ತುಮಕೂರು : ತುಮಕೂರು ನಗರದ ಕಾಲ್‌ಟೆಕ್ಸ್ ನಿಂದ ಬನಶಂಕರಿಗೆ ತೆರಳುವ ಮಾರ್ಗದಲ್ಲಿರೋ ಕುಣಿಗಲ್ ಅಂಡರ್‌ಪಾಸ್‌ನ ದುರಸ್ಥಿಗೆಂದು ಸುಮಾರು ಒಂದು ತಿಂಗಳುಗಳ ಕಾಲ ಇಲ್ಲಿ ಓಡಾಡಕ್ಕೆ ನಿಷೇಧ ವಿಧಿಸಲಾಗಿದೆ. ಹೀಗಾಗಿ ಸಂಚಾರಿ ಪೊಲೀಸರು ಮಾರ್ಗ ಬದಲಾವಣೆ ಮಾಡಲಾಗಿದ್ದು, ಇನ್ನು ಮುಂದೆ ಔಟರ್ ರಿಂಗ್‌ರೋಡ್‌ನಲ್ಲಿ ಟ್ರಾಫಿಕ್ ಕಿರಿಕಿರಿ ತಪ್ಪಿದಲ್ಲ.
ಔಟರ್‌ರಿಂಗ್ ರೋಡ್‌ನಲ್ಲಿ ಸಾಮಾನ್ಯವಾಗಿ ಭಾರೀ ವಾಹನಗಳ ಓಡಾಟ ಹೆಚ್ಚಾಗಿರುತ್ತೆ. ಆದರೀಗ ಬಸ್, ಬೈಕ್, ಆಟೋ ಸೇರಿ ಎಲ್ಲ ವಾಹನಗಳು ಔಟರ್ ರಿಂಗ್ ರೋಡ್ ಮೂಲಕವೇ ಸಂಚಾರ ಮಾಡಬೇಕಿರೋದರಿಂದ ಟ್ರಾಫಿಕ್ ಸಮಸ್ಯೆ ಹೆಚ್ಚಾಗ್ತಿದೆ. ಔಟರ್ ರಿಂಗ್‌ರೋಡ್‌ನ ರೈಲ್ವೆ ಅಂಡರ್ ಪಾಸ್ ಕಿರಿದಾಗಿದ್ದು, ರಸ್ತೆ ಕೂಡ ಕಿತ್ತುಹೋಗಿದೆ. ಆದ್ದರಿಂದ ಲಾರಿ, ಬಸ್, ಟ್ರಕ್‌ಗಳು ನಿಧಾನವಾಗಿ ಓಡಾಡ್ತಿದ್ದು, ಕಿಲೋ ಮೀಟರ್‌ಗಟ್ಟಲೆ ಟ್ರಾಫಿಕ್ ಜಾಮ್ ಉಂಟಾಗಿದ್ದು, ಜಾಮ್‌ನಲ್ಲಿ ಸಿಲುಕಿದ ಸವಾರರು ಫುಲ್ ಹೈರಾಣಾದರು.
ಇನ್ನು ಬನಶಂಕರಿ ಬಳಿಯ ಅಂಡರ್‌ಪಾಸ್‌ನಿಂದ ಸಾಗುವ ವಾಹನಗಳು ಔಟರ್ ರಿಂಗ್‌ರೋಡ್ ಮೂಲಕವೇ ಸಾಗಬೇಕಿದ್ದು, ಟ್ರಾಫಿಕ್ ಸಮಸ್ಯೆ ಉಂಟಾಗುತ್ತೆ ಅಂತಾ ಗೊತ್ತಿದ್ದರೂ ಕೂಡ ಒಬ್ಬರೇ ಒಬ್ಬರು ಸಂಚಾರಿ ಪೊಲೀಸರನ್ನು ನಿಯೋಜನೆ ಮಾಡಲಾಗಿಲ್ಲ. ಇವತ್ತು ಹೇಳಿ ಕೇಳಿ ಭಾನುವಾರ ಬೇರೆ ವಾಹನಗಳ ಓಡಾಟ ಹೆಚ್ಚಾಗಿರುತ್ತೆ ಅಂತಾ ಗೊತ್ತಿದ್ರು ಕೂಡ ಪೊಲೀಸರು ಇತ್ತ ಸುಳಿದೇ ಇಲ್ಲ. ಅಷ್ಟು ಟ್ರಾಫಿಕ್ ಆಗಿದ್ದನ್ನು ಕಂಡ ಸಾರ್ವಜನಿಕರೊಬ್ಬರು ಟ್ರಾಫಿಕ್ ಕಂಟ್ರೋಲ್ ಮಾಡಲು ಹರಸಾಹಸ ಪಟ್ಟರು.
ಅದೇನೆ ಆಗಲಿ, ಕುಣಿಗಲ್ ಅಂಡರ್‌ಪಾಸ್ ಕಾಮಗಾರಿ ಕಂಪ್ಲೀಟ್ ಆಗುವವರೆಗೂ ಅಂದರೆ ಸುಮಾರು ಒಂದು ತಿಂಗಳುಗಳ ಕಾಲ ಔಟರ್ ರಿಂಗ್ ರೋಡ್ ಟ್ರಾಫಿಕ್ ಜಾಮ್ ಉಂಟಾಗಲಿದ್ದು, ಟ್ರಾಫಿಕ್ ಕಂಟ್ರೋಲ್ ಮಾಡಲು ಪೊಲೀಸರು ಮುಂದಾಗಿ ಸವಾರರಿಗೆ ಟ್ರಾಫಿಕ್ ಸಮಸ್ಯೆಯಿಂದ ಮುಕ್ತಿ ಕೊಡಿಸಬೇಕಿದೆ.