನಿಸಾ, ಸಲ್ಮಾನ್, ಫರ್ಯಾನ್ ಮತ್ತು ಫಯಾಜ್ ಎಲ್ಲರೂ ಸೇರಿ ಏಕಾಏಕಿ ಇಕ್ಬಾಲ್ ಅಹ್ಮದ್ ಮತ್ತು ಅಬ್ದುಲ್ ಖಾದರ್ ಮೇಲೆ ರಾಡ್ ನಿಂದ ಹಲ್ಲೆ ನಡೆಸಿದ್ದಾರೆ. ಇಕ್ಬಾಲ್ ಅಹ್ಮದ್ ಗೆ ತಲೆ ಬುರುಡೆ ಓಪನ್ ಆಗುವಂತೆ ಹಲ್ಲೆ ನಡೆಸಿದರೆ, ಅಬ್ದುಲ್ ಖಾದರ್ ಗೆ ಕಿವಿಗೆ ಗಾಯಗಳಾಗಿದ್ದು, ಹಲ್ಲು ಮುರಿಯುವಂತೆ ಹೊಡೆದಿದ್ದಾರಂತೆ.
ಇನ್ನು ಯಾವಾಗಲೂ ಕೂಡ ಈ ರಕೀಬ್ ಉನ್ನಿಸಾ ಇದೇ ರೀತಿ ನೀರಿನ ವಿಚಾರಕ್ಕೆ ಜಗಳ ಮಾಡ್ತಿದ್ದು, ನಾವು ಸ್ವಂತ ಮನೆಯಲ್ಲಿದ್ದೀವಿ, ನಾವು ಒಂದು ಗಂಟೆ ನೀರು ಹಿಡಿದುಕೊಳ್ತೀವಿ. ನೀವು ಬಾಡಿಗೆ ಮನೆಯಲ್ಲಿದ್ದೀರಿ, ಕೇವಲ ಅರ್ಧ ಗಂಟೆ ನೀರು ಹಿಡಿಯಬೇಕು ಅಂತಾ ಗಲಾಟೆ ಮಾಡಿದ್ದಾರೆ. ಜೊತೆಗೆ ರಕೀಬ್ ಉನ್ನಿಸಾ ಮಗ ಸಲ್ಮಾನ್ ಕೂಡ ಸಹಿದಾ ಬಾನು ಮತ್ತು ಅವರ ಮಗಳಿಗೆ ಕೆಟ್ಟಕೆಟ್ಟ ಭಾಷೆಯಲ್ಲಿ ಬೈದಿದ್ದು. ಮನೆಯಲ್ಲಿ ಗಂಡಸರು ಯಾರೂ ಇಲ್ಲದ ವೇಳೆ ಗಲಾಟೆ ತೆಗೆದು ಧಮ್ಕಿ ಹಾಕ್ತಿದ್ರಂತೆ.
ಇನ್ನು ಗಂಭೀರ ಗಾಯಗೊಂಡಿರುವ ಇಕ್ಬಾಲ್ ಅಹ್ಮದ್ ಮತ್ತು ಅಬ್ದುಲ್ ಖಾದರ್ ಇಬ್ಬರನ್ನ ಸದ್ಯ ತುಮಕೂರು ತುಮಕೂರು ಜಿಲ್ಲಾಸ್ಪತ್ರೆ ಗೆ ದಾಖಲಿಸಿ ಚಿಕಿತ್ಸೆ ನೀಡಲಾಗ್ತಿದೆ. ಸದ್ಯ ಆಸ್ಪತ್ರೆಯಲ್ಲಿರುವ ಗಾಯಾಳುಗಳು ತಮಗೆ ಜೀವಬೆದರಿಕೆ ಇರೋ ಬಗ್ಗೆ ಭಯ ಹೊರಹಾಕಿದ್ದಾರೆ. ಗಲಾಟೆಯ ಬಳಿಕ ರಕೀಬ್ ಉನ್ನಿಸಾ ಮಗ ಇವರೆಲ್ಲರಿಗೂ ಜೀವಬೆದರಿಕೆ ಹಾಕಿದ್ದಾನಂತೆ. ನಾನು ಮೊದಲೇ ರೌಡಿ, ನೀವೇನಾದರೂ ಪೋಲಿಸರಿಗೆ ದೂರು ನೀಡಿದರೆ ನಿಮ್ಮಲ್ಲಿ ಇಬ್ಬರನ್ನೂ ಜೀವ ಸಹಿತ ಬಿಡೋದಿಲ್ಲ ಅಂತಾ ಕೊಲೆ ಬೆದರಿಕೆ ಹಾಕಿದ್ದಾನಂತೆ.
ಒಟ್ಟಿನಲ್ಲಿ ಕುಡಿಯುವ ನೀರಿನ ವಿಚಾರಕ್ಕೆ ನಡೆದ ಗಲಾಟೆ ಮಾರಣಾಂತಿಕ ಹಲ್ಲೆಯ ಮಟ್ಟಕ್ಕೆ ಹೋಗಿದ್ದು, ಘಟನೆಯಿಂದ ಸ್ಥಳೀಯರು ಬೆಚ್ಚಿಬಿದ್ದಿದ್ದಾರೆ. ಜಯನಗರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದ್ದು, ಪೊಲೀಸರು ಈ ಬಗ್ಗೆ ಅದೇನು ಕ್ರಮ ಕೈಗೊಳ್ತಾರೆ ಅನ್ನೋದನ್ನು ಕಾದು ನೋಡಬೇಕಿದೆ.