ತುಮಕೂರು:
MLA ಸುರೇಶ್ ಗೌಡ ಅವರೇ ನೀವು ಏನೋ ಎಸಿ ಕಾರಲ್ಲಿ ಜುಂ ಅಂತಾ ಹೋಗ್ತೀರಾ, ಆದರೆ ಬಡ ಜನರ ಪಾಡು ಯಾರಿಗೆ ಹೇಳೋಣ. ಎಲೆಕ್ಷನ್ ಬಂದಾಗ ಮಾತ್ರ ಈ ಕಡೆ ಬರ್ತೀರಾ, ಕೈ ಮುಗಿದು ವೋಟ್ ಹಾಕಿ ಅಂತಾ ಕೇಳ್ತೀರಾ. ಆದರೆ ಗೆದ್ದಮೇಲೆ ನಾವು ಯಾರು ಅಂತಾನೇ ಗೊತ್ತಿಲ್ಲ ಅಂತಾ ಇರ್ತೀರಾ. ಜನರ ಕಷ್ಟ ಮಾತ್ರ ನಿಮಗೇ ಬೇಕಿಲ್ಲ. ಆದರೆ ಅವರು ಹಾಕೋ ವೋಟು. ಅಧಿಕಾರ ಮಾತ್ರ ಬೇಕು. ಇಡೀ ತುಮಕೂರಿಗೆ ನೀರು ಕೊಡುವ ಬುಗಡನಹಳ್ಳಿ ಕೆರೆ ಕೋಡಿ ರಸ್ತೆ ಸುಮಾರು 50 ವರ್ಷಗಳಿಂದಲೂ ಹಳ್ಳ ಹಿಡಿದಿದ್ದು, ಇಲ್ಲಿನ ನಿವಾಸಿಗಳ ಗೋಳು ಹೇಳತೀರದಾಗಿದೆ.
ಈ ರಸ್ತೆ ಈವರೆಗೂ ಡಾಂಬರು ಭಾಗ್ಯವನ್ನೇ ನೋಡಿಲ್ಲವಂತೆ, ಇಡೀ ತುಮಕೂರಿಗೆ ಕುಡಿಯುವ ನೀರು ಒದಗಿಸಿಕೊಟ್ಟರು ಕೂಡ ಬುಗಡನಹಳ್ಳಿಯ ಸ್ಥಿತಿ ಮಾತ್ರ ಹೇಳತೀರದಾಗಿದೆ. ಹೌದು ಬುಗುಡನಹಳ್ಳಿ- ಕುಪ್ಪೂರು ಗ್ರಾಮ ಸೇರಿ ಹಲವು ಗ್ರಾಮಗಳಿಗೆ ಸಂಪರ್ಕ ಕಲ್ಪಿಸುವ ರಸ್ತೆಗೆ ಈವರೆಗೂ ಡಾಂಬರು ಹಾಕಿಲ್ಲ, ಅಲ್ಲದೇ ಒಂದು ಸೇತುವೆ ಕೂಡ ಇಲ್ಲ ಇದರಿಂದ ಮಳೆ ಬಂದಾಗ ಸಿದ್ದರಬೆಟ್ಟ ದಿಂದ ಈ ಕೆರೆಗೆ ನೀರು ಹರಿದು ಬರ್ತಿದ್ದು, ಕೆರೆ ಕೋಡಿಯ ನೀರು ಇಲ್ಲಿಂದ ಹರಿಯಲಿದ್ದು, ಎದೆ ಎತ್ತರ ಭಾಗಕ್ಕೆ ಹರಿಯುತ್ತಿರೋ ನೀರಿನಲ್ಲೇ ನಡೆದುಕೊಂಡು ಹೋಗಬೇಕಾಗಿದೆ. ಜೊತೆಗೆ ಈ ರೋಡ್‌ನಲ್ಲಿ ಒಂದೇ ಒಂದು ಗಾಡಿ ಕೂಡ ಓಡಾಡಲು ಸಾಧ್ಯವಾಗ್ತಿಲ್ಲ, ಶಾಲೆಗ ಹೋಗಲು ಮಕ್ಕಳು ಸಾಧ್ಯವಾಗ್ತಿಲ್ಲ. ಶಾಸಕ ಸುರೇಶ್ ಗೌಡ ಗೆದ್ದಿದ್ರು ಕೂಡ ರಸ್ತೆ ಮಾಡಿ ಕೊಡ್ತೀವಿ ಅಂತಾರೆ ಅಷ್ಟೇ. ಆದರೆ ಈವರೆಗೂ ಮಾಡಿ ಕೊಟ್ಟಿಲ್ಲ ಅಂತಾ ಸಾರ್ವಜನಿಕರು ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ.
ಈ ರಸ್ತೆ ನಾವು ಹುಟ್ಟಿದಾಗಿನಿಂದ ಹೀಗೆ ಇದೆ. ರಸ್ತೆಯೂ ಇಲ್ಲ, ಸೇತುವೆಯೂ ಇಲ್ಲ, ಅಧಿಕಾರಿಗಳು, ಶಾಸಕರು ಬಂದು ಹೋಗ್ತಾರೆ ಆದರೆ ನಮಗೆ ಯಾವುದೇ ಅನುಕೂಲ ಮಾಡಿಕೊಡ್ತಿಲ್ಲ. ಇಲ್ಲಿಂದ ಮಕ್ಕಳು ಶಾಲಾ- ಕಾಲೇಜಿಗೆ ಹೋಗಲು ಸಾಧ್ಯವಾಗ್ತಿಲ್ಲ. ಹಲವಾರು ಬಾರಿ ಅಧಿಕಾರಿಗಳ ಬಳಿ ನಮ್ಮ ರಸ್ತೆ ಸಮಸ್ಯೆ ಹೇಳಿದರು ಸಹ ಯಾರೂ ಪ್ರತಿಕ್ರಿಯಿಸುತ್ತಿಲ್ಲ. ಈ ರಸ್ತೆಯಲ್ಲಿ ಯಾವುದಾದರೂ ಗಾಡಿ ಸಿಗಾಕೊಂಡ್ರೆ ಟ್ರ್ಯಾಕ್ಟರ್ ತಂದು ಎಳೆಯಬೇಕಾದ ಪರಿಸ್ಥಿತಿ ನಿರ್ಮಾಣವಾಗಿದೆ ಎಂದು ಇಲ್ಲಿನ ಜನರು ಆಕ್ರೋಶ ಹೊರಹಾಕಿದರು.
ಇನ್ನಾದರೂ ಶಾಸಕ ಸುರೇಶ್ ಗೌಡ, ಅಧಿಕಾರಿಗಳು ಎಚ್ಚೆತ್ತುಕೊಂಡು ಬುಗಡನಹಳ್ಳಿ ಗ್ರಾಮಕ್ಕೆ ರಸ್ತೆ ಸೌಲಭ್ಯವನ್ನು ಒದಗಿಸಿಕೊಡಬೇಕಿದೆ. ಇಲ್ಲವಾದರೆ ಮುಂದಿನ ದಿನಗಳಲ್ಲಿ ನಿಮ್ಮ ಕಚೇರಿ ಮುಂದೆ ಪ್ರತಿಭಟನೆ ಮಾಡುವ ಸಮಯ ದೂರವಿಲ್ಲ ಎಂದು ಸ್ಥಳೀಯರು ಎಚ್ಚರಿಕೆ ನೀಡಿದ್ದಾರೆ.