ತುಮಕೂರು : ಮೇ. 8ರಂದು ತುಮಕೂರಿನಲ್ಲಿ ಜನಾಕ್ರೋಶ ಯಾತ್ರೆ

ತುಮಕೂರು :

ರಾಜ್ಯ ಸರ್ಕಾರದ ಬೆಲೆ ಏರಿಕೆ ನೀತಿ ಹಾಗೂ ದುರಾಡಳಿತದ ವಿರುದ್ಧ ಸಿಡಿದೆದ್ದಿರುವ ಬಿಜೆಪಿ ಪಕ್ಷವು ರಾಜ್ಯಾದ್ಯಂತ ಜಾನಾಕ್ರೋಶ ಯಾತ್ರೆಯನ್ನು ಮಾಡ್ತಾ ಇದ್ದು, ಈ ಯಾತ್ರೆ ಇದೀಗ ಅಂತಿಮ ಘಟ್ಟಕ್ಕೆ ತಲುಪಿದೆ. ಮೇ 11 ರಂದು ಹುಬ್ಬಳ್ಳಿಯಲ್ಲಿ ಜನಾಕ್ರೋಶ ಯಾತ್ರೆ ಸಮಾರೋಪ ಸಮಾರಂಭ ನಡೆಯಲಿದ್ದು, ಕೊನೆಯ ಘಟ್ಟದಲ್ಲಿ ಮೇ 8 ರಂದು ಅಂದರೆ ನಾಡಿದ್ದು ಗುರುವಾರ ಜನಾಕ್ರೋಶ ಯಾತ್ರೆ ತುಮಕೂರಿಗೆ ಬರಲಿದೆ. ಅಂದು ಬಿಜೆಪಿ ನಾಯಕರು ನಗರದ ಟೌನ್‌ಹಾಲ್‌ ಸರ್ಕಲ್‌ನಿಂದ ಡಿಸಿ ಕಚೇರಿವರೆಗೂ ಪಾದಯಾತ್ರೆ ಮೂಲಕ ತೆರಳಿ ಬಳಿಕ ಜಿಲ್ಲಾಧಿಕಾರಿ ಮುಂದೆ ಬೃಹತ್‌ ಸಮಾವೇಶದ ಮೂಲಕ ಸರ್ಕಾರದ ವಿರುದ್ಧ ಹೋರಾಟ ಮಾಡುತ್ತೇವೆ ಎಂದು ಶಾಸಕ ಸುರೇಶ್‌ಗೌಡ ತಿಳಿಸಿದ್ದಾರೆ.

ತುಮಕೂರಿನಲ್ಲಿ ನಡೆಯುವ ಜನಾಕ್ರೋಶ ಯಾತ್ರೆಯಲ್ಲಿ ಬಿಜೆಪಿ ರಾಜ್ಯಾಧ್ಯಕ್ಷ ವಿಜಯೇಂದ್ರ, ವಿಪಕ್ಷ ನಾಯಕ ಆರ್‌.ಅಶೋಕ್‌, ಛಲವಾದಿ ನಾರಾಯಣಸ್ವಾಮಿ ಸೇರಿ ಅನೇಕ ಮಂದಿ ನಾಯಕರು ಭಾಗಿಯಾಗಲಿದ್ದಾರಂತೆ. ಘಟಾನುಘಟಿ ನಾಯಕರು ಭಾಗಿಯಾಗುವುದರ ಮೂಲಕ ಬಿಜೆಪಿ ಒಗ್ಗಟ್ಟು ಪ್ರದರ್ಶನ ಮಾಡುತ್ತೇವೆ ಎಂದು ಶಾಸಕ ಸುರೇಶ್‌ ಗೌಡ ಸುದ್ದಿಗೋಷ್ಠಿ ನಡೆಸುವ ಮೂಲಕ ತಿಳಿಸಿದ್ದಾರೆ. ಇದೇ ವೇಳೆ ಮಾತನಾಡಿದ ಸುರೇಶ್‌ ಗೌಡ, ಸಿದ್ದರಾಮಯ್ಯ ಅವರು ಎರಡು ಬಾರಿ ಬಜೆಟ್‌ ಮಂಡನೆ ಮಾಡಿದ್ದಾರೆ. ಪ್ರತಿ ಬಾರಿ ಬಜೆಟ್‌ ಮಂಡನೆ ಮಾಡಿದ ಬಳಿಕವೂ ಸಂಪ್ರದಾಯದಂತೆ ಬೆಲೆ ಏರಿಕೆಯನ್ನು ಮಾಡಿಕೊಂಡು ಬಂದಿದ್ದಾರೆ, ಕಾಂಗ್ರೆಸ್‌ ಸರ್ಕಾರದಿಂದ ಯಾವುದೇ ಅಭಿವೃದ್ಧಿ ಕೆಲಸಗಳು ಆಗಿಲ್ಲ ಎಂದು ಕಿಡಿಕಾರಿದರು.

ಗುರುವಾರ ತುಮಕೂರಿನಲ್ಲಿ ಜನಾಕ್ರೋಶ ಯಾತ್ರೆ ಮಾಡಲು ಬಿಜೆಪಿ ತಯಾರಿ ಮಾಡ್ತಾ ಇದ್ದರೆ, ಇತ್ತ ಕಾಂಗ್ರೆಸ್‌ ಪಕ್ಷ  ಬಿಜೆಪಿ ಜನಾಕ್ರೋಶ ಯಾತ್ರೆ ವಿರುದ್ಧ ಆಕ್ರೋಶವನ್ನು ವ್ಯಕ್ತಪಡಿಸ್ತಾ ಇದ್ದಾರೆ. ಏನಂತ ಜನಾಕ್ರೋಶ ಯಾತ್ರೆ ಮಾಡುತ್ತಾರೆ, ಇದೆಲ್ಲಾ ಪೊಳ್ಳು, ಬಿಜೆಪಿ ಸರ್ಕಾರ ಇದ್ದಾಗ ಬೆಲೆ ಏರಿಕೆ ಆಗಿಲ್ವಾ, ಬಿಜೆಪಿ ಮಾಡುತ್ತಿರುವ ಪ್ರತಿಭಟನೆಗೆ ನಾವು ತಲೆಕೆಡಿಸಿಕೊಳ್ಳೋದಿಲ್ಲ. ರಾಜ್ಯ ಸರ್ಕಾರ ಸಮರ್ಪಕವಾಗಿ ನಡೆಯುತ್ತಿದೆ, ಬಿಜೆಪಿ ಆರೋಪ ಸರಿಯಲ್ಲ ಎಂದು ಕಾಂಗ್ರೆಸ್‌ ಮುಖಂಡ ಇಕ್ಬಾಲ್‌ ಅಹಮದ್‌ ಕಿಡಿಕಾರಿದ್ದಾರೆ.

ಇದೇ ವೇಳೆ ಹಿಂದೂಗಳ ಕೊಲೆಗೆ ಕಾಂಗ್ರೆಸ್‌ ಕುಮ್ಮಕ್ಕು ನೀಡುತ್ತಿದೆ ಎಂದು ಸುರೇಶ್‌ಗೌಡ ಆರೋಪಕ್ಕೆ ಇಕ್ಬಾಲ್‌ ಅಹಮದ್‌ ಪ್ರತಿಕ್ರಿಯೆ ನೀಡಿ, ಬಿಜೆಪಿಯವರು ಇಲ್ಲಸಲ್ಲದ ಆರೋಪ ಮಾಡುತ್ತಿದ್ದಾರೆಂದು ಕಿಡಿಕಾರಿದ್ದಾರೆ.

ಒಟ್ಟಿನಲ್ಲಿ ಬೆಲೆ ಏರಿಕೆ ವಿರುದ್ಧ ಬಿಜೆಪಿ ರಾಜ್ಯಾದ್ಯಂತ ಯಾತ್ರೆ ಕೈಗೊಂಡಿದ್ದು, ಅಂತಿಮ ಘಟ್ಟಕ್ಕೆ ತಲುಪಿದೆ. ಈ ನಡುವೆ ಬಿಜೆಪಿ ಯಾತ್ರೆಗೆ ಕಿಮ್ಮತ್ತು ಕೊಡದ ಕಾಂಗ್ರೆಸ್‌ ಮುಂದಿನ ದಿನಗಳಲ್ಲಿ ಯಾವ ರೀತಿ ಉತ್ತರ ನೀಡುತ್ತೆ ಅನ್ನೋದನ್ನು ಕಾದು ನೋಡಬೇಕಿದೆ.

Author:

...
Sushmitha N

Copy Editor

prajashakthi tv

share
No Reviews