ತುಮಕೂರು : ತುಮಕೂರಿನಲ್ಲಿ ವಿವಿಧ ಸಂಘಟನೆಗಳಿಂದ ಬೃಹತ್ ಪ್ರತಿಭಟನೆಯ ಕಿಚ್ಚು

ತುಮಕೂರು : 

ಕಾಶ್ಮೀರದ ಪಹಲ್ಗಾಮ್‌ನಲ್ಲಿ ನಡೆದ ಉಗ್ರರ ದಾಳಿ ಮತ್ತು ಸಿಇಟಿ ಪರೀಕ್ಷೆಯ ವೇಳೆ ವಿದ್ಯಾರ್ಥಿಗಳು ಹಾಕಿದ್ದ ಪವಿತ್ರ ಜನಿವಾರ ತೆಗೆಸಿದ ಘಟನೆಗಳನ್ನು ವಿರೋಧಿಸಿ ತುಮಕೂರಿನ ಟೌನ್ ಹಾಲ್ ವೃತ್ತದಲ್ಲಿ ಇಂದು ಹಿಂದೂ ಹಿತರಕ್ಷಣಾ ಸಮಿತಿ ಸೇರಿದಂತೆ ವಿವಿಧ ಹಿಂದೂ ಪರ ಸಂಘಟನೆಗಳ ನೇತೃತ್ವದಲ್ಲಿ ಪ್ರತಿಭಟನೆ ನಡೆಸಿದರು. ಇನ್ನು ಸಾವಿರಾರು ಪ್ರತಿಭಟನಾಕಾರರು ಟೌನ್ ಹಾಲ್ ವೃತ್ತದಲ್ಲಿ ಜಮಾಯಿಸಿದ್ದು, ಧ್ವಜಪತಾಕೆಗಳನ್ನು ಹಿಡಿದು ದೇಶ ಮತ್ತು ಧರ್ಮ ವಿರೋಧಿ ಘಟನೆಗಳ ವಿರುದ್ಧ ಘೋಷಣೆ ಕೂಗಿದರು.  ಪ್ರತಿಭಟನಾಕಾರರು ಟೌನ್ ಹಾಲ್ ವೃತ್ತದಿಂದ ಜಿಲ್ಲಾಧಿಕಾರಿ ಕಚೇರಿವರೆಗೆ ಕಾಲ್ನಡಿಗೆ ಮೂಲಕ ರ‍್ಯಾಲಿ ನಡೆಸಿದರು.

ಕಾಶ್ಮೀರದಲ್ಲಿ ಉಗ್ರರ ನಡೆಸಿದ ದಾಳಿಯು ಹೇಯ ಕೃತ್ಯವಾಗಿದೆ. ಅಂತಹ ಉಗ್ರರಿಗೆ ಕಠಿಣ ಶಿಕ್ಷೆಯಾಗಬೇಕು.  ಇನ್ನು ರಾಜ್ಯದಲ್ಲಿ ಪರೀಕ್ಷೆ ಬರೆಯಲು ಹೋದ ವಿದ್ಯಾರ್ಥಿಯ ಜನಿವಾರ ತೆಗೆಯುವ ಮೂಲಕ ಹಿಂದೂ ಧರ್ಮದ ಆಚಾರಗಳಿಗೆ ಅಪಮಾನ ಮಾಡಲಾಗಿದೆ ಎಂದು ಪ್ರತಿಭಟನಾಕಾರರು ಆಕ್ರೋಶ ವ್ಯಕ್ತಪಡಿಸಿದರು.

ಜಿಲ್ಲಾಧಿಕಾರಿ ಕಚೇರಿ ಮುಂಭಾಗದಲ್ಲಿ ಬೃಹತ್ ಸಮಾವೇಶ ನಡೆಸಿ, ಜಿಲ್ಲಾಧಿಕಾರಿಗೆ ಮನವಿ ಸಲ್ಲಿಸಿ ಶೀಘ್ರ ಕ್ರಮ ತೆಗೆದುಕೊಳ್ಳಬೇಕೆಂದು ಒತ್ತಾಯಿಸಲಾಯಿತು. ಪ್ರತಿಭಟನೆಯಲ್ಲಿ ತುಮಕೂರು ನಗರ ಶಾಸಕರು ಜಿ.ಬಿ. ಜ್ಯೋತಿಗಣೇಶ್ ಸೇರಿದಂತೆ ಹಲವಾರು ಪ್ರಮುಖ ಮುಖಂಡರು ಭಾಗವಹಿಸಿ, ತಮ್ಮ ಬೆಂಬಲವನ್ನು ವ್ಯಕ್ತಪಡಿಸಿದರು.

ಶಾಂತಿಯುತವಾಗಿ ಸಾಗಿದ ಈ ಪ್ರತಿಭಟನೆ ಮೂಲಕ ಹಿಂದುಪರ ಸಂಘಟನೆಗಳು ಧಾರ್ಮಿಕ ಭಾವನೆಗಳಿಗೆ ಗೌರವ ನೀಡುವ ಅಗತ್ಯತೆಯನ್ನು ಒತ್ತಿ ಹೇಳಿದರು. ಕೂಡಲೇ ಕಠಿಣ ಕ್ರಮ ಕೈಗೊಳ್ಳದಿದ್ದರೆ ಭವಿಷ್ಯದಲ್ಲಿ ಇನ್ನಷ್ಟು ತೀವ್ರ ಹೋರಾಟ ನಡೆಯಬಹುದೆಂದು ಮುನ್ನೆಚ್ಚರಿಕೆ ಕೂಡ ನೀಡಿದ್ದಾರೆ.

Author:

...
Sushmitha N

Copy Editor

prajashakthi tv

share
No Reviews