ತುಮಕೂರು : ಪೆಂಟಾವೆಲಂಟ್ ಲಸಿಕೆಗೆ ಜಿಲ್ಲೆಯಲ್ಲಿ ನಾಲ್ಕನೇ ಮಗು ಬಲಿ?

ತುಮಕೂರು:

ಪುಟಾಣಿ ಮಕ್ಕಳಿಗೆ ನೀಡುವ ಪೆಂಟಾವೆಲಂಟ್‌ ಲಸಿಕೆ ತುಮಕೂರು ಜಿಲ್ಲೆಯಲ್ಲಿ ಮರಣ ಮೃದಂಗವನ್ನೇ ಬಾರಿಸುತ್ತಿದೆ. ಕಳೆದ ಜನವರಿಯಿಂದ ಇಲ್ಲಿವರೆಗೆ ಈ ಪೆಂಟಾವೆಲಂಟ್‌ ಲಸಿಕೆಯ ರಿಯಾಕ್ಷನ್‌ನಿಂದಾಗಿ ಮೂವರು ಮಕ್ಕಳು ಬಲಿಯಾಗಿದ್ದರು. ಇದೀಗ ಈ ಪೆಂಟಾವೆಲಂಟ್‌ ಲಸಿಕೆಗೆ ಐದು ತಿಂಗಳ ಮಗುವೊಂದು ಬಲಿಯಾಗಿದೆ.

ಪೆಂಟಾವೆಲಂಟ್‌ ಲಸಿಕೆ ಹಾಕಿಸಿಕೊಂಡ ಕೆಲವೇ ಗಂಟೆಗಳಲ್ಲಿ ಮುದ್ದಾದ ಐದು ತಿಂಗಳ ಹೆಣ್ಣು ಮಗುವೊಂದು ಸಾವನ್ನಪ್ಪಿರುವ ಆರೋಪ ಕೇಳಿಬಂದಿದೆ. ತುಮಕೂರು ಜಿಲ್ಲೆಯ ಶಿರಾ ತಾಲೂಕಿನ ಮಾಗೋಡು ಗ್ರಾಮದ ಕೀರ್ತನಾ ಹಾಗೂ ಲಕ್ಷ್ಮೀಕಾಂತ್‌ ದಂಪತಿಯ ೫ ತಿಂಗಳ ಶಿಶು ಮರಣ ಹೊಂದಿದೆ. ಕಳೆದ ಗುರುವಾರ ಈ ಮಗುವಿಗೆ ಮಾಗೋಡು ಗ್ರಾಮದ ಅಂಗನವಾಡಿ ಕೇಂದ್ರದಲ್ಲಿ ಎಎನ್‌ಎಂ ಮುದ್ದಮ್ಮ ಅವರು ಪೆಂಟಾವೆಲಂಟ್‌-೨ ಲಸಿಕೆಯನ್ನು ಹಾಕಿದ್ದರು. ಬೆಳಿಗ್ಗೆ ೧೧.೩೦ರ ಸುಮಾರಿಗೆ ಲಸಿಕೆಯನ್ನು ಹಾಕಿಸಿಕೊಂಡ ಮಗು ಬಳಿಕ ನಿದ್ದೆಗೆ ಜಾರಿತ್ತು. ಮಧ್ಯಾಹ್ನ ೩.೩೦ರ ಸುಮಾರಿಗೆ ಮಗುವಿಗೆ ಬೇದಿ ಕಾಣಿಸಿಕೊಂಡು ಅಸ್ವಸ್ಥಗೊಂಡಿತ್ತು.

ತಕ್ಷಣ ಮಗುವನ್ನು ಶಿರಾ ಸರ್ಕಾರಿ‌ ಆಸ್ಪತ್ರೆಗೆ ಕರೆದುಕೊಂಡು ಹೋದಾಗ, ಮಗುವನ್ನು ಪರಿಶೀಲಿಸಿದ ವೈದ್ಯರು ತುಮಕೂರಿಗೆ ಕರೆದುಕೊಂಡು ಹೋಗುವಂತೆ ಸೂಚಿಸಿದ್ದಾರೆ. ವೆಂಟಿಲೇಟರ್‌ ಹಾಕಿಕೊಂಡೇ ತುಮಕೂರಿಗೆ ಕರೆದುಕೊಂಡು ಬಂದ ಪೋಷಕರು, ಮಗುವನ್ನು ಶ್ರೀದೇವಿ ಆಸ್ಪತ್ರೆಯಲ್ಲಿ ಅಡ್ಮಿಟ್ ಮಾಡಿದ್ದರು. ಮೆಡಿಸಿನ್‌ಗೆ ಹೆಚ್ಚು ಹಣ ಖರ್ಚಾಗುತ್ತೆ. ತರಿಸಿಕೊಡ್ತೀವಿ ಅಂದರೆ ಚಿಕಿತ್ಸೆ ಕೊಡ್ತೀವಿ. ಇಲ್ಲಾ ಅಂದರೆ ಬೆಂಗಳೂರಿಗೆ ಕರೆದುಕೊಂಡು ಹೋಗಿ ಅಂತಾ ಶ್ರೀದೇವಿ ಆಸ್ಪತ್ರೆಯ ಸಿಬ್ಬಂದಿ ಹೇಳಿದ್ದಾರೆ. ಅದಕ್ಕೆ ಒಪ್ಪಿದ ಪೋಷಕರು ಮೆಡಿಸಿನ್‌ ತಂದುಕೊಡುವುದಾಗಿ ತಿಳಿಸಿದ್ದರಂತೆ. ಅದರಂತೆ ಶ್ರೀದೇವಿ ಆಸ್ಪತ್ರೆಯಲ್ಲಿ ಚಿಕಿತ್ಸೆಯನ್ನು ಕೂಡ ಆರಂಭಿಸಿದ್ದರಂತೆ. ಆದರೆ ಅದೇ ಗುರುವಾರ ಮಧ್ಯರಾತ್ರಿ ೧.೩೦ ಸುಮಾರಿಗೆ ಮಗು ಸಾವನ್ನಪ್ಪಿದೆ ಅಂತಾ ಪೋಷಕರಿಗೆ ತಿಳಿಸಿದ್ದಾರೆ. ತಕ್ಷಣವೇ ಮಗುವನ್ನು ಶ್ರೀದೇವಿ ಆಸ್ಪತ್ರೆಯ ಶವಾಗಾರಕ್ಕೂ ಶಿಫ್ಟ್‌ ಮಾಡಲಾಗಿತ್ತಂತೆ. ಇದಾದ ಬಳಿಕ ನಾವು ನಮ್ಮಲ್ಲಿದ್ದ ಔಷಧಿಯನ್ನೆಲ್ಲಾ ಹಾಕಿದ್ದೇವೆ. ನೀವು ನಮಗೆ ಔಷಧಿ ತರಿಸಿಕೊಡಿ ಅಂತಾ ಮಗು ಸತ್ತಮೇಲೂ ಒಂದಿಷ್ಟು ಔಷಧಿಯನ್ನು ತರಿಸಿಕೊಂಡಿದ್ದಾರಂತೆ.

ನಂತರ ಬೆಳಿಗ್ಗೆ ೧೧ ಗಂಟೆ ಸುಮಾರಿಗೆ ಮಗುವಿನ ಮೃತದೇಹವನ್ನು ಕೊಡಿ ಅಂತಾ ಪೋಷಕರು ಕೇಳಿದ್ದಾರೆ, ನಮಗೆ ಎಸಿ ಪೋಸ್ಟ್‌ ಮಾರ್ಟಂ ಮಾಡಿದ ಬಳಿಕವೇ ಬಾಡಿ ಹಸ್ತಾಂತರಿಸಲು ಹೇಳಿದ್ದಾರೆ. ಹೀಗಾಗಿ ನೀವು ಶಿರಾ ಪೊಲೀಸ್‌ ಠಾಣೆಗೆ ಹೋಗಿ ಎಫ್‌ಐಆರ್‌ ಮಾಡಿಸಿಕೊಂಡು ಬನ್ನಿ ಅಂತಾ ಹೇಳಿದ್ದಾರಂತೆ. ಅದಕ್ಕೂ ಒಪ್ಪಿದ ಪೋಷಕರು ಶಿರಾಗೆ ಹೋಗಿ ಎಫ್‌ಐಆರ್‌ ಕೂಡ ಮಾಡಿಸಿಕೊಂಡು ಬಂದ್ದು, ಪೋಸ್ಟ್‌ ಮಾರ್ಟಂಗೆ ಹಣವನ್ನು ಕೂಡ ಕಟ್ಟಿದ್ದರಂತೆ. ಆದರೆ ಸಂಜೆಯಾಗ್ತಿದ್ದಂತೆ ಶ್ರೀದೇವಿ ಆಸ್ಪತ್ರೆಯವರು ನಾವು ಪೋಸ್ಟ್‌ ಮಾರ್ಟಂ ಮಾಡಲ್ಲ, ನೀವು ಜಿಲ್ಲಾಸ್ಪತ್ರೆಗೆ ಕರೆದುಕೊಂಡು ಹೋಗಿ ಪೋಸ್ಟ್‌ ಮಾರ್ಟಂ ಮಾಡಿಸಿಕೊಳ್ಳಿ ಅಂತಾ ಹಣವನ್ನು ಹಿಂದಿರುಗಿಸಿದ್ದಾರಂತೆ.

ಹೀಗಾಗಿ ಇವತ್ತು ಜಿಲ್ಲಾಸ್ಪತ್ರೆಯ ಶವಾಗಾರಕ್ಕೆ ಮಗುವಿನ ಮೃತದೇಹವನ್ನು ರವಾನಿಸಿ ಪೋಸ್ಟ್‌ ಮಾರ್ಟಂ ನಡೆಸಲಾಗಿದ್ದು, ಮೃತದೇಹವನ್ನು ಪೋಷಕರಿಗೆ ಹಸ್ತಾಂತರಿಸಲಾಗಿದೆ. ಪೆಂಟಾವೆಲಂಟ್‌ ಲಸಿಕೆಯಿಂದಲೇ ಮಗು ಸಾವನ್ನಪ್ಪಿದ್ದು, ಶ್ರೀದೇವಿ ಆಸ್ಪತ್ರೆಯವರು ಮಗು ಸಾವನ್ನಪ್ಪಿದ ಬಳಿಕವೂ ತಮ್ಮಿಂದ ಹಣ ಪೀಕಿದ್ದಾರೆ. ಮೊದಲೇ ಮೃತದೇಹವನ್ನು ಕೊಟ್ಟಿದ್ದರೆ ತಾವು ಇಷ್ಟೊತ್ತಿಗೆ ಕಾರ್ಯವನ್ನು ಕೂಡ ಮುಗಿಸಿಬಿಡುತ್ತಿದ್ದೆವು ಎಂದು ಆರೋಪಿಸಿದ್ದಾರೆ.

ಒಟ್ಟಿನಲ್ಲಿ ಜಿಲ್ಲೆಯಲ್ಲಿ ಪೆಂಟಾವೆಲಂಟ್‌ ಲಸಿಕೆ ಮರಣ ಮೃದಂಗ ಬಾರಿಸುತ್ತಿದೆ. ಕಳೆದ ಜನವರಿಯಿಂದ ಜಿಲ್ಲೆಯಲ್ಲಿ ಮೂವರು ಮಕ್ಕಳು ಪೆಂಟಾವೆಲಂಟ್‌ಗೆ ಬಲಿಯಾಗಿದ್ದು, ಇದೀಗ ಐದು ತಿಂಗಳ ಮುದ್ದಾದ ಮಗುವೊಂದು ಪ್ರಾಣ ಕಳೆದುಕೊಂಡಿದೆ. ಪೆಂಟಾವೆಲಂಟ್‌ನಿಂದಲೇ ಈ ಮಗು ಕೂಡ ಸಾವನ್ನಪ್ಪಿರುವ ಶಂಕೆ ವ್ಯಕ್ತವಾಗಿದ್ದು, ಪೋಸ್ಟ್‌ ಮಾರ್ಟಂ ರಿಪೋರ್ಟ್‌ ಬಳಿಕವಷ್ಟೇ ಸತ್ಯಾಸತ್ಯತೆ ತಿಳಿದುಬರಲಿದೆ.

Author:

...
Editor

ManyaSoft Admin

share
No Reviews