ತುಮಕೂರು :
ಉದರ ನಿಮಿತ್ತಂ ಬಹುಕೃತ ವೇಷಂ ಅನ್ನೋ ಮಾತೇ ಇದೆ. ಹೊಟ್ಟೆ ಪಾಡಿಗಾಗಿ ನಾನಾ ವೇಷಗಳನ್ನು ತೊಡುವ ಜನರನ್ನು ನೋಡಿದ್ದೀವಿ. ದುಡ್ಡು ಮಾಡೋದಕ್ಕೆ ಅಂತಾ ಎಂತೆಂಥಾ ಕೆಲಸಕ್ಕೂ ಕೈ ಹಾಕೋರನ್ನು ಕಂಡಿದ್ದೀವಿ. ಆದರೆ ಇಲ್ಲಿ ಇಬ್ಬರು ಕಿಲಾಡಿ ಯುವಕರು ದುಡ್ಡು ಮಾಡೋದಕ್ಕೆ ದೇವರನ್ನೇ ಬಂಡವಾಳ ಮಾಡಿಕೊಂಡಿದ್ದು, ಅರ್ಚಕರ ವೇಷ ತೊಟ್ಟು ಜನರನ್ನು ವಂಚಿಸುತ್ತಿದ್ದಾರಂತೆ.
ತುಮಕೂರು ತಾಲೂಕಿನ ಚಿನಗಾ ಗ್ರಾಮದಲ್ಲಿ ಇರುವ ಕನಕದುರ್ಗ ದೇವಸ್ಥಾನದಲ್ಲಿ ದೇವರ ಹೆಸರನ್ನೇ ಬಂಡವಾಳ ಮಾಡಿಕೊಂಡ ಇಬ್ಬರು ಯುವಕರು ಅರ್ಚಕರ ವೇಷ ಧರಿಸಿ ಮುಗ್ದ ಮಹಿಳೆಯರನ್ನು ವಂಚಿಸಿರುವ ಆರೋಪ ಕೇಳಿಬಂದಿದೆ. ದೇವಸ್ಥಾನಕ್ಕೆ ಬರುವ ಮಕ್ಕಳಿಂದ ಭಿಕ್ಷಾಟನೆ ಮಾಡಿಸುವುದು, ಗ್ರಾಮದ ದಲಿತರಿಗೆ ತಾರತಮ್ಯ ತೋರುವುದು, ಮಹಿಳಾ ಭಕ್ತರೊಂದಿಗೆ ಸಲುಗೆಯಿಂದ ನಡೆದುಕೊಳ್ಳುವುದು, ಹೀಗೆ ದೇವರ ಹೆಸರಲ್ಲಿ ಡೋಂಗಿತನ ಮೆರೆಯುತ್ತಿದ್ದಾರಂತೆ. ಈ ಯುವಕರ ವಿರುದ್ಧ ಇದೀಗ ತುಮಕೂರು ಎಸ್ಪಿ ಕಚೇರಿಗೆ ದೂರು ದಾಖಲಾಗಿದೆ.
ಕನಕದುರ್ಗ ದೇವಸ್ಥಾನದ ಅರ್ಚಕ ಚೇತನ್ ಕುಮಾರ್ ಹಾಗೂ ಧರ್ಮದರ್ಶಿ ಹರೀಶ್ ಎಂಬ ಈ ಕಿಲಾಡಿ ಜೋಡಿ ಯುವಕರೇ ದೇವರನ್ನೇ ಬಂಡವಾಳ ಮಾಡಿಕೊಂಡು ಹಣ ಮಾಡಲು ಮುಂದಾಗಿದ್ದಾರಂತೆ. ಅದಕ್ಕಾಗಿ ಅರ್ಚಕರ ವೇಷ ತೊಟ್ಟು ನಾನಾ ಆಟಗಳನ್ನು ಆಡ್ತಿದ್ದಾರಂತೆ.
ಸ್ವಯಂಘೋಷಿತ ಅರ್ಚಕರಾದ ಜನ್ನೇನಹಳ್ಳಿ ಮೂಲದ ಚೇತನ್ ಕುಮಾರ್ (ಧರ್ಮದರ್ಶಿ ಹಾಗೂ ಮುಖ್ಯ ಅರ್ಚಕ) ಮತ್ತು ಬೋರಯ್ಯನಪಾಳ್ಯದ ಹರೀಶ್ ಎಂಬುವವರು ಸುಮಾರು ಎರಡೂವರೆ ವರ್ಷಗಳ ಹಿಂದೆ ಚಿನಗಾ ಗ್ರಾಮಕ್ಕೆ ಬಂದು ತಾವು ಧಾರ್ಮಿಕ ಸೇವೆಗಾಗಿ ಬಂದಿದ್ದೇವೆ. ನಮ್ಮ ಕನಸಿನಲ್ಲಿ ಕನಕದುರ್ಗ ಬಂದಿದ್ದಾಳೆ. ಈ ಚಿನಗಾ ಗ್ರಾಮ ಕನಕದುರ್ಗಮ್ಮನ ತವರು ಮನೆಯಂತೆ. ಆಕೆ ಇಲ್ಲೇ ಬಾವಿಯಲ್ಲಿ ಕಪ್ಪು ಶಿಲೆ ರೂಪದಲ್ಲಿ ಇದ್ದಾಳೆ. ಅದನ್ನು ಹೊರ ತೆಗೆದು ಪೂಜಿಸಬೇಕು ಅಂತ ಜನರನ್ನು ನಂಬಿಸಿ, ಗ್ರಾಮದಲ್ಲಿ ಲಕ್ಷಾಂತರ ರೂ. ಮೌಲ್ಯದ 1 ಎಕರೆ ಜಮೀನನ್ನು ಖರೀದಿಸಿದ್ದಾರಂತೆ. ಹೀಗೆ ಖರೀದಿಸಿದ ಜಮೀನಿನಲ್ಲೇ ಕನಕದುರ್ಗಮ್ಮ ದೇವಾಲಯವನ್ನು ನಿರ್ಮಿಸಿದ್ದಾರೆ. ಆನಂತರ ಶಿವಶಕ್ತಿ ಆಸರೆ ಚಾರಿಟಬಲ್ ಟ್ರಸ್ಟ್ ಸ್ಥಾಪಿಸಿ ಪೂಜೆ ಪುನಸ್ಕಾರವನ್ನು ಆರಂಭಿಸಿದ್ದಾರೆ.
ಇನ್ನು ಈ ಡೋಂಗಿ ಅರ್ಚಕರಿಗೆ ಶ್ರೀಮಂತ ಕುಟುಂಬದ ಮಹಿಳೆಯರೇ ಟಾರ್ಗೆಟ್. ದೇವಸ್ಥಾನಕ್ಕೆ ಬರುವ ಮಹಿಳೆಯರಲ್ಲಿ ಭೀತಿ ಹುಟ್ಟಿಸಿ, ಪರಿಸ್ಥಿತಿಯ ಲಾಭ ಪಡೆದುಕೊಳ್ಳುತ್ತಿದ್ದಾರಂತೆ. ಗಂಡನಿಗೆ ಗಂಡಾಂತರವಿದೆ, ತಾಳಿ ಭಾಗ್ಯ ಹೋಗುತ್ತೆ ಅಂತಾ ಹೆದರಿಸಿ, ಲಕ್ಷಾಂತರ ರೂ. ಖರ್ಚಿನ ಹೋಮ ಹವನಗಳನ್ನು ಮಾಡಿಸುತ್ತಿದ್ದಾರಂತೆ. ಅಮ್ಮನ ದೇವಸ್ಥಾನ ನಿರ್ಮಿಸಲು ಹಣದ ಅವಶ್ಯಕತೆಯಿದ್ದು, ಪುಣ್ಯ ಕ್ಷೇತ್ರಗಳಿಗೆ ಹೋಗಿ ಭಿಕ್ಷಾಟನೆ ನಡೆಸಿ, ಹಣ ನೀಡಿದರೆ ಅದೃಷ್ಟ ಬರುತ್ತೆ ಎಂದು ಭಕ್ತರನ್ನ ನಂಬಿಸುತ್ತಿದ್ದು. ದೇವಸ್ಥಾನಕ್ಕೆ ಬರುವ ಮಕ್ಕಳನ್ನು ಕೂಡ ಭಿಕ್ಷಾಟನೆಗೆ ಪ್ರೋತ್ಸಾಹಿಸುವ ಬಗ್ಗೆ ಆರೋಪ ಕೇಳಿಬಂದಿದೆ. ಮಕ್ಕಳು ಭಿಕ್ಷಾಟನೆ ನಡೆಸಿದರೆ ಅವರ ಭವಿಷ್ಯ ಉಜ್ವಲವಾಗುತ್ತೆ ಅಂತ ನಂಬಿಸಿ ಅವರಿಂದ ಪವಿತ್ರ ಕ್ಷೇತ್ರಗಳಲ್ಲಿ ಭಿಕ್ಷಾಟನೆ ಮಾಡಿಸಿ, ಆ ಭಿಕ್ಷಾಟನೆಯಿಂದ ಬಂದ ಹಣವನ್ನು ಇವರು ಪಡೆದುಕೊಳ್ಳುತ್ತಿರುವುದಲ್ಲದೇ, ಇದು ನಿಮಗೆ ಸ್ಪೂರ್ತಿಯಾಗಬೇಕು ಅಂತಾ ಉಳಿದ ಭಕ್ತರಿಗೆ ಭಿಕ್ಷಾಟನೆಗೆ ಪ್ರೋತ್ಸಾಹ ಮಾಡಿದ್ದಾರೆ.
ಇನ್ನು ಈ ಡೋಂಗಿ ಅರ್ಚಕರು ಬಾಯಿಗೆ ಬಂದಂತೆ, ಸಿಕ್ಕ ಸಿಕ್ಕ ಹೆಸರಲ್ಲಿ ದೇವರನ್ನು ಸೃಷ್ಟಿವುದರಲ್ಲೂ ನಿಸ್ಸೀಮರು. ಆನ್ಲೈನ್ಗಳಲ್ಲಿ ವಿಗ್ರಹಗಳನ್ನು ತರಿಸಿ ಅದಕ್ಕೆ ಬೇರೆಬೇರೆ ಹೆಸರುಗಳನ್ನಿಟ್ಟು ಭಕ್ತರನ್ನು ವಂಚಿಸುತ್ತಿದ್ದಾರಂತೆ. ಹುತ್ತದಲ್ಲಿ ವಿಗ್ರಹ ಸಿಕ್ಕಿದೆ ಅಂತಾ ಹುತ್ತದಮ್ಮ, ಪೆಟ್ಟಿಗೆಯಲ್ಲಿ ಸಿಕ್ಕಿದ್ದಕ್ಕೆ ಪೆಟ್ಟಿಗೆಯಮ್ಮ, ಬಾವಿಯಲ್ಲಿ ವಿಗ್ರಹ ಸಿಕ್ಕಿದೆ ಅಂತಾ ಬಾವಿಯಮ್ಮ, ಕುಂಭಮೇಳದಲ್ಲಿ ವಿಗ್ರಹ ಸಿಕ್ಕಿದೆ ಅಂತಾ ಪ್ರಯಾಗಮ್ಮ ಹೀಗೆ ಹೊಸಹೊಸ ದೇವರುಗಳನ್ನು ಇವರೇ ಸೃಷ್ಟಿ ಮಾಡಿಬಿಟ್ಟಿದ್ದಾರಂತೆ. ಈ ದೇವರುಗಳಿಗೆ ಅಮಾವಾಸ್ಯೆ, ಹುಣ್ಣಿಮೆ, ವಿಶೇಷ ದಿನಗಳಲ್ಲಿ ಮಹಿಳೆಯರು ಪೂಜೆ ಸಲ್ಲಿಸಿದರೆ ಒಳ್ಳೆದಾಗುತ್ತೆ ಎಂದು ಹೇಳುತ್ತಾರಂತೆ. ಜೊತೆಗೆ ಮಹಿಳಾ ಭಕ್ತರೊಂದಿಗೆ ಅಸಭ್ಯವಾಗಿ ವರ್ತಿಸಿರುವ ಬಗ್ಗೆಯೂ ದೂರುಗಳು ಕೇಳಿಬಂದಿವೆ.
ಇನ್ನು ಗ್ರಾಮದಲ್ಲಿ ಇರುವ ದಲಿತರಿಗೆ ದೇವಸ್ಥಾನಕ್ಕೆ ಬರದಂತೆ ಹೇಳಿ ತಾರತಮ್ಯ ಮಾಡ್ತಿದ್ದಾರಂತೆ. ಈ ಅರ್ಚಕರ ತಂಡದ ಡೋಂಗಿತನಕ್ಕೆ ಎಚ್ಚೆತ್ತ ಗ್ರಾಮಸ್ಥರು ಜನರ ಧಾರ್ಮಿಕ ಭಾವನೆಗಳನ್ನೇ ಬಂಡವಾಳ ಮಾಡಿಕೊಂಡು ಅವರನ್ನು ವಂಚಿಸುತ್ತಿರುವ ಈ ಡೋಂಗಿ ಅರ್ಚಕರ ವಿರುದ್ಧ ತುಮಕೂರು ಎಸ್ಪಿ ಕಚೇರಿಗೆ ದೂರು ಸಲ್ಲಿಸಿದ್ದು, ಕಾನೂನು ಕ್ರಮ ಕೈಗೊಳ್ಳುವಂತೆ ಒತ್ತಾಯಿಸಿದ್ದಾರೆ.